AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

13ವರ್ಷದ ಬಾಲಕಿಯ 8 ತಿಂಗಳ ಗರ್ಭ ತೆಗೆಸಲು ಅನುಮತಿ ನೀಡದ ಬಾಂಬೆ ಹೈಕೋರ್ಟ್​; ‘ಒಂದು ಮಗು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ’ ಎಂದ ವಕೀಲ

ಬರುಬರುತ್ತ ಬಾಲಕಿಯ ಹೊಟ್ಟೆ ಜಾಸ್ತಿ ಉಬ್ಬುತ್ತಿದ್ದಂತೆ ಅನುಮಾನ ಬಂದು ವಿಚಾರ ಮಾಡಿದ ಪಾಲಕರು ಅಕ್ಷರಶಃ ಶಾಕ್​ ಆಗಿದ್ದರು. ಫೆ.23ರಂದು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಆತನ ವಿರುದ್ಧ ಇದೀಗ IPC ಮತ್ತು Pocso ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

13ವರ್ಷದ ಬಾಲಕಿಯ 8 ತಿಂಗಳ ಗರ್ಭ ತೆಗೆಸಲು ಅನುಮತಿ ನೀಡದ ಬಾಂಬೆ ಹೈಕೋರ್ಟ್​; ‘ಒಂದು ಮಗು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ’ ಎಂದ ವಕೀಲ
ಬಾಂಬೆ ಹೈಕೋರ್ಟ್​
Lakshmi Hegde
|

Updated on: Mar 16, 2021 | 12:25 PM

Share

ಮುಂಬೈ: ಇವಳು 13 ವರ್ಷದ ಬಾಲಕಿ. 8 ತಿಂಗಳ ಗರ್ಭಿಣಿ. ಆ ಹುಡುಗಿಯ ತಂದೆಗೆ ತನ್ನ ಮಗಳ ಗರ್ಭಪಾತ ಮಾಡಿಸಬೇಕು. ಹೊಟ್ಟೆಯೊಳಗಿನ ಕೂಸನ್ನು ತೆಗೆಸಿಬಿಡಬೇಕು ಎಂಬ ಕಾತರ. ಆದರೆ 1971ರ ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿ ಅನ್ವಯ 20 ವಾರಗಳ (5 ತಿಂಗಳ) ನಂತರ ಮಗುವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶವಿಲ್ಲ. 5ತಿಂಗಳು ಕಳೆದ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಲು ಯಾವುದೇ ವೈದ್ಯರು ಮುಂದೆಬರುವುದಿಲ್ಲ. ಅವರಿಗೂ ಕಾನೂನಿನ ಬಗ್ಗೆ ಹೆದರಿಕೆ ಇರುತ್ತದಲ್ಲ !

ಇಂಥ ಕಗ್ಗಂಟಿನ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​ ಕೊನೆಗೂ 13 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅವಕಾಶ ಕೊಡಲಿಲ್ಲ. ಬಾಲಕಿಯ ಆರೋಗ್ಯದ ಬಗ್ಗೆ ತಪಾಸಣೆ, ಅವಳ ಗರ್ಭದ ಪರೀಕ್ಷೆಗಾಗಿ ವೈದ್ಯರ ಪ್ಯಾನಲ್​​ನ್ನೂ ನಿಯೋಜಿಸಿತ್ತು. ಜೆ.ಜೆ. ಆಸ್ಪತ್ರೆಯ ವೈದ್ಯರ ಪ್ಯಾನೆಲ್​ ಹೈಕೋರ್ಟ್​ಗೆ ವರದಿ ನೀಡಿ, ಈಗ ಹುಡುಗಿಯ ಗರ್ಭವನ್ನು ಕೊನೆಗಾಣಿಸಲು ಹೋದರೆ ಅವಧಿಗೂ ಪೂರ್ವ ಒಂದು ಮಗುವಿನ ಜನನವಾಗುತ್ತದೆ. ಇದೂ ಆ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಹೇಳಿತ್ತು. ಅದನ್ನು ಆಲಿಸಿದ ನ್ಯಾಯಮೂರ್ತಿ ಸೈಯದ್​ ಮತ್ತು ಮಾಧವ್​ ಜಮ್ದಾರ್​ ಅವರಿದ್ದ ಪೀಠ, ಹುಡುಗಿಯ ಗರ್ಭಪಾತವನ್ನು ನಿರಾಕರಿಸಿದ್ದಾರೆ. ಅಲ್ಲದೆ, ನನ್ನ ಮಗಳ ಬಸಿರನ್ನು ತೆಗೆಯಲು ಅವಕಾಶ ಕೊಡಿ ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದ ತಂದೆಗೆ, ‘ನೀವು ತುಂಬ ತಡಮಾಡಿ ಬಂದಿದ್ದೀರಿ..ಈಗ ಅವಕಾಶ ಇಲ್ಲ’ ಎಂದೂ ಹೇಳಿದ್ದಾರೆ.

ಬಾಲಕಿ ಗರ್ಭಧರಿಸಲು ಕಾರಣರಾರು? ಇದೊಂದು ನೋವಿನ ಸಂಗತಿ. ತನ್ನ ಮಗಳು ಗರ್ಭಿಣಿಯಾಗಲು ಯಾರು ಕಾರಣ ಎಂಬುದನ್ನು ಆಕೆಯ ಅಪ್ಪ, ಅರ್ಜಿಯಲ್ಲಿ ವಿವರಿಸಿದ್ದಾರೆ. ‘ನನ್ನ ಹಿರಿಯ ಮಗನಿಗೆ ಮೂರ್ಛೆರೋಗದ ಸಮಸ್ಯೆ ಇತ್ತು. ಅದರ ಬಗ್ಗೆ ಗೊತ್ತಿದ್ದ ಪರಿಚಯದವರೊಬ್ಬರು ಧಾರ್ಮಿಕವಾಗಿ ಕೆಲವು ಪೂಜೆ ಮಾಡಿದರೆ ನಿಮ್ಮ ಮಗನಿಗೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು. ನಾವೂ ಅದನ್ನು ಸಹಜವಾಗಿಯೇ ನಂಬಿಕೊಂಡೆವು. ಅದಾದ ಮೇಲೆ ಆತ ಆಗಾಗ ನಮ್ಮ ಮನೆಗೆ ಬರತೊಡಗಿದ. ಅಲ್ಲದೆ, ನನ್ನ ಮಗನಿಗೂ ಕಾಯಿಲೆ ಗುಣವಾಗುತ್ತ ಬಂದಿತ್ತು. ಹಾಗಾಗಿ ನಮಗೂ ಆತನ ಮೇಲೆ ಅಂಥ ಅಪನಂಬಿಕೆ ಇರಲಿಲ್ಲ. ಹೀಗೆ ಸುಮಾರು 8 ತಿಂಗಳ ಹಿಂದೆ ಒಂದು ದಿನ ಆತ ಮನೆಗೆ ಬಂದಾಗ ನನ್ನ ಮಗ-ಮಗಳು ಇಬ್ಬರೇ ಇದ್ದರು. ಈ ವೇಳೆ ಇಬ್ಬರಿಗೂ ಬೆದರಿಕೆ ಹಾಕಿ, ಹೊಡೆದು ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅವನು 2-3 ದಿನ ಇದೇತರ ಅತ್ಯಾಚಾರ ಮಾಡಿದ. ಅದಾದ ಮೇಲೆ ಮಗಳ ದೇಹದಲ್ಲಿ ಬದಲಾವಣೆ ಆಯಿತು. ಆದರೆ ನಮಗೆ ಆಕೆ ಗರ್ಭಿಣಿ ಎಂಬ ವಿಚಾರ ತಲೆಗೆ ಬರಲಿಲ್ಲ. ಹೊಟ್ಟೆಯೂ ಉಬ್ಬುತ್ತಿತ್ತು. ಆದರೆ ನನ್ನ ಪತ್ನಿ, ಅದು ಗ್ಯಾಸ್ಟ್ರಿಕ್​ ಎಂದುಕೊಂಡಳು’ ಎಂದು ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ಇನ್ನು ಬರುಬರುತ್ತ ಬಾಲಕಿಯ ಹೊಟ್ಟೆ ಜಾಸ್ತಿ ಉಬ್ಬುತ್ತಿದ್ದಂತೆ ಅನುಮಾನ ಬಂದು ವಿಚಾರ ಮಾಡಿದ ಪಾಲಕರು ಅಕ್ಷರಶಃ ಶಾಕ್​ ಆಗಿದ್ದರು. ಫೆ.23ರಂದು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಆತನ ವಿರುದ್ಧ ಇದೀಗ IPC ಮತ್ತು Pocso ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅದಾದ ಬಳಿಕ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಕರೆದುಕೊಂಡು ಹೋಗಿ ಪೂರ್ತಿಯಾಗಿ ವೈದ್ಯಕೀಯ ತಪಾಸಣೆ ಮಾಡಿಸಿತ್ತು. ಈ ವೇಳೆ ಆಕೆ 8ತಿಂಗಳ ಗರ್ಭಿಣಿ ಎಂಬುದು ಸ್ಪಷ್ಟವಾಗಿದೆ. ಮಾರ್ಚ್​ 1ರಂದು ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಮನೆಗೆ ಕಳಿಸಿದೆ. ಇದರ ಬೆನ್ನಲ್ಲೇ ಅಪ್ಪ, ತನ್ನ ಮಗಳ ಗರ್ಭಪಾತಕ್ಕೆ ಅನುಮತಿ ಕೊಡಿ ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದರು.

ವೈದ್ಯಕೀಯ ಮಂಡಳಿ ನೇಮಕ ಇದೊಂದು ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ ವಿಚಾರಣೆ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್​ ಅಪ್ರಾಪ್ತೆಯ ಆರೋಗ್ಯ ಪರಿಶೀಲನೆಗಾಗಿ ವೈದ್ಯರ ತಂಡವನ್ನು ನಿಯೋಜಿಸಿಕೊಂಡಿತ್ತು. ಅವರು ಸಮಗ್ರ ಪರಿಶೀಲನೆ ಮಾಡಿ, ಅಪ್ರಾಪ್ತೆ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಭ್ರೂಣದಲ್ಲಿ ಯಾವುದೇ ಅಸಹಜತೆ ಕಾಣಿಸುತ್ತಿಲ್ಲ. ಈಗ ಮಗುವನ್ನು ಹೊರತೆಗೆದರೂ, ಪೂರ್ಣಾವಧಿ ಗರ್ಭ ಧರಿಸಿ ಮಗುವಿಗೆ ಜನ್ಮನೀಡಿದರೂ ತಾಯಿ-ಮಗುವಿಗೆ ಒಂದಷ್ಟು ಅಪಾಯಗಳು ಇದ್ದೇ ಇವೆ. ಅದರಲ್ಲೂ ಈಗ ಮಗುವನ್ನು ಹೊರತೆಗೆದರೆ ಅದನ್ನು ಇಂಟೆನ್ಸಿವ್​ ಕೇರ್​​ನಲ್ಲಿ ಇಡಬೇಕಾಗುತ್ತದೆ. ತಾಯಿಯೂ ಮಗುವಿನ ಜತೆ ಇರಬೇಕು. ಇದ್ದುದರಲ್ಲಿ ಪೂರ್ಣಾವಧಿಯ ನಂತರ ಮಗುವಿನ ಜನನವಾಗುವುದೇ ಉತ್ತಮ. ಅದರ ಬೆಳವಣಿಗೆಯೂ ಸರಿಯಾಗಿ ಇರುತ್ತದೆ ಎಂದು ವೈದ್ಯರ ತಂಡ ತನ್ನ ವರದಿ ಮೂಲಕ ಹೈಕೋರ್ಟ್​ಗೆ ಸಲಹೆ ನೀಡಿದೆ.

ಮಗುವೊಂದು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ ಎಂದು ಬಾಲಕಿಯ ತಂದೆ ಪರ ವಕೀಲರು ಬೇಸರದ ಮಾತುಗಳನ್ನಾಡಿದ್ದಾರೆ. ಹೆರಿಗೆಯ ವೇಳೆಯಲ್ಲಿ ಅಪ್ರಾಪ್ತೆಯ ಜೀವಕ್ಕೆ ತೊಂದರೆ ಆಗುವಂತಿದೆ ಎಂದು ವೈದ್ಯರು ಹೇಳಿಲ್ಲ. ಆದರೆ ಈ ವಿಚಾರವನ್ನು ಎರಡು ವಾರಗಳ ನಂತರ ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು. ಅಗತ್ಯವಿದ್ದರೆ ಕೆಲವು ನಿರ್ದೇಶನಗಳನ್ನು ನೀಡಲಾಗುವುದು ಎಂದು ನ್ಯಾಯಮೂರ್ತಿ ಸೈಯದ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸರು ಗ್ಯಾಜೆಟ್‌ ವಶಪಡಿಸಿಕೊಳ್ಳುವಾಗ ಈ ನಿಯಮ ಪಾಲಿಸಿ: ಕರ್ನಾಟಕ ಹೈಕೋರ್ಟ್​ನಿಂದ​ ಹೊಸ ಮಾರ್ಗಸೂಚಿ