ಬೆಂಗಳೂರು: ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿತ್ತು, ಮಾಡಿದ್ದೇನು ಗೊತ್ತಾ?
ನಕಲಿ ದಾಖಲೆಗಳನ್ನು ಬಳಸಿ ಪೊಲೀಸ್ ವೆರಿಫಿಕೇಶನ್ ಲೆಟರ್ ಪಡೆಯುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆಲಸಕ್ಕಾಗಿ ಪೊಲೀಸ್ ವೆರಿಫಿಕೇಶನ್ ಅಗತ್ಯವಿರುವ ವ್ಯಕ್ತಿಗಳಿಂದ ಹಣ ಪಡೆದು ನಕಲಿ ದಾಖಲೆಗಳ ಮೂಲಕ ವೆರಿಫಿಕೇಶನ್ ಲೆಟರ್ ಪಡೆಯುವ ಜಾಲವನ್ನು ಈ ಆರೋಪಿಗಳು ನಡೆಸುತ್ತಿದ್ದರು. ಪೊಲೀಸರು ಈ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಮೇ 30: ನಕಲಿ ದಾಖಲೆಗಳನ್ನು ನೀಡಿ ಪೊಲೀಸರಿಂದ (Police) ವೆರಿಫಿಕೇಶನ್ ಲೆಟರ್ ಪಡೆಯುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್, ಉದಯ್ ಮತ್ತು ರಾಮಕೃಷ್ಣ ಬಂಧಿತರು. ಬೆಂಗಳೂರಿಗೆ (Bengaluru) ದೇಶದ ಮೂಲೆ ಮೂಲೆಗಳಿಂದ ಕೆಲಸ ಹುಡುಕಿಕೊಂಡು ಬರುತ್ತಾರೆ. ಕೆಲಸ ನೀಡಲು ಬೆಂಗಳೂರಿನಲ್ಲಿ ಸಾವಿರಾರು ಕಂಪನಿಗಳು ಇವೆ. ಎಲ್ಲಿಂದಲೋ ಕೆಲಸ ಕೇಳಿಕೊಂಡು ಬಂದ ವ್ಯಕ್ತಿ ಹಿನ್ನೆಲೆ ಏನು? ಆತನ ವಿರುದ್ಧ ಯಾವುದಾದರು ಕ್ರಿಮಿನಲ್ ಕೇಸ್ ಇದೆಯೇ? ಎಂದು ತಿಳಿಯಲು ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು, ಪೊಲೀಸರಿಂದ ವೆರಿಫಿಕೇಶನ್ ಲೆಟರ್ ತರಲು ಹೇಳುತ್ತಾರೆ.
ಪೊಲೀಸ್ ವೆರಿಫಿಕೇಶನ್ ಲೆಟರ್ನಲ್ಲಿ ಯಾವ ಕೇಸ್ ಇಲ್ಲ ಅಂತ ನಮೂದು ಆಗಿದ್ದರೆ ಮಾತ್ರ, ಆವ್ಯಕ್ತಿಯನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಇದನ್ನು ಅರಿತ ಆರೋಪಿಗಳು, ಪೊಲೀಸರ ವೆರಿಫಿಕೇಶನ್ ಲೆಟರ್ ಪಡೆಯಲು ಹೋಗುತ್ತಿದ್ದವರಿಂದ ಹಣ ಪಡೆದು, ನಕಲಿ ದಾಖಲೆ ನೀಡಿ ವೆರಿಫಿಕೇಶನ್ ಲೆಟರ್ ಪಡೆಯುತ್ತಿದ್ದರು. ಸದ್ಯ, ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳು ಮೋಸ ಮಾಡುತ್ತಿದ್ದು ಹೇಗೆ?
ಆರೋಪಿಗಳಾದ ದೀಪಕ್, ಉದಯ್ ಮತ್ತು ರಾಮಕೃಷ್ಣ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಈ ಕೆಲಸವನ್ನೂ ಮಾಡುತ್ತಿದ್ದರು. ಪೊಲೀಸ್ ವೆರಿಫಿಕೇಶನ್ ಲೆಟರ್ಗಾಗಿ ಠಾಣೆಯ ಮೆಟ್ಟಿಲು ಹತ್ತುವವರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು, ನಾವು ಮಾಡಿಸಿಕೊಡುತ್ತೇವೆ ಅಂತ ಹಣ ಪಡೆಯುತಿದ್ದರು. ನಂತರ, ಒಂದು ನಕಲಿ ವಿಳಾಸಕ್ಕೆ ರೆಂಟಲ್ ಅಗ್ರಿಮಿಂಟ್ ಮಾಡಿಸುತಿದ್ದರು. ಬಳಿಕ, ಅದೇ ರೆಂಟಲ್ ಅಗ್ರಿಮಿಂಟ್ ಮತ್ತು ಒಂದು ನಕಲಿ ಕರೆಂಟ್ ಬಿಲ್ ಸಹಿತ ತಾವು ಇದೇ ಮನೆಯಲ್ಲಿ ಬಾಡಿಗೆಗೆ ಇದ್ದೆವೆ ಎಂದು ಪೊಲೀಸ್ ಇಲಾಖೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಹಾಕುತ್ತಿದ್ದರು.
ಠಾಣೆಗೆ ಕರೆದಾಗ ಹೋಗಿ ತಾವು ಇಲ್ಲಯೇ ವಾಸಿಸುತ್ತಿದ್ದೇವೆ ಎಂದು ಹೇಳುತ್ತಿದ್ದರು. ನಂತರ ಪೊಲೀಸರು ಇವರ ಹಿನ್ನೆಲೆಯನ್ನು ಪರಿಶೀಲಿಸಿದಾಗ ಕ್ರಿಮಿನಲ್ ಡೇಟಾ ಇಲ್ಲದ ಕಾರಣ ಅಲ್ಲಿ ನಿಲ್ ರಿಪೋರ್ಟ್ ಬರುತ್ತಿತ್ತು. ನಂತರ ವೆರಿಫಿಕೇಶನ್ ಲೆಟರ್ ಪಡೆಯುತಿದ್ದರು.
ಇದನ್ನೂ ಓದಿ: ಐಪಿಎಲ್ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: ದಂಧೆ ಕಿಂಗ್ಪಿನ್ ಆಗಿದ್ದ ಇಬ್ಬರು ಪೊಲೀಸರು ಸಸ್ಪೆಂಡ್!
ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದು ಹೇಗೆ?
ಒಂದೇ ವಿಳಾಸದ ಹಲವಾರು ರೆಂಟಲ್ ಅಗ್ರಿಮಿಂಟ್ಗಳು ಮಹದೇವಪುರ, ಕೆಜಿ ಹಳ್ಳಿ, ಬಾಣಸವಾಡಿ ಮತ್ತು ಬೆಳ್ಳಂದೂರು ಠಾಣೆಯಲ್ಲಿ ನೀಡಿದರು, ಆಗ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದೆ. ನಂತರ, ಈ ಮಾಹಿತಿ ಪಡೆದೆ ಸಿಸಿಬಿ ಅಧಿಕಾರಿಗಳು ನಗರದ ಹಲವಾರು ಪೊಲೀಸ್ ಠಾಣೆಯಿಂದ ಡೇಟಾ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಈ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಸಿಸಿಬಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಕೇಸ್ ದಾಖಲು ಮಾಡಿ ಯಾರು, ಯಾರಿಗೆ ಪೊಲೀಸ್ ವೆರಿಫಿಕೇಶನ್ ಲೆಟರ್ ಮಾಡಿಸಿಕೊಟ್ಟಿದ್ದಾರೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Fri, 30 May 25



