ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ
Maratha Reservation: ಮಹಾರಾಷ್ಟ್ರದ ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಒದಗಿಸಲು ಅನುವು ಮಾಡಿಕೊಟ್ಟಿದ್ದ ಮಹಾರಾಷ್ಟ್ರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಕಾಯ್ದೆ 2018ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ದೆಹಲಿ: ಶೇ 50 ರಷ್ಟು ಮೀಸಲಾತಿ ಲಕ್ಷ್ಮಣ ರೇಖೆಯಂತಿರಬೇಕು.ಯಾವುದೇ ಕಾರಣಕ್ಕೂ ಈ ಲಕ್ಷ್ಮಣರೇಖೆಯನ್ನು ಮೀರಿ ರಾಜ್ಯಗಳು ಮೀಸಲಾತಿ ನೀಡಬಾರದು ಎಂದು ಹಿರಿಯ ವಕೀಲ ಅರವಿಂದ ದಾತಾರ್ ಮರಾಠಾ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಮಹಾರಾಷ್ಟ್ರದ ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಒದಗಿಸಲು ಅನುವು ಮಾಡಿಕೊಟ್ಟಿದ್ದ ಮಹಾರಾಷ್ಟ್ರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಕಾಯ್ದೆ 2018ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಎಸ್. ಅಬ್ದುಲ್ ನಝೀರ್, ಹೇಮಂತ್ ಗುಪ್ತಾ ಮತ್ತು ರವೀಂದ್ರ ಭಟ್ ಅವರುಗಳಿದ್ದ ನ್ಯಾಯಪೀಠ ಈ ಪ್ರಕರಣ ಆಲಿಸುತ್ತಿದ್ದು, ನಿನ್ನೆ (ಮಾರ್ಚ್ 15) ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ವಾದವಿವಾದ ನಿರಂತರವಾಗಿ ಮುಂದುವರೆದಿತ್ತು. 1992ರಲ್ಲಿ ಇಂದ್ರಾ ಸಾಹ್ನೇ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪಿನಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಸಮುದಾಯಗಳಿಗೆ ಶೇ.50 ಮೀಸಲಾತಿ ಒದಗಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
ಮರಾಠಾ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಉದ್ಯೋಗ ರಂಗಗಳಲ್ಲಿ ಹಿಂದುಳಿದಿದೆ ಎಂದು ಸಲ್ಲಿಸಲಾಗಿದ್ದ ಎಂ.ಜಿ.ಗಾಯಕ್ವಾಡ್ ವರದಿಯು ದೋಷಪೂರಿತವಾಗಿದೆ ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ವಾದಿಸಿದರು. ಎಂ.ಜಿ.ಗಾಯಕ್ವಾಡ್ ವರದಿ ಮರಾಠಾ ಸಮುದಾಯ ರಾಜಕೀಯ ಪ್ರಾಬಲ್ಯ ಹೊಂದಿರುವುದನ್ನು ಗುರುತಿಸುವಲ್ಲಿ ವಿಫಲವಾಗಿದೆ ಎಂದು ಅವರು ಪ್ರಸ್ತಾಪಿಸಿದರು. ಮರಾಠ ಸಮುದಾಯದಲ್ಲಿ ನಾಗರಿಕರು ಮುಖ್ಯಮಂತ್ರಿ, ಸಚಿವರು ಸಹ ಆಗಿದ್ದಾರೆ. ಅಷ್ಟೇ ಅಲ್ಲದೇ ಐಎಎಸ್, ಐಎಫ್ಎಸ್ನಂತಹ ಆಡಳಿತಾತ್ಮಕ ಉನ್ನತ ಶ್ರೇಣಿಯ ಹುದ್ದೆಗಳನ್ನು ಸಹ ಅಲಂಕರಿಸಿದ್ದಾರೆ. ಕಲ್ಕೇಕರ್ ವರದಿಯು ಮರಾಠಾ ಸಮುದಾಯವು ಆಡಳಿತದಲ್ಲಿ ಪ್ರಾಬಲ್ಯ ಹೊಂದಿದ ಸಮುದಾಯವಾಗಿದೆ ಎಂದು ವರದಿ ನೀಡಿದೆ ಎಂಬ ಮಾಹಿತಿಯನ್ನು ಹಿರಿಯ ವಕೀಲ ಶ್ಯಾಮ್ ದಿವಾನ್ ಪ್ರಸ್ತಾಪಿಸಿದರು. ಈ ಪ್ರಕರಣದ ವಾದ ವಿವಾದಗಳು ನಿನ್ನೆಯಿಡೀ ಸುಪ್ರೀಂ ಕೋರ್ಟ್ನ ಅಂಗಳದಲ್ಲಿ ನಡೆದಿದ್ದು, ಮುಂದಿನ ಬೆಳವಣಿಗೆಗಳಿಗಾಗಿ ಕಾದುಕೂರುವಂತಾಗಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲು ಹೋರಾಟದ ಹಿನ್ನೆಲೆಯಲ್ಲಿ ಈ ವಾದ ವಿವಾದಗಳಿಂದ ಹೊರಹೊಮ್ಮುವ ಸುಪ್ರಿಂ ಕೋರ್ಟ್ನ ತೀರ್ಪು ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ: ಚುನಾವಣಾ ಆಯುಕ್ತರಾಗಿ ಸರ್ಕಾರಿ ಅಧಿಕಾರಿಗಳ ನೇಮಕ ಸಲ್ಲ; ಸುಪ್ರೀಂ ಕೋರ್ಟ್
ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್
ಶೇಂಗಾ ಹೋಳಿಗೆ ತಿಂದು ಮೀಸಲಾತಿ ಹೋರಾಟ ನಿಲ್ಲಿಸಿದ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ