ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 24,492 ಜನರಿಗೆ ಕೊರೊನಾ ಪಾಸಿಟಿವ್​

ಸದ್ಯ ದೇಶದಲ್ಲಿ 2,23,432 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಸೋಂಕಿತರ ಮೇಲೆ ತೀವ್ರ ನಿಗಾವಹಿಸಿದೆ. ಕೊರೊನಾ ಸೋಂಕಿನಿಂದ ಈವರೆಗೆ 1,10,27,543 ಜನರು ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆ ಎಂದೆನಿಸಿದರೂ ಎರಡನೇ ಅಲೆ ಆರಂಭವಾದರೆ ಪರಿಣಾಮ ತೀವ್ರವಾಗಿರಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 24,492 ಜನರಿಗೆ ಕೊರೊನಾ ಪಾಸಿಟಿವ್​
ಸಾಂದರ್ಭಿಕ ಚಿತ್ರ
Follow us
Skanda
| Updated By: guruganesh bhat

Updated on: Mar 16, 2021 | 10:56 AM

ದೆಹಲಿ: ಭಾರತದಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಹೆಚ್ಚುತ್ತಿದ್ದು, ಸೋಂಕಿತರ ಪ್ರಮಾಣ ನಿಧಾನವಾಗಿ ಏರುಗತಿಯಲ್ಲಿ ಸಾಗಲಾರಂಭಿಸಿದೆ. ಕಳೆದ 24 ಗಂಟೆಯಲ್ಲಿ ದೇಶದ 24,492 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,14,09,831ಕ್ಕೆ ಏರಿಕೆ ಆಗಿದೆ. ಕಳೆದೊಂದು ದಿನದಲ್ಲಿ ಒಟ್ಟು 131 ಜನ ಸೋಂಕಿತರು ಸಾವಿಗೀಡಾಗುವ ಮೂಲಕ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 1,58,856ಕ್ಕೆ ತಲುಪಿದೆ.

ಸದ್ಯ ದೇಶದಲ್ಲಿ 2,23,432 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಸೋಂಕಿತರ ಮೇಲೆ ತೀವ್ರ ನಿಗಾವಹಿಸಿದೆ. ಕೊರೊನಾ ಸೋಂಕಿನಿಂದ ಈವರೆಗೆ 1,10,27,543 ಜನರು ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆ ಎಂದೆನಿಸಿದರೂ ಎರಡನೇ ಅಲೆ ಆರಂಭವಾದರೆ ಪರಿಣಾಮ ತೀವ್ರವಾಗಿರಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ಎರಡು ತಿಂಗಳು ಪೂರೈಸುತ್ತಿದ್ದು, ಈವರೆಗೆ 3,29,47,432 ಡೋಸ್ ಕೊರೊನಾ ಲಸಿಕೆಯನ್ನು ನೀಡಲಾಗಿದೆ.

ಅಂತೆಯೇ ನಿನ್ನೆ ಒಂದೇ ದಿನ 8,73,350 ಕೊವಿಡ್​ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಮೂಲಕ ಇದುವರೆಗೆ ಒಟ್ಟು 22,82,80,763 ಮಾದರಿಗಳನ್ನು ಪರಿಶೀಲಿಸಿದಂತಾಗಿದೆ. ಕೊವಿಡ್​ 19 ಪರೀಕ್ಷೆಯ ಬಗ್ಗೆ ಐಸಿಎಂಆರ್​ ಈ ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿದ್ದು, ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಏರುತ್ತಿರುವುದು ಸ್ಪಷ್ಟವಾಗಿದೆ. ಕೊರೊನಾ ಎರಡನೇ ಅಲೆ ಭೀತಿಯ ಬಗ್ಗೆ ಎಲ್ಲಾ ರಾಜ್ಯಗಳು ಈಗಾಗಲೇ ಕಟ್ಟೆಚ್ಚರ ವಹಿಸುತ್ತಿದ್ದು, ಮಾರ್ಚ್​ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕೊರೊನಾ ಬಗ್ಗೆ ತೀವ್ರ ನಿಗಾ ವಹಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಎರಡನೇ ಅಲೆ ತಡೆಯಲು ಜನರೇ ಎಚ್ಚೆತ್ತುಕೊಳ್ಳಬೇಕು. ಜಾತ್ರೆ, ಹಬ್ಬ, ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು, ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿ ಪಾಲಿಸಬೇಕು. ಲಾಕ್​ಡೌನ್​ನಂತಹ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇಚ್ಛಿಸುವುದಿಲ್ಲ. ಆದರೆ, ಜನ ಮೈಮರೆತು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿದರೆ ನಾವು ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ 20ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪತ್ತೆ 

ಇಂದಿನಿಂದ ಮಾಸ್ಕ್​ ಕಡ್ಡಾಯ, ಯಾವುದೇ ಲಾಕ್​ಡೌನ್​ ಇಲ್ಲ: ಸಿಎಂ ಯಡಿಯೂರಪ್ಪ ಘೋಷಣೆ