Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮರಾವತಿ ಭೂಹಗರಣ ಪ್ರಕರಣ: ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್

N Chandrababu Naidu: ಕೃಷ್ಣಾ ಮತ್ತು ಗುಂಟೂರ್ ಜಿಲ್ಲೆಯ ಮಧ್ಯೆ ಇರುವ ನಿರ್ದಿಷ್ಟ ಜಾಗವನ್ನು ರಾಜ್ಯದ ರಾಜಧಾನಿಯಾಗಿ ಮಾಡಲಿದ್ದಾರೆ ಎಂಬ ಸೂಚನೆ ಟಿಡಿಪಿ ಸಚಿವರು, ನಾಯಕರು ಮತ್ತು ಪಕ್ಷದ ಸದಸ್ಯರಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಅವರು ಕಡಿಮೆ ಬೆಲೆಗೆ  ಜಮೀನುಗಳನ್ನು ಖರೀದಿಸಿದ್ದರು ಎಂದು ಸಿಐಡಿ ಆರೋಪಿಸಿದೆ.

ಅಮರಾವತಿ ಭೂಹಗರಣ ಪ್ರಕರಣ: ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್
ಚಂದ್ರಬಾಬು ನಾಯ್ಡು
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 16, 2021 | 2:35 PM

ಹೈದರಾಬಾದ್: ಅಮರಾವತಿ ಭೂಹಗರಣ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾರ್ಚ್ 23ಕ್ಕಿಂತ ಮುನ್ನ ಸಿಐಡಿ ಕಚೇರಿಗೆ ಹಾಜರಾಗಲು ಸಿಆರ್​ಪಿಸಿ ಸೆಕ್ಷನ್ 41ರ ಅಡಿಯಲ್ಲಿ ನೋಟಿಸ್ ನೀಡಿದೆ. ಹೈದರಾಬಾದ್​ನಲ್ಲಿರುವ ನಾಯ್ಡು ಅವರ ಮನೆಗೆ ಹೋಗಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಧಿಕಾರವಧಿಯಲ್ಲಿ ನಗರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಪಿ.ನಾರಾಯಣ ಅವರಿಗೂ ಸಿಐಡಿ ನೋಟಿಸ್ ನೀಡಿದೆ. ವೈಎಸ್ಆರ್ ಸಿಪಿ ಸರ್ಕಾರ ಪ್ರತೀಕಾರ ತೀರಿಸುತ್ತಿದೆ ಎಂದು ಹೇಳಿದ ಟಿಡಿಪಿ ವಕ್ತಾರ ಬಿ.ಉಮಾಮಹೇಶ್ವರ ರಾವ್, ಈ ಆರೋಪವನ್ನು ಅಲ್ಲಗೆಳೆದಿದ್ದಾರೆ. ಕೃಷ್ಣಾ ಮತ್ತು ಗುಂಟೂರ್ ಜಿಲ್ಲೆಯ ಮಧ್ಯೆ ಇರುವ ನಿರ್ದಿಷ್ಟ ಜಾಗವನ್ನು ರಾಜ್ಯದ ರಾಜಧಾನಿಯಾಗಿ ಮಾಡಲಿದ್ದಾರೆ ಎಂಬ ಸೂಚನೆ ಟಿಡಿಪಿ ಸಚಿವರು, ನಾಯಕರು ಮತ್ತು ಪಕ್ಷದ ಸದಸ್ಯರಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಅವರು ಕಡಿಮೆ ಬೆಲೆಗೆ  ಜಮೀನುಗಳನ್ನು ಖರೀದಿಸಿದ್ದರು ಎಂದು ಸಿಐಡಿ ಆರೋಪಿಸಿದೆ. ಭೂ ಹಗರಣ ಪ್ರಕರಣದಲ್ಲಿ ಟಿಡಿಪಿ ನಾಯಕರು ಮತ್ತು ಪಕ್ಷದೊಂದಿಗೆ ಒಡನಾಟವಿರುವ ರಿಯಲ್ ಎಸ್ಟೇಟ್ ಡೆವಲಪರ್​ಗಳ ಮೇಲೆ 20 ಪ್ರಕರಣಗಳನ್ನು ಸಿಐಡಿ ದಾಖಲಿಸಿದೆ. ಆದಾಗ್ಯೂ, ಜನವರಿ 19ಕ್ಕೆ ಈ ಹಗರಣದ ಆರೋಪಕ್ಕೆ ಸಾಕ್ಷ್ಯಗಳಿಲ್ಲ ಎಂದು ಹೇಳಿ ಆಂಧ್ರ ಪ್ರದೇಶ ಹೈಕೋರ್ಟ್ ಪ್ರಕರಣ ತಳ್ಳಿಹಾಕಿತ್ತು.

ಜೂನ್ 2019ರಲ್ಲಿ ಆಂಧ್ರ ಪ್ರದೇಶ ಸರ್ಕಾರವು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ, ಸರ್ಕಾರ ಅಳವಡಿಸಿಕೊಂಡ ನೀತಿಗಳು, ಭ್ರಷ್ಟಾಚಾರ ಆರೋಪ, ಸ್ವಜನಪಕ್ಷಪಾತ ಮತ್ತು ಸಾರ್ವಜನಿಕ ನಿಧಿಗಳ ಅವ್ಯವಹಾರ ಮೊದಲಾದ ಆರೋಪಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ವಹಿಸಿ, ವಿವರವಾದ ವರದಿಯನ್ನು ಸಲ್ಲಿಸಿತು. ಅಮರಾವತಿ ರಾಜಧಾನಿ ಪ್ರದೇಶ ಎಂದು ಕರೆಯಲ್ಪಡುವ ಹೊಸ ರಾಜಧಾನಿ ಪ್ರದೇಶದ ಅಧ್ಯಯನಕ್ಕೆ ರಾಜ್ಯ ಒತ್ತು ನೀಡಿತ್ತು.

ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿದ ಉಪಸಮಿತಿಯು ಕಳೆದ ವರ್ಷ ಡಿಸೆಂಬರ್ 12ರಂದು ವರದಿ ಸಲ್ಲಿಸಿತ್ತು. ಹಿಂದಿನ ಸರ್ಕಾರದ ವ್ಯವಹಾರಗಳ ಮುಖ್ಯಸ್ಥರು ಹೊಸ ಸ್ಥಳವನ್ನು ಮೊದಲೇ ನಿರ್ಧರಿಸಲು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು . ಅವರ ಕಂಪನಿಗಳು ಮತ್ತು ವ್ಯವಹಾರಗಳು, ಕುಟುಂಬ ಸದಸ್ಯರು ಅಥವಾ ರಾಜಕೀಯ ಪಕ್ಷದ ಸದಸ್ಯರಿಗೆ ಅನ್ಯಾಯವಾಗಿ ಮತ್ತು ಕಾನೂನುಬಾಹಿರವಾಗಿ ಲಾಭ ಪಡೆಯಲು ಭೂಮಿಯನ್ನು ಖರೀದಿಸಿದರು. ಮೂಲಸೌಕರ್ಯಗಳನ್ನು ಅವರ ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದರು. ಇದಲ್ಲದೆ, ಅಧಿಕಾರಿಗಳು ತಮ್ಮ ಪ್ರತಿಜ್ಞೆಯನ್ನು ಉಲ್ಲಂಘಿಸಿ, ರಾಜಧಾನಿ ಸ್ಥಳದ ಮಾಹಿತಿಯನ್ನು ತಮ್ಮ ಸಹಚರರಿಗೆ ಬಹಿರಂಗಪಡಿಸಿದರು ಎಂದು ವರದಿಯಲ್ಲಿ ಹೇಳಿತ್ತು.

ಸಚಿವ ಸಂಪುಟದ ಉಪಸಮಿತಿಯು  ಪಿತೂರಿ, ನಕಲಿ ದಾಖಲೆಗಳನ್ನು ತಯಾರಿಸುವುದು ಮತ್ತು ದಾಖಲೆಗಳನ್ನು ತಿರುಚುವ ಮೂಲಕ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಿಂದಿನ ಸರ್ಕಾರವು ಅನುಸರಿಸಿದ್ದ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಹಲವಾರು ಅವ್ಯವಹಾರಗಳನ್ನು ಪತ್ತೆ ಹಚ್ಚಿತ್ತು. ಈ ವ್ಯವಹಾರಗಳು ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆ 1988, ಬೆನಾಮಿ ವಹಿವಾಟು (ನಿಷೇಧ) ಕಾಯ್ದೆ 1988, ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧಗಳಾಗಿವೆ ಎಂದು ವರದಿಯಲ್ಲಿ ಹೇಳಿತ್ತು.

ಈ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಯಿತು. ಡಿಸೆಂಬರ್ 27, 2019 ರಂದು ಉಪಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ವೈಎಸ್ಆರ್ ಸಿಪಿ ಸರ್ಕಾರವು ಚಂದ್ರಬಾಬು ನಾಯ್ಡು, ಅವರ ಪುತ್ರ ಎನ್ ಲೋಕೇಶ್ ಮತ್ತು ಆರು ಇತರ ಟಿಡಿಪಿ ನಾಯಕರು ಗುಂಟೂರು ಜಿಲ್ಲೆಯ ಒಂದು ಪ್ರದೇಶದಲ್ಲಿ ಭೂ ಹಗರಣ ಮಾಡಿದೆ ಎಂದು ಆರೋಪಿಸಿತು. ಇದಾಗಿ ಆರು ತಿಂಗಳ ನಂತರ ಅಮರಾವತಿಯನ್ನು ರಾಜಧಾನಿಯಾಗಿ ಘೋಷಿಸಿತು. ಔಪಚಾರಿಕ ಘೋಷಣೆಗೆ ಮುನ್ನ ರಾಜಧಾನಿ ಪ್ರದೇಶದಲ್ಲಿ ಜಮೀನು ಖರೀದಿಸಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸರ್ಕಾರ ಹೇಳಿರುವುದಾಗಿ ಉಪ ಸಮಿತಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭೂಹಗರಣದಲ್ಲಿ ನಾರಾ ಚಂದ್ರಬಾಬು ನಾಯ್ಡು, ವೆಮುರು ರವಿ ಕುಮಾರ್ ಪ್ರಸಾದ್ (ನಾರಾ ಲೋಕೇಶ್ ಅವರ ಆಪ್ತ), ಮಾಜಿ ಸಚಿವೆ ಪರಿತಲಾ ಸುನಿತಾ, ಮಾಜಿ ಟಿಡಿಪಿ ಶಾಸಕ ಜಿವಿಎಸ್ ಆಂಜನೇಯುಲು, ಉದ್ಯಮಿ ಲಿಂಗಮನೇನಿ ರಮೇಶ್, ಟಿಡಿಪಿ ಶಾಸಕ ಪಯವುಲು ಕೇಶವ್, ಟಿಡಿಪಿಯ ಮಾಜಿ ವಕ್ತಾರ ಲಂಕಾ ದಿನಕರ್, ಟಿಡಿಪಿ ನಾಯಕ ಧುಲಿಪಲ್ಲಾ ನರೇಂದ್ರ, ಕಂಬಂಪತಿ ರಾಮಮೋಹನ್ ರಾವ್, ಪುಟ್ಟ ಮಹೇಶ್ ಯಾದವ್ ಅವರ ಹೆಸರು ಕೇಳಿ ಬಂದಿತ್ತು.  ಆಂಧ್ರ ಪ್ರದೇಶದ ಮಾಜಿ ಅಡ್ವೊಕೇಟ್ ಜನರಲ್ ದಮ್ಮಲಪಟಿ ಶ್ರೀನಿವಾಸ್ ಅವರು ಗುಂಟೂರು ಜಿಲ್ಲೆಯಲ್ಲಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪದ ಮೇರೆಗೆ 2020 ಸೆಪ್ಟೆಂಬರ್ 15ರಂದು ಎಫ್ಐಆರ್ ದಾಖಲಾಗಿತ್ತು. ಆದಾಗ್ಯೂ 2021 ಜನವರಿ 19ರಂದು ಭೂಹಗರಣ ಆರೋಪದಡಿಯಲ್ಲಿ ಸಿಐಡಿ ದಾಖಲಿಸಿದ ಪ್ರಕರಣಗಳನ್ನು ಹೈಕೋರ್ಟ್ ವಜಾಮಾಡಿತ್ತು.

ಇದನ್ನೂ ಓದಿ:  N Chandrababu Naidu: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ವಶಕ್ಕೆ ಪಡೆದ ಪೊಲೀಸರು

ಚಂದ್ರಬಾಬು ನಾಯ್ಡು ಅಮರಾವತಿ ಕನಸಿಗೆ ಕೊಡಲಿ ಏಟು ಕೊಟ್ಟ ಸಿಎಂ ಜಗನ್‌ ರೆಡ್ಡಿ

Published On - 11:59 am, Tue, 16 March 21