ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ವಿದಾಯ: ಕೊನೆಯ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್ಸಿಬಿ; ನೀವು ನೋಡಿ
Virat Kohli Retirement: ಆರ್ಸಿಬಿ ಫ್ರಾಂಚೈಸಿ, ವಿರಾಟ್ ಕೊಹ್ಲಿಯ ಕೊನೆಯ ಅಜೇಯ ಶತಕದ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಕಳೆದ ವರ್ಷ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಕೊಹ್ಲಿ 143 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಈ ಶತಕದಿಂದಾಗಿ ಭಾರತವು ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿತ್ತು. ಆರ್ಸಿಬಿ ತನ್ನ ಟ್ವೀಟ್‌ನಲ್ಲಿ ಕೊಹ್ಲಿಯನ್ನು ಹೊಗಳಿದ್ದು, ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಸ್ಮರಿಸಿದೆ.
ಕ್ರಿಕೆಟ್ ಅಭಿಮಾನಿಗಳು ಕಳೆದೆರಡು ದಿನಗಳಿಂದ ಯಾವುದು ಆಗಬಾರದೆಂದು ದೇವರ ಬಳಿ ಮೊರೆ ಇಟ್ಟಿದ್ದರೋ ಅದು ಕೊನೆಗೂ ಆಗಿ ಹೋಗಿದೆ. ದಶಕಗಳ ಕಾಲ ಭಾರತ ಟೆಸ್ಟ್ ತಂಡವನ್ನು ಅಕ್ಷರಶಃ ಆಳಿದ್ದ ವಿರಾಟ್ ಕೊಹ್ಲಿ ತಾನು ಅತಿಯಾಗಿ ಪ್ರೀತಿಸುವ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ. ಕೊಹ್ಲಿಯ ಈ ಹಠಾತ್ ವಿದಾಯಕ್ಕೆ ಎಲ್ಲರಿಂದಲೂ ಅಚ್ಚರಿ ವ್ಯಕ್ತವಾಗಿದೆ. ಈ ನೋವಿನಲ್ಲೇ ಕ್ರಿಕೆಟ್ ದಿಗ್ಗಜರು ಕೊಹ್ಲಿ ವಿದಾಯಕ್ಕೆ ಪ್ರತಿಕ್ರಿಯೆ ನೀಡಿದ್ದು, ಏಕದಿನದಲ್ಲಿ ಅವರ ರನ್ ಬೇಟೆ ಹೀಗೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ. ಇತ್ತ ಐಪಿಎಲ್ ಫ್ರಾಂಚೈಸಿ ಆರ್ಸಿಬಿ ಕೂಡ ಕೊಹ್ಲಿ ಕೊನೆಯದಾಗಿ ಶತಕ ಸಿಡಿಸಿದ ಪಂದ್ಯದ ಹೈಲೇಟ್ಸ್ ಹಂಚಿಕೊಳ್ಳುವ ಮೂಲಕ ರನ್ ಸಾಮ್ರಾಟನಿಗೆ ಭಾವಪೂರ್ಣ ಧನ್ಯವಾದ ತಿಳಿಸಿದೆ.
ವಾಸ್ತವವಾಗಿ ಕಳೆದ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಕೊಹ್ಲಿ ಅಜೇಯ ಶತಕ ಸಿಡಿಸಿದ್ದರು. ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಕೊಹ್ಲಿಯ ಶತಕದ ನೆರವಿನಿಂದ ಭಾರತ 487 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಆಸ್ಟ್ರೇಲಿಯಾಕ್ಕೆ 534 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 238 ರನ್ ಕಲೆಹಾಕಲಷ್ಟೇ ಶಕ್ತವಾಗಿ 295 ರನ್‌ಗಳಿಂದ ಪಂದ್ಯವನ್ನು ಸೋತಿತ್ತು. ಈ ಪಂದ್ಯದಲ್ಲಿ ಶತಕ ಬಾರಿಸಿದಲ್ಲದೆ ಕೊಹ್ಲಿ, ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಸ್ಲಿಪ್ನಲ್ಲಿ ನೀಡಿದ ಕ್ಯಾಚ್ ಅನ್ನು ಕೊಹ್ಲಿ ಅದ್ಭುತವಾಗಿ ಹಿಡಿದಿದ್ದರು. ಇದೀಗ ಅದರ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಆರ್ಸಿಬಿ, ಭಾರತ ಟೆಸ್ಟ್ ಕ್ರಿಕೆಟ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಕೊಹ್ಲಿಗೆ ಧನ್ಯವಾದ ತಿಳಿಸಿದೆ.