ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಆರ್ಟಿಪಿಸಿಆರ್ ಲ್ಯಾಬ್ ಪುನರಾರಂಭ, ಟೆಸ್ಟಿಂಗ್ಗೆ ಸಿದ್ಧತೆ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಜೊತೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಇದೀಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಹೊರವಲಯದಲ್ಲೂ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಏರ್ಪೋರ್ಟ್ನಲ್ಲಿ ಆರ್ಟಿಪಿಸಿಆರ್ ಲ್ಯಾಬ್ ಪುನರಾರಂಭ ಮಾಡಲಾಗಿದೆ.

ಬೆಂಗಳೂರು, ಮೇ 28: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (Devanahalli) ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿರುವ ಆರ್ಟಿಪಿಸಿಆರ್ ಪ್ರಯೋಗಾಲಯವನ್ನು ಸನ್ನದ್ಧಗೊಳಿಸಲಾಗುತ್ತಿದೆ. ಕೊರೊನಾ ವೈರಸ್ (Covid-19) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಅದರಂತೆ ದೇವನಹಳ್ಳಿಯಲ್ಲಿಯೂ ಸಿದ್ಧತೆ ಆರಂಭಿಸಲಾಗಿದೆ. ದೇವನಹಳ್ಳಿಯ ಸರ್ಕಾರಿ ಆಸ್ವತ್ರೆಯಲ್ಲಿ ಕೋವಿಡ್ 2 ನೇ ಅಲೆ ಸಂದರ್ಭದಲ್ಲಿ ತೆರೆದಿದ್ದ ಆರ್ಟಿಪಿಸಿಆರ್ ಲ್ಯಾಬ್ ಅನ್ನು ಮಂಗಳವಾರ ಪುನರಾರಂಭ ಮಾಡಲಾಯಿತು. ಅಧಿಕಾರಿಗಳು ಲ್ಯಾಬ್ನಲ್ಲಿರುವ ಟೆಸ್ಟಿಂಗ್ ಯಂತ್ರಗಳ ಪರಿಶೀಲನೆ ನಡೆಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಾದರಿ ಸಂಗ್ರಹ ಹಾಗೂ ಪರೀಕ್ಷೆಗೆ ಆರ್ಟಿಪಿಸಿಆರ್ ಲ್ಯಾಬ್ ಪುನರಾರಂಭ ಮಾಡಲಾಗಿದೆ. ಲ್ಯಾಬ್ಗಳಿಗೆ ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಕೃಷ್ಣಾರೆಡ್ಡಿ ಬೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರು ನಗರದ ಹೊರವಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸಿದೆ. ಈ ಮಧ್ಯೆ, ಜಿಲ್ಲೆಯಲ್ಲಿ ಎರಡು ಸಕ್ರಿಯ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಒಬ್ಬರು ಪೈಲಟ್ ಆಗಿದ್ದಾರೆ. ಕೋವಿಡ್ ಪ್ರಕರಣಗಳ ಬಗ್ಗೆ ಗಮನಹರಿಸಿ, ಮಾದರಿ ಸಂಗ್ರಹ ಮಾಡುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಕೋವಿಡ್ ಪ್ರಕರಣಗಳಿವೆ, ಸೋಂಕು ಗಂಭೀರ ಪ್ರಮಾಣದಲ್ಲಿಲ್ಲ: ದಿನೇಶ್ ಗುಂಡೂರಾವ್
ಒಟ್ಟಾರೆಯಾಗಿ, ದೇಶದಲ್ಲೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ನಗರದ ಹೊರವಲಯದಲ್ಲೂ ಸೋಂಕು ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸೂಚನೆ ಬಂದಲ್ಲಿ ವಿಮಾನ ನಿಲ್ದಾಣದಲ್ಲೂ ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿ ಕೋವಿಡ್ ಪರೀಕ್ಷೆ ಆರಂಭಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 28 May 25







