ಆನ್​​ಲೈನ್​ ವಹಿವಾಟು ಸಹವಾಸ ಎಚ್ಚರ !- ಹಸು ಮಾರಲು ಹೋಗಿ 1 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

Online Frauds: ನನಗೆ ಹಸು ಇಷ್ಟವಾಯಿತು, ಕೊಳ್ಳುತ್ತೇನೆ. ಆದರೆ ನಾನು ಭಾರತೀಯ ಸೇನೆಯಲ್ಲಿ ಇರುವುದರಿಂದ ಫೋನ್​​ಪೇ ಬಳಕೆ ಮಾಡುತ್ತಿಲ್ಲ. ಹಾಗಾಗಿ ನಾನೊಂದು QR ಕೋಡ್​ ಕಳಿಸುತ್ತೇನೆ. ಅದನ್ನು ಸ್ಕ್ಯಾನ್​ ಮಾಡಿದರೆ ನಿಮ್ಮ ಅಕೌಂಟ್​ಗೆ ನನ್ನ ಅಕೌಂಟ್​ನಿಂದ ಹಣ ಬರುತ್ತದೆ ಎಂದಿದ್ದ ವಂಚಕ.

ಆನ್​​ಲೈನ್​ ವಹಿವಾಟು ಸಹವಾಸ ಎಚ್ಚರ !- ಹಸು ಮಾರಲು ಹೋಗಿ 1 ಲಕ್ಷ ರೂಪಾಯಿ ಕಳೆದುಕೊಂಡ ಯುವಕ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 16, 2021 | 1:43 PM

ಭುವನೇಶ್ವರ್​: ನೀವೇನೇ ಹೇಳಿ, ಈ ಆನ್​ಲೈನ್​ ವಹಿವಾಟಿನಿಂದ ಉಪಯೋಗಗಳು ಎಷ್ಟೋ..ಅಷ್ಟೇ ಅಪಾಯವೂ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕಳೆದ ಕೆಲವು ವರ್ಷಗಳಿಂದ ಡಿಜಿಟಲ್​ ಬಳಕೆ ಜಾಸ್ತಿಯಾಗಿದೆ. ಹಣ ವರ್ಗಾವಣೆ, ಖರೀದಿ, ಮಾರಾಟ..ಹೀಗೆ ಅನೇಕ ವಿಚಾರಗಳಲ್ಲಿ ನಾವು ಆನ್​ಲೈನ್​ ಮೊರೆ ಹೋಗಿದ್ದೇವೆ. ಆದರೆ ಇನ್ನೊಂದೆಡೆ ಸೈಬರ್ ಕ್ರೈಂಗಳೂ ಅಷ್ಟೇ ಹೆಚ್ಚಾಗಿವೆ. ಆನ್​ಲೈನ್​ನಲ್ಲಿ ವಂಚನೆ ಮಾಡುವವರ ಗುಂಪು ಸದ್ದಿಲ್ಲದೆ ಬೆಳೆಯುತ್ತಿದೆ. ಈಗ ಅಂಥದ್ದೇ ಒಂದು ಪ್ರಕರಣ ಒಡಿಶಾದಲ್ಲಿ ನಡೆದಿದ್ದು ವರದಿಯಾಗಿದೆ. ಆನ್​ಲೈನ್​ನಲ್ಲಿ ಹಸು ಮಾರಲು ಹೋದ ಯುವಕನಿಗೆ ಬರೋಬ್ಬರಿ 1 ಲಕ್ಷ ರೂ. ವಂಚನೆಯಾದ ಘಟನೆ ಇದು !

ದೇಬಾಸಿಶ್​ ಸಾಹೂ ಎಂಬುವರು ತಮ್ಮ ಸದೃಢ ಹಸುವನ್ನು ಮಾರಾಟ ಮಾಡಲು ನಿಶ್ಚಯಿಸಿದರು. ಇದಕ್ಕೆ ಆನ್​ಲೈನ್​ ವೇದಿಕೆ ಆಯ್ಕೆ ಮಾಡಿಕೊಂಡ ಅವರು, ಕೃಷಿಫೈ (ಕೃಷಿಗೆ ಸಂಬಂಧಪಟ್ಟ ಆ್ಯಪ್​)ನಲ್ಲಿ ಜಾಹೀರಾತನ್ನೂ ನೀಡಿದರು. ಅದಾದ ಬಳಿಕ ಅವರಿಗೆ, ತನ್ನನ್ನು ಮಂಜಿತ್​ ಎಂದು ಪರಿಚಯಿಸಿಕೊಂಡು ಒಬ್ಬ ಕರೆ ಮಾಡಿದ್ದ. ಅಷ್ಟೇ ಅಲ್ಲ, ತಾನು ಸೇನೆಯಲ್ಲಿ ಅಧಿಕಾರಿಯಾಗಿದ್ದೇನೆ ಎಂದೂ ದೇಬಾಸಿಶ್​ಗೆ ಆತ ಹೇಳಿದ್ದ. ಇಬ್ಬರ ನಡುವೆಯೂ ಮಾತುಕತೆ ನಡೆದು ವ್ಯವಹಾರ 20,000ಕ್ಕೆ ಕುದುರಿತು. ಅಂದರೆ ದೇಬಾಸಿಶ್​ ತನ್ನ ಹಸುವನ್ನು ಮಂಜಿತ್​ಗೆ 20,000 ರೂಪಾಯಿಗೆ ಮಾರಾಟ ಮಾಡಲು ಒಪ್ಪಿಕೊಂಡ.

ನನಗೆ ಹಸು ಇಷ್ಟವಾಯಿತು, ಕೊಳ್ಳುತ್ತೇನೆ. ಆದರೆ ನಾನು ಭಾರತೀಯ ಸೇನೆಯಲ್ಲಿ ಇರುವುದರಿಂದ ಫೋನ್​​ಪೇ ಬಳಕೆ ಮಾಡುತ್ತಿಲ್ಲ. ಹಾಗಾಗಿ ನಾನೊಂದು QR ಕೋಡ್​ ಕಳಿಸುತ್ತೇನೆ. ಅದನ್ನು ಸ್ಕ್ಯಾನ್​ ಮಾಡಿದರೆ ನಿಮ್ಮ ಅಕೌಂಟ್​ಗೆ ನನ್ನ ಅಕೌಂಟ್​ನಿಂದ ಹಣ ಬರುತ್ತದೆ ಎಂದು ಹೇಳಿದ. ಆತ ಎಷ್ಟೆಂದರೂ ಸೇನಾ ಅಧಿಕಾರಿ ಎಂದು ಸಂಪೂರ್ಣವಾಗಿ ನಂಬಿದ್ದ ಸಾಹೂ, ಹಿಂದೆಮುಂದೆ ಯೋಚಿಸದೆ ಒಪ್ಪಿಕೊಂಡ. ಅದಾದ ಬಳಿಕ ಮಂಜಿತ್​ ಒಟ್ಟು 5 ಬಾರಿ ಸಾಹೂ ಮೊಬೈಲ್​ಗೆ ಕ್ಯೂಆರ್​ ಕೋಡ್​ ಕಳಿಸಿದ. ಒಟ್ಟು 5 QR ಕೋಡ್​​ಗಳನ್ನೂ ಸಾಹೂ ಸ್ಕ್ಯಾನ್​ ಮಾಡಿದ್ದರಿಂದ 5 ಬಾರಿ 20,000 ರೂ.ನಂತೆ 1 ಲಕ್ಷ ರೂಪಾಯಿ ಸಾಹೂ ಅಕೌಂಟ್​​ನಿಂದ ಮಂಜಿತ್​ ಅಕೌಂಟ್​ಗೆ ವರ್ಗಾವಣೆ ಆಗಿದೆ. ಅಷ್ಟಾದ ಮೇಲೆ ತಾನು ಮೋಸ ಹೋಗಿದ್ದು ಸಾಹೂಗೆ ಅರ್ಥವಾಗಿದೆ.

ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಸಾಹೂ, ಮೊದಲು ನನಗೆ 5 ರೂಪಾಯಿಯ ಕ್ಯೂಆರ್​ ಸ್ಕ್ಯಾನ್​ ಕೋಡ್​ ಕಳಿಸಿದ. ನಾನು ಸ್ಕ್ಯಾನ್​ ಮಾಡುತ್ತಿದ್ದಂತೆ 5 ರೂ.ಕ್ರೆಡಿಟ್​ ಆಯಿತು. ಅದಾದ ಮೇಲೆ ಇನ್ನೊಂದು ಕಳಿಸಿದ. ಆಗ ನಾನು ಸ್ಕ್ಯಾನ್​ ಮಾಡುತ್ತಿದ್ದಂತೆ 20,000ರೂ. ನನ್ನ ಅಕೌಂಟ್​ನಿಂದಲೇ ಡೆಬಿಟ್​ ಆಯಿತು. ಅದನ್ನು ನಾನವನಿಗೆ ಹೇಳಿದ್ದಕ್ಕೆ, ಇದು ಟೆಕ್ನಿಕಲ್​ ಸಮಸ್ಯೆ ಎಂದು ಹೇಳಿದ. ಹೀಗೆ 1 ಲಕ್ಷ ರೂ.ನನ್ನ ಅಕೌಂಟ್​​ನಿಂದ ಡೆಬಿಟ್​ ಆಗಿದೆ ಎಂದು ತಿಳಿಸಿದ್ದಾರೆ. ಭರತ್​​ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆನ್​​ಲೈನ್​​ನಲ್ಲಿ ಹಣವಹಿವಾಟು ಮಾಡುವಾಗ ತುಂಬ ಎಚ್ಚರಿಕೆಯಿಂದ ಇರಿ ಎಂದು ದೇಬಾಸಿಶ್​ ಸಾಹೂ ಒಂದು ವಿಡಿಯೋ ಮೂಲಕ ಸಾಮಾನ್ಯ ಜನರಿಗೆ ಮನವಿಯನ್ನೂ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!

13ವರ್ಷದ ಬಾಲಕಿಯ 8 ತಿಂಗಳ ಗರ್ಭ ತೆಗೆಸಲು ಅನುಮತಿ ನೀಡದ ಬಾಂಬೆ ಹೈಕೋರ್ಟ್​; ‘ಒಂದು ಮಗು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ’ ಎಂದ ವಕೀಲ

Published On - 12:58 pm, Tue, 16 March 21