ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2 ಎ ಗೆ ಸೇರ್ಪಡೆ ಮಾಡುವ ಕುರಿತಾಗಿ, ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಶ್ರೀ ವಚನಾನಂದ ಶ್ರೀಗಳಿಗೆ ದಾಖಲೆಗಳನ್ನು ನೀಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪತ್ರ ಬರೆದಿರುವುದಕ್ಕೆ ಸಚಿವರಾದ ಮುರುಗೇಶ್ ಆರ್. ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್
ಬಸವ ಜಯಮೃತ್ಯುಂಜಯ ಶ್ರೀಗಳು
Follow us
| Updated By: ganapathi bhat

Updated on:Apr 06, 2022 | 7:14 PM

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ 2A ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ, ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಹಿಂದುಳಿದ ವರ್ಗಗಳ ಆಯೋಗದಿಂದ ನೋಟಿಸ್ ನೀಡಲಾಗಿದೆ. ಡಿಸೆಂಬರ್ 10ರಂದು ಶ್ರೀಗಳು ಮನವಿ ಪತ್ರ ನೀಡಿದ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಾರ್ಚ್‌ 22 ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆ ನಡೆಸುವುದಾಗಿ ಶ್ರೀಗಳಿಗೆ ನೀಡಿದ ನೋಟಿಸ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್ 22 ರಂದು ಸಾಕ್ಷ್ಯಾಧಾರ ಸಲ್ಲಿಸಲು ಬಸವ ಮೃತ್ಯುಂಜಯ ಶ್ರೀಗಳು ಹಾಗೂ ವಚನನಂದಾ ಶ್ರೀಗಳಿಗೆ ಆಯೋಗ ಮನವಿ ಮಾಡಿದೆ. ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2 ಎ ಗೆ ಸೇರ್ಪಡೆ ಮಾಡುವ ಕುರಿತಾಗಿ, ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಶ್ರೀ ವಚನಾನಂದ ಶ್ರೀಗಳಿಗೆ ದಾಖಲೆಗಳನ್ನು ನೀಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪತ್ರ ಬರೆದಿರುವುದಕ್ಕೆ ಸಚಿವರಾದ ಮುರುಗೇಶ್ ಆರ್. ನಿರಾಣಿ ಹಾಗೂ ಸಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಸಮುದಾಯದ ಬೇಡಿಕೆಗೆ ಓಗೊಟ್ಟು ಲೋಕಸಭಾ ಸದಸ್ಯರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಈ ಹೋರಾಟಕ್ಕೆ ಶ್ರಮಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮುರುಗೇಶ್ ನಿರಾಣಿ ಹೇಳಿದ್ದಾರೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಆಯೋಗದಿಂದ ನ್ಯಾಯ ಸಿಗುವ ಭರವಸೆ ಇದೆ. ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿಕೊಟ್ಟಿದ್ದಾರೆ. ಆಯೋಗದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ದಿಟ್ಟ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿದವರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಪಂಚಮಸಾಲಿ ಲಿಂಗಾಯತ ಸಮಯದಾಯವನ್ನು 3B ಗೆ ಸೇರಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರುಗಳು ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಪತ್ರ ಬರೆದು ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2A ಗೆ ಸೇರ್ಪಡೆ ಮಾಡುವ ಬಗ್ಗೆ ತಮ್ಮಲ್ಲಿ ಯಾವುದೇ ರೀತಿಯ ದಾಖಲೆಗಳು ಇದ್ದರೆ, ಖುದ್ದು ಹಾಜರಾಗಿ ಇಲ್ಲವೇ ಸಂಬಂಧಪಟ್ಟವರ ಮೂಲಕ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದ್ದಾರೆ. ಈ ಕುರಿತು ಉಭಯ ಶ್ರೀಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಆಯೋಗವು ಸಮುದಾಯದ ಬೇಡಿಕೆಗೆ ಸ್ಪಂದಿಸಿ ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಾಗಿದೆ. ಖಂಡಿತವಾಗಿಯೂ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವರುಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮಗೆ ಪ್ರತಿಯೊಂದು ಹಂತದಲ್ಲೂ ಅಗತ್ಯವಾದ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಅವರ ಈ ಸಹಾಯವನ್ನು ನಮ್ಮ ಸಮುದಾಯ ಎಂದಿಗೂ ಮರೆಯುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಗೃಹ ಸಚಿವ ಬೊಮ್ಮಯಿ ಅವರ ಸಹಕಾರವನ್ನು ಸ್ಮರಿಸಿದ್ದಾರೆ.

ನಿವೃತ್ತ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್, ಸರಕಾರದ ನಿವೃತ್ತ ಮುಖ್ಯ ನ್ಯಾಯಮೂರ್ತಿ ರತ್ನಪ್ರಭಾ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ಕುಲಂಕುಶವಾಗಿ ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದು ಹೇಳಿದ್ದಾರೆ.

ಸಮಸ್ತ ವೀರಶೈವ- ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಸಮಸ್ತ ವೀರಶೈವ- ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಅದರಲ್ಲೂ ಆರ್ಥಿಕವಾಗಿ ತೀರಾ ಹಿಂದುಳಿದ ಹಡಪದ, ಸವಿತಾ ಸಮಾಜದವರು ಸೇರಿದಂತೆ ಧ್ವನಿ ಇಲ್ಲದವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು ಎಂದು ನಿರಾಣಿ ಮನವಿ ಮಾಡಿದ್ದಾರೆ. ವೀರಶೈವ- ಲಿಂಗಾಯತರಿಗೆ ಮೀಸಲಾತಿ ನೀಡುವುದರ ಜೊತೆಗೆ ಯಾರು ವಂಚಿತರಾಗಿದ್ದಾರೋ ಅಂತಹವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಂಚಮಸಾಲಿ ಜನಾಂಗದವರು ತಮ್ಮ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದೆ. ಸಮಾಜದ ಬಡವರಿಗೆ ತೊಂದರೆಯಾಗಿರುವುದರಿಂದ, ತಮ್ಮ ಜನಾಂಗವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಲು ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ದಿನಾಂಕ: ಫೆಬ್ರವರಿ 5, 2021 ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೋರಿದ್ದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ 1995 ರಡಿಯಲ್ಲಿ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಮೃತಿಗಳ ಬಗ್ಗೆ ಸಮೀಕ್ಷೆ ನಡೆಸುವುದು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರೀಕರ ವರ್ಗಗಳನ್ನು ಗುರುತಿಸುಂತೆ ಸೂಚಿಸಲಾಗಿತ್ತು. ಪಂಚಮಸಾಲಿ ಜನಾಂಗದ 2ಎ ಮೀಸಲಾತಿ ಬೇಡಿಕೆಯ ಬಗ್ಗೆ ಸಮಗ್ರವಾಗಿ ನಿಯಮಾನುಸಾರ ಅಧ್ಯಯನ ಮಾಡಿ ವರದಿಯನ್ನು ಸರ್ಕಾರಕ್ಕೆ, ಸಲ್ಲಿಸುವಂತೆ ಪತ್ರದಲ್ಲಿ ಕೋರಲಾಗಿತ್ತು.

ಇದನ್ನೂ ಓದಿ: ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?

ಮಹಾಶಿವರಾತ್ರಿ ಹಬ್ಬದಂದು ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ!

Published On - 9:41 pm, Fri, 12 March 21