ಕರ್ನಾಟಕದಲ್ಲಿ ಕೊರೊನಾ ಮತ್ತಷ್ಟು ಹೆಚ್ಚಳ, ಹೆಮ್ಮಾರಿಗೆ 3ನೇ ಬಲಿ: ಟೆಸ್ಟಿಂಗ್ ಕಡ್ಡಾಯಗೊಳಿಸಿದ ಕೇಂದ್ರ
ಕರ್ನಾಟಕದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ದಿನೆದಿನೇ ಏರಿಕೆಯಾಗ್ತಿದೆ. ರಾಜಧಾನಿಯಲ್ಲೂ ಕೋವಿಡ್ ಸೋಂಕು ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದೆ. ಮಳೆ ಹಾಗೂ ಮೋಡದ ವಾತಾವರಣ ಇರೋದ್ರಿಂದ ಕೋವಿಡ್ ಕೇಸ್ ಗಳು ಕೂಡ ಸದ್ದಿಲ್ಲದೇ ಏರಿಕೆಯಾಗ್ತಿದ್ದು, ಜನರಿಗೆ ಆತಂಕ ಹೆಚ್ಚಿಸಿದೆ. ಹಾಗಾದ್ರೆ, ಇಂದು ಎಷ್ಟು ಕೊರೋನಾ ಪ್ರಕಣಗಳು ಪತ್ತೆಯಾಗಿವೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮೇ 30): ಕರ್ನಾಟಕದಲ್ಲಿ (Karnataka) ಮತ್ತೆ ಆಟ ಶುರು ಮಾಡಿರೋ ಕೊರೊನಾ (Coronavirus) ಹೆಮ್ಮಾರಿ ಸದ್ದಿಲ್ಲದೇ ಆರ್ಭಟಿಸ್ತಿದೆ. ಶರವೇಗದಲ್ಲಿ ಹೆಚ್ಚಾಗ್ತಿರೋ ಕೊರೊನಾ ಕೇಸ್ ಗಳು ಜನರಲ್ಲಿ ಆತಂಕ ತಂದಿಟ್ಟಿದೆ. ಇದರ ಮಧ್ಯೆ ಇಂದು(ಮೇ 30) ಕೂಡ ಒಂದು ಬಲಿ ಪಡೆದಿದೆ. ಮೈಸೂರಲ್ಲಿ 63 ವರ್ಷ ಪುರುಷ ಕೊವಿಡ್ ಗೆ ಬಲಿಯಾಗಿದ್ದಾನೆ. ಈ ಮೂಲಕ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ SARI ಗುಣಲಕ್ಷಣ ಹೊಂದಿರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮುಂಗಾರಿನ ಎಂಟ್ರಿ ಆಗಿರೋದರಿಂದ ಕೋವಿಡ್ ಸೋಂಕು ವೇಗವಾಗಿ ಹರಡೋಕೆ ಶುರುವಾಗಿದ್ದು ರಾಜ್ಯದ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 24 ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತ ಸಂಖ್ಯೆ 114 ಕೊರೊನಾ ಪ್ರಕರಣಗಳೊಂದಿಗೆ 367ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ಕೋವಿಡ್ಗೆ ರಾಜಧಾನಿಯೇ ಹಾಟ್ಸ್ಪಾಟ್
ಇತ್ತ ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಭೀತಿ ಹೆಚ್ಚಾಗುವ ಆತಂಕ ಎದುರಾಗಿದೆ.ನಿತ್ಯ ಕೋವಿಡ್ ಸೋಂಕಿನಲ್ಲಿ ಏರಿಕೆ ಕಾಣ್ತಿರೋದು ಸದ್ದಿಲ್ಲದೇ ತನ್ನ ಕಬಂಧಬಾಹು ಚಾಚುತ್ತಿರೋ ಕೊರೋನಾ ಕೇಸ್ಗಳ ಮೂಲಕ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ.
ರಾಜ್ಯದಲ್ಲಿ ಕೊರೊನಾಗೆ 3ನೇ ಬಲಿ
ಮೈಸೂರಿನ 63 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಕಿಡ್ನಿ ವೈಫಲ್ಯವಾಗಿ ಮೇ 15ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೇ 25ರಂದು ಮೃತಪಟ್ಟಿದ್ದಾರೆ. ಬಳಿಕ ಮೃತಪಟ್ಟ ವ್ಯಕ್ತಿಯ ಕೊವಿಡ್ ರಿಪೋರ್ಟ್ ಪಾಸಿಟಿವ್ ಎಂಬ ವರದಿ ಬಂದಿದೆ.
ಕೊವಿಡ್ ಟೆಸ್ಟ್ ಕಡ್ಡಾಯ
ಕೊವಿಡ್ ಪ್ರಕರಣಗಳು ಹೆಚ್ಚಳ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. SARI ಗುಣಲಕ್ಷಣ ಹೊಂದಿರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಸ್ವ್ಯಾಬ್ ಪಡೆದ ದಿನವೇ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಸೂಚಿಸಿದೆ.
ಜೂನ್ ತಿಂಗಳಲ್ಲಿ ಮಳೆಗಾಲದ ಜತೆಗೆ ವಾತಾವರಣದ ಉಷ್ಣಾಂಶ ಕೂಡ ತಗ್ಗಲ್ಲಿದ್ದು, ಸೋಂಕು ಮತ್ತಷ್ಟು ಹೆಚ್ಚಾಗೋ ಸಾಧ್ಯತೆಯಿದೆ. ಶಾಲೆಗಳು ಕೂಡ ಆರಂಭವಾಗಿದ್ದು, ಮಕ್ಕಳಿಗೆ ಸೋಂಕು ಹರಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕಿದೆ.








