ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?

Panchamasali Reservation: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲರಿಗೂ ತಮ್ಮ ಸಮುದಾಯಕ್ಕೆ 2A ಮೀಸಲಾತಿ ಕೊಡಿಸಬೇಕೆಂಬ ಉದ್ದೇಶ ಮಾತ್ರವೇ ಇತ್ತೇ? ಸಮಾವೇಶದ ಭಾಷಣಗಳು ಮತ್ತು ನಂತರದ ಸುದ್ದಿಗೋಷ್ಠಿ ನೀಡುವ ಸಂದೇಶವೇನು?

ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?
ಪಂಚಮಸಾಲಿ ಸಮಾವೇಶದ ವೇದಿಕೆಯಲ್ಲಿ ನಾಯಕರು.
Follow us
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 23, 2021 | 3:08 PM

ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟದಲ್ಲಿ ರಾಜಕೀಯ ನಾಯಕರು ಮುಖ್ಯ ಪಾತ್ರವಹಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎಂಬ ಬೇಧವಿಲ್ಲದೆ ಉಭಯ ಪಕ್ಷಗಳ ಧುರೀಣರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರೆಲ್ಲರ ಉದ್ದೇಶ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವುದೊಂದೇ ಆಗಿತ್ತೇ? ಈ ಪ್ರಶ್ನೆ ಮುಂದಿಟ್ಟರೆ ಹೌದೇಹೌದು ಎನ್ನುವುದು ಅಸಾಧ್ಯ. ಒಂದೇ ಮೀಸಲಾತಿ ಹೋರಾಟದಲ್ಲಿ, ಒಂದೇ ಸಮುದಾಯದ ಜನರ ನಡುವೆ, ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದ ರಾಜಕಾರಣಿಗಳ ಭಾಷಣದ ವಿವಿಧ ಆಯಾಮ ಗಮನಿಸಿದರೆ, ಮೀಸಲಾತಿ ಹೋರಾಟವು ರಾಜಕೀಯ ಸ್ವರೂಪ ಪಡೆದು ಹೊಸ ಬಿಕ್ಕಟ್ಟಿಗೆ ಕಾರಣವಾಗಿರುವುದು ತಿಳಿದುಬರುತ್ತದೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್, ಬಿಜೆಪಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದರು.

ಪಂಚಮಸಾಲಿ ಸಮಾವೇಶದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಪರ ಬ್ಯಾಟ್ ಬೀಸಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಟಾಂಗ್ ಕೊಟ್ಟರು. ಸಿದ್ದರಾಮಯ್ಯ ತಮ್ಮ ಆಡಳಿತದ ಅವಧಿಯಲ್ಲಿ ರಾಯಣ್ಣ ಪ್ರಾಧಿಕಾರಕ್ಕೆ ₹ 250 ಕೋಟಿ ನೀಡಿದ್ದಾರೆ. ತಾವು ಕಿತ್ತೂರು ಚೆನ್ನಮ್ಮಳ ಕೋಟೆಗೆ ಎಷ್ಟು ಹಣ ನೀಡುತ್ತೀರಿ ಯಡಿಯೂರಪ್ಪನವರೇ? ಎಂದು ಬಹಿರಂಗ ಸವಾಲ್ ಹಾಕಿದರು. ವಿರೋಧ ಪಕ್ಷದ ನೆಲೆಯಲ್ಲಿ ನಿಂತು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಮತ್ತೋರ್ವ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್, ಈ ಯಾತ್ರೆಯ ಮೂಲಕ ಹೊಸ ಪ್ರಭಾವಿ ನಾಯಕರಾಗಿ ಪ್ರವರ್ಧಮಾನಕ್ಕೆ ಬಂದರು. ನಿನ್ನೆಯ ಸಮಾವೇಶದಲ್ಲಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಅಧ್ಯಕ್ಷರಾಗಿಯೂ ಘೋಷಿತರಾದರು. ಕಾಶಪ್ಪನವರ್ ಅಸ್ತಿತ್ವ ಹಾಗೂ ನಾಯಕತ್ವ ಪಾದಯಾತ್ರೆ ಮತ್ತು ಸಮುದಾಯದ ಹೋರಾಟದ ಮೂಲಕ ಬಲಗೊಂಡಿತು. ಯಾತ್ರೆಯ ನಡುವೆಲ್ಲಾ ಆಡಳಿತ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದದ್ದೂ ಆಯಿತು.

ಸಮಾವೇಶದಲ್ಲಿ ಬಹಳ ಸಂಕಟಪಟ್ಟವರೆಂದರೆ ಅದು ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್. ಒಂದೆಡೆ ಆಡಳಿತ ಪಕ್ಷದ ನಾಯಕರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಾಗಿ ಹೊಣೆ ಹೊತ್ತಿದ್ದರೆ, ಮತ್ತೊಂದೆಡೆ ಪಂಚಮಸಾಲಿ ಸಮುದಾಯದ ಮುಖಂಡರಾಗಿ, ಗುರುವಿರೋಧ, ಜನವಿರೋಧ ಅಥವಾ ಸಮಾವೇಶದ ಘನತೆ ಹಾಳುಗೆಡವಲು ಇಷ್ಟವಿಲ್ಲದವರಂತೆ ಕಷ್ಟಪಟ್ಟರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅದನ್ನು ಹೇಳಿಕೊಂಡರು.

ಸಮುದಾಯದ ಹುಲಿ ಎಂದು ಸಮಾವೇಶದ ವೇದಿಕೆಯಲ್ಲಿ ಕರೆಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ವಿರುದ್ಧ ಅಕ್ಷರಶಃ ಗರ್ಜಿಸಿದರು. ಯತ್ನಾಳ್ ಹರಿಬಿಟ್ಟ ನಾಲಗೆಗೆ ನೆರೆದ ಜನರು ಶಿಳ್ಳೆ, ಚಪ್ಪಾಳೆಗಳ ಬೆಲ್ಲವಿಟ್ಟದ್ದೂ ಆಯ್ತು. ಬಿಜೆಪಿ ಶಾಸಕನಾಗಿದ್ದುಕೊಂಡು, ತನ್ನದೇ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧ ಎಗ್ಗಿಲ್ಲದೇ ವಾಗ್ದಾಳಿ ನಡೆಸಿದರು. ತನ್ಮೂಲಕ ಹಲವು ದಿನಗಳಿಂದ ನಡೆಸುತ್ತಿರುವ ನೇರಾನೇರ ಜಿದ್ದಾಜಿದ್ದಿಯನ್ನು ಸಮುದಾಯದ ಜನರ ಮತ್ತು ಕೆಲವು ನಾಯಕರ ಬೆಂಬಲದೊಂದಿಗೆ ಮತ್ತಷ್ಟು ಕಟುವಾಗಿ ಮುಂದುವರಿಸಿದರು. ಬಿಎಸ್​ವೈ ಹಾಗೂ ಬಿಜೆಪಿ ವಿರುದ್ಧದ ತಮ್ಮ ಭಾವಾವೇಶ ಪ್ರದರ್ಶಿಸಿದರು.

ಈ ಬಿಕ್ಕಟ್ಟುಗಳು ಖಚಿತವಾಗಿ ಪ್ರತಿಫಲಿಸಿದ್ದು ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ. ಪಂಚಮಸಾಲಿ ಸಮಾವೇಶದಲ್ಲಿ ಎಲ್ಲ ಗುರು-ಹಿರಿಯರು ಭಾಗಿಯಾಗಿದ್ದರು. ಪಂಚಮಸಾಲಿ ಸಮಾವೇಶ ಅರ್ಥಪೂರ್ಣವಾಗಿ ನಡೆಯಿತು ಎಂಬ ಜತೆಗೆ, ಸಮುದಾಯಕ್ಕೆ ಕಾನೂನು ಪ್ರಕಾರವೇ ಮೀಸಲಾತಿಯನ್ನು ನೀಡಬೇಕಾಗುತ್ತೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಅಧ್ಯಯನ ಮಾಡಿ ವರದಿ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಫಾರಸು ಮಾಡಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎರಡು ದೋಣಿಯನ್ನು ಸರಿದೂಗಿಸಿ ನಡೆಸುವ ಪ್ರಯತ್ನ ಮಾಡಿದರು.

ಆರಂಭದಲ್ಲಿ ಇದೇ ಧಾಟಿಯಲ್ಲಿದ್ದ ಸುದ್ದಿಗೋಷ್ಠಿ, ಬಳಿಕ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು ಖಂಡನೀಯ. ಕೆಲವರು ಸಮುದಾಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದರು ಎಂಬಲ್ಲಿಗೆ ಬಂದುನಿಂತಿತು. ಕಾಶಪ್ಪನವರ್ ಹಾಗೂ ಯತ್ನಾಳ್ ವಿರುದ್ಧ ಇಬ್ಬರೂ ಸಚಿವರು ತೀವ್ರ ಖಂಡನೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ ರೂಪಾಯಿ ನೀಡಿದ್ದಾರೆ. ಇದು ಸಾಮಾನ್ಯವಾದ ವಿಷಯವಲ್ಲ ಎಂದೂ ಹೇಳಿದರು. ನಾವು ಮೀಸಲಾತಿ ನೀಡುವ ಬಗ್ಗೆ ಸೂಕ್ತ ಕಾನೂನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದೇವೆ. ಅದಕ್ಕಾಗಿ ನೀವು ಸಮಯಾವಕಾಶ ನೀಡಬೇಕು. ರಾಜಕೀಯ ಒತ್ತಡ ಹಾಕಬಾರದು ಎಂದು ತಿಳಿಸಿದರು. ಈ ರೀತಿಯ ಹೋರಾಟ ನಡೆಸಿ ಮೀಸಲಾತಿ ಸಿಗದೇ ಹೋದರೆ ಅದಕ್ಕೆ ನೀವೇ ಹೊಣೆ ಎಂಬ ಮಾತನ್ನೂ ನಿರಾಣಿ ಹೇಳಿದರು.

ಒಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದಂತೆ ಕಂಡರೆ, ಕಾಶಪ್ಪನವರ್ ಸ್ವಂತ ಅಸ್ತಿತ್ವಕ್ಕೆ ತಿಣುಕಾಡಿದಂತೆ ಕಂಡರು. ನಿರಾಣಿ ಹಾಗೂ ಸಿ.ಸಿ. ಪಾಟೀಲ್ ಕೋಲು ಮುರಿಯಬಾರದು ಹಾವೂ ಸಾಯಬಾರದು ಎಂಬ ಆಟವಾಡಲು ಹೊರಟರು. ಯಡಿಯೂರಪ್ಪ ಮಾತ್ರ ಜಾಣ ಮೌನವಹಿಸಿ, ಸಮುದಾಯದ ಶಾಸಕರನ್ನು ಮುಂದಿಟ್ಟು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಯತ್ನಕ್ಕೆ ಕೈಹಾಕಿದರು. ಯತ್ನಾಳ್ ಸ್ವಂತ ವಿರೋಧ ಮುಂದುವರಿಸಿದರು. ಇಲ್ಲಿ ನಿಜವಾಗಿಯೂ ಆಗಬೇಕಾದ್ದೇನು? ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲರಿಗೂ ಇರುವುದು ಮೀಸಲಾತಿ ಪಡೆಯುವ ಉದ್ದೇಶ ಮಾತ್ರವೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟ ಹಲವರ ನಡುವೆ ಈ ಹೋರಾಟದಲ್ಲಿ, ನಿಜವಾಗಿಯೂ ಯಾರ ಬೇಳೆ ಬೇಯುತ್ತದೆ?

ಇದೆಲ್ಲವೂ ಸಾಲದು ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಬಿದ್ದಲ್ಲಿ ಚಳಿ ಕಾಯಿಸಿಕೊಳ್ಳಲು ಮುಂದಾಗಿದ್ದಾರೆ. ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ನೀಡಲಿ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಪರಿಶೀಲಿಸಿ ಮೀಸಲಾತಿಯ ಬಗ್ಗೆ ಶಿಫಾರಸು ಮಾಡಬೇಕು. ಈ ಕುರಿತು ಸರ್ಕಾರ ಶೀಘ್ರವೇ ತೀರ್ಮಾನಿಸಲಿ ಎಂದು ಮಂಗಳೂರಲ್ಲಿ ಸಿದ್ದರಾಮಯ್ಯ ಹೇಳಿದ್ದರು.

ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಕೇಂದ್ರದಲ್ಲಿ ಬೆಂಬಲ ಸಿಗದೆ ಮೀಸಲಾತಿ ಉಳಿದುಹೋಗಿತ್ತು. ಇದೀಗ ಬಿಜೆಪಿಯೇ ಪಡಿಪಾಟಲು ಅನುಭವಿಸಲಿ ಎಂಬ ಭಾವ ಕಾಂಗ್ರೆಸ್‌ಗೆ ಎಂಬುದು ಒಳಗುಟ್ಟು. ಒಟ್ಟಾರೆ, ಸಿದ್ದರಾಮಯ್ಯ ಕೂಡ ಮೀಸಲಾತಿ ನೀಡಿ ಎನ್ನುವ ಮೂಲಕ ಲಿಂಗಾಯತರನ್ನು ಯಡಿಯೂರಪ್ಪರ ನೆರಳಿನಿಂದ ದೂರ ಸರಿಸುವ ಯತ್ನ ಮಾಡಿದ್ದಾರೆ. ಬಿಜೆಪಿಗೆ ಬಿಸಿ ಮುಟ್ಟಿಸಿ, ಕೈ ಬಲ ಹೆಚ್ಚಿಸುವ ಯೋಚನೆಗಿಳಿದಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ; ಜಯಮೃತ್ಯುಂಜಯ ಸ್ವಾಮೀಜಿ

ಇದನ್ನೂ ಓದಿ: ಪಂಚಮಸಾಲಿ ಹೋರಾಟವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿದ್ದು ಖಂಡನೀಯ, ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿ.ಸಿ. ಪಾಟೀಲ್

Published On - 3:07 pm, Tue, 23 February 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ