IPL 2025: 81 ರನ್ ಬಾರಿಸಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ
Rohit Sharma: ರೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತವಾದ 81 ರನ್‌ಗಳ ಇನಿಂಗ್ಸ್ ಆಡಿದರು. ಇದು ಅವರ ಐಪಿಎಲ್ ಪ್ಲೇಆಫ್‌ನಲ್ಲಿನ ಅತಿ ಹೆಚ್ಚು ಸ್ಕೋರ್. ಈ ಇನಿಂಗ್ಸ್ ಮೂಲಕ ಅವರು ಐಪಿಎಲ್‌ನಲ್ಲಿ 7000 ರನ್‌ಗಳನ್ನು ಪೂರ್ಣಗೊಳಿಸಿದರು ಮತ್ತು 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರರಾದರು. ಪಂದ್ಯದಲ್ಲಿ ಅವರು 4 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು.
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 81 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಅವರು ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನು ನಿರ್ಮಿಸಿದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 4 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಈ ಸೀಸನ್ನಲ್ಲಿ ನಾಲ್ಕನೇ ಬಾರಿಗೆ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ ಸಾಧನೆ ಮಾಡಿದರು. ಗುಜರಾತ್ ವಿರುದ್ಧ ರೋಹಿತ್ ಶತಕ ಗಳಿಸಬಹುದಿತ್ತು ಆದರೆ ರನ್ ರೇಟ್ ಹೆಚ್ಚಿಸುವ ಪ್ರಯತ್ನದಲ್ಲಿ, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ರಶೀದ್ ಖಾನ್‌ಗೆ ಕ್ಯಾಚ್ ನೀಡಿದರು.
ದಾಖಲೆ ಬರೆದ ರೋಹಿತ್
ಐಪಿಎಲ್ ಪ್ಲೇಆಫ್‌ನಲ್ಲಿ ರೋಹಿತ್ ಶರ್ಮಾ ಮೊದಲ ಬಾರಿಗೆ ಇಷ್ಟು ದೊಡ್ಡ ಇನ್ನಿಂಗ್ಸ್ ಆಡಿದರು. 81 ರನ್‌ಗಳು ಪ್ಲೇಆಫ್‌ನಲ್ಲಿ ಅವರ ಅತ್ಯಧಿಕ ಇನ್ನಿಂಗ್ಸ್ ಆಗಿದೆ. ಇಷ್ಟೇ ಅಲ್ಲ, ಪ್ಲೇಆಫ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಇದು ಅತ್ಯುತ್ತಮ ಇನ್ನಿಂಗ್ಸ್ ಕೂಡ ಆಗಿದೆ. ಇದಕ್ಕೂ ಮೊದಲು ಈ ದಾಖಲೆ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು, ಅವರು 2019 ರಲ್ಲಿ ಚೆನ್ನೈ ವಿರುದ್ಧ ಅಜೇಯ 71 ರನ್ ಗಳಿಸಿದ್ದರು.
7 ಸಾವಿರ ರನ್ ಪೂರ್ಣ
ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 7000 ರನ್‌ಗಳನ್ನು ಪೂರ್ಣಗೊಳಿಸಿದರು. ವಿರಾಟ್ ಕೊಹ್ಲಿ ನಂತರ ಐಪಿಎಲ್‌ನಲ್ಲಿ 7000 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ರೋಹಿತ್ ಶರ್ಮಾ. ಇದಲ್ಲದೆ, ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

