ದುಬಾರಿಯಾಗಲಿದೆ ತಾಜ್ಮಹಲ್ ವೀಕ್ಷಣೆ; ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಿಸಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ
ಹೊಸ ನಿಯಮ ಅನ್ವಯ ಆದ ತಕ್ಷಣದಿಂದ ಮುಖ್ಯ ಗುಮ್ಮಟ ಪ್ರವೇಶಿಸಲು ಇಚ್ಛಿಸುವ ದೇಶೀಯ ಪ್ರವಾಸಿಗರು ಒಟ್ಟೂ 480 ರೂ. ಮತ್ತು ವಿದೇಶೀ ಪ್ರವಾಸಿಗರು 1600 ರೂ. ಪ್ರವೇಶ ಶುಲ್ಕ ನೀಡಬೇಕು.
ಆಗ್ರಾ: ತಾಜ್ಮಹಲ್ (Taj Mahal ) ಪ್ರವಾಸಿಗರಿಗೆ ಪ್ರವೇಶ ಶುಲ್ಕವನ್ನು ಹೆಚ್ಚು ಮಾಡಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ನಿರ್ಧಾರ ಮಾಡಿದೆ.ಇಷ್ಟುದಿನ ದೇಶೀಯ ಅಂದರೆ ನಮ್ಮ ದೇಶದ ಪ್ರವಾಸಿಗರು ತಾಜ್ಮಹಲ್ ವೀಕ್ಷಣೆಗೆ ಹೋಗುವಾಗ ಪ್ರವೇಶ ಶುಲ್ಕವೆಂದು 50 ರೂ.ಕೊಡಬೇಕಿತ್ತು. ಹಾಗೇ ವಿದೇಶೀ ಪ್ರವಾಸಿಗರು 1100 ರೂ.ನೀಡಬೇಕಿತ್ತು. ಆದರೆ ಇದೀಗ ಎರಡೂ ವಿಧದ ಪ್ರವಾಸಿಗರ ಪ್ರವೇಶ ಶುಲ್ಕವನ್ನೂ ಹೆಚ್ಚಿಸುವ ಪ್ರಸ್ತಾಪವನ್ನು ಎಡಿಎ ಇಟ್ಟಿದೆ.
ಇನ್ನು ಮುಂದೆ ತಾಜ್ಮಹಲ್ಗೆ ಭೇಟಿ ನೀಡಲಿರುವ ದೇಶೀಯ ಪ್ರವಾಸಿಗರ ಪ್ರವೇಶ ಶುಲ್ಕವನ್ನು 80 ರೂ.ಗೆ ಏರಿಸಲು, ವಿದೇಶಿ ಪ್ರವಾಸಿಗರಿಗೆ ಎಂಟ್ರಿ ಶುಲ್ಕವನ್ನು 1200 ರೂ.ಗೆ ಏರಿಕೆ ಮಾಡುವ ಬಗ್ಗೆ ಎಡಿಎ ಪ್ರಸ್ತಾಪದಲ್ಲಿ ಉಲ್ಲೇಖಿಸಿದ್ದು, ಇನ್ನು ತಾಜ್ನ ಮುಖ್ಯ ಗುಮ್ಮಟ ಪ್ರವೇಶ ಮಾಡುವವರಿಗೆ 200 ರೂ.ಪ್ರವೇಶ ಶುಲ್ಕವಿಧಿಸಲು ನಿರ್ಧಾರ ಮಾಡಿದೆ. ತಾಜ್ಮಹಲ್ನ ಮುಖ್ಯ ಗುಮ್ಮಟವನ್ನು ಪ್ರವೇಶಿಸುವವರಿಗೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಈಗಾಗಲೇ 200 ರೂ.ವಿಧಿಸುತ್ತಿದ್ದು, ಅದರ ಹೊರತಾಗಿ ಈಗ ಆಗ್ರಾ ಅಭಿವೃದ್ಧಿ ಪ್ರಾಧಿಕಾರವೂ 200 ರೂ. ಶುಲ್ಕ ನಿಗದಿಪಡಿಸಲು ಮುಂದಾಗಿದೆ.
ಈ ಹೊಸ ನಿಯಮ ಅನ್ವಯ ಆದ ತಕ್ಷಣದಿಂದ ಮುಖ್ಯ ಗುಮ್ಮಟ ಪ್ರವೇಶಿಸಲು ಇಚ್ಛಿಸುವ ದೇಶೀಯ ಪ್ರವಾಸಿಗರು ಒಟ್ಟೂ 480 ರೂ. ಮತ್ತು ವಿದೇಶೀ ಪ್ರವಾಸಿಗರು 1600 ರೂ. ಪ್ರವೇಶ ಶುಲ್ಕ ನೀಡಬೇಕು. ಆದರೆ ತಾಜ್ಮಹಲ್ ಪ್ರವೇಶ ಟಿಕೆಟ್ ಬೆಲೆ ಹೆಚ್ಚುತ್ತಿದೆ ಎಂಬುದನ್ನು ಕೇಳುತ್ತಿದ್ದಂತೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯರು ತಮ್ಮ ಪರಂಪರೆಯ ಸೌಂದರ್ಯ ನೋಡಲು ಇಷ್ಟು ಪ್ರಮಾಣದ ಹಣ ತುಂಬಬೇಕಾಗಿ ಬಂದಿರುವುದು ಬೇಸರದ ಸಂಗತಿ. ಹೀಗಾದರೆ ತಾಜ್ಮಹಲ್ಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಗ್ರಾ: ವಿಶ್ವ ಪ್ರಸಿದ್ಧ ತಾಜ್ಮಹಲ್ಗೆ ಬಾಂಬ್ ಬೆದರಿಕೆ; ಪ್ರವಾಸಿಗರು ಹೊರಕ್ಕೆ – ಹುಸಿ ಕರೆ ಮಾಡಿದ ವ್ಯಕ್ತಿ ಅಂದರ್
ತಾಜ್ಮಹಲ್ ಮುಂದೆ ಕೇಸರಿ ಧ್ವಜ ಹಾರಿಸಿದ ಹಿಂದೂ ಜಾಗರಣ್ ಮಂಚ್ ಸದಸ್ಯರ ಬಂಧನ