ತಾಜ್ಮಹಲ್ ಮುಂದೆ ಕೇಸರಿ ಧ್ವಜ ಹಾರಿಸಿದ ಹಿಂದೂ ಜಾಗರಣ್ ಮಂಚ್ ಸದಸ್ಯರ ಬಂಧನ
ತಾಜ್ಮಹಲ್ ಮುಂದೆ ಹಿಂದೂ ಜಾಗರಣ್ ಮಂಚ್ ಸದಸ್ಯರು ಕೇಸರಿ ಧ್ವಜ ಹಾರಿಸಿದ ವಿಡಿಯೊ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಆಗ್ರಾ : ತಾಜ್ಮಹಲ್ ಮುಂದೆ ಹಿಂದೂ ಜಾಗರಣ್ ಮಂಚ್ ಸದಸ್ಯರು ಕೇಸರಿ ಧ್ವಜ ಹಾರಿಸಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ನಾಲ್ವರನ್ನು ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಧ್ವಜ ಹಾರಿಸಿದವರನ್ನು ಗೌರವ್ ಠಾಕೂರ್, ಸೋನು ಬಘೇಲ್, ವಿಶೇಷ್ ಕುಮಾರ್ ಮತ್ತು ರಿಷಿ ಲವಾನಿಯಾ ಎಂದು ಗುರುತಿಸಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಜ.4ರಂದು ಇವರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಗೌರವ್ ಠಾಕೂರ್ ಹಿಂದೂ ಜಾಗರಣ್ ಮಂಚ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿದ್ದಾರೆ.
ತಾಜ್ಮಹಲ್ ಆವರಣದಲ್ಲಿ ಮೂವರು ವ್ಯಕ್ತಿಗಳು ಕೇಸರಿ ಧ್ವಜ ಬೀಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ನಾಲ್ಕನೇ ವ್ಯಕ್ತಿ ಇದರ ವಿಡಿಯೊ ಚಿತ್ರೀಕರಣ ಮಾಡಿದ್ದನು.
ನಮ್ಮ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರ ತಪಾಸಣೆಗಾಗಿ ಮೆಟಲ್ ಡಿಟೆಕ್ಟರ್ ಬಳಸುತ್ತಾರೆ. ಅದರಲ್ಲಿ ಬಟ್ಟೆ ಪತ್ತೆಯಾಗುವುದಿಲ್ಲ. ಸೆಲ್ಫಿ ಸ್ಟಿಕ್ಗಳನ್ನು ಒಳಗೆ ತೆಗೆದುಕೊಂಡು ಹೋಗಬಹುದು. ಆ ವ್ಯಕ್ತಿಗಳು ಸೆಲ್ಫಿ ಸ್ಟಿಕ್ಗೆ ಧ್ವಜ ಸಿಕ್ಕಿಸಿ ಅದನ್ನು ಬೀಸಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ತಾಜ್ ಮಹಲ್ನ ಸಿಐಎಸ್ಎಫ್ ಕಮಾಂಡೆಂಟ್ ರಾಹುಲ್ ಯಾದವ್ ಹೇಳಿದ್ದಾರೆ.
ಈ ವ್ಯಕ್ತಿಗಳ ವಿರುದ್ಧ ತೇಜ್ ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ (ಧರ್ಮದ ವಿಚಾರದಲ್ಲಿ ಎರಡು ಗುಂಪುಗಳ ನಡುವಿನ ದ್ವೇಷಕ್ಕೆ ಪ್ರಚೋದನೆ) ಮತ್ತು ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ದೂರು ದಾಖಲಾಗಿದೆ.
ಆಗ್ರಾ ಮೆಟ್ರೊ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ