Kerala Assembly Elections 2021: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಬರಿಮಲೆಯ ಆಚಾರಗಳನ್ನು ಕಾಪಾಡಲು ಕಾನೂನು ತರುತ್ತೇವೆ: ರಾಜನಾಥ್ ಸಿಂಗ್

Rajnath Singh in Kerala: . ಕೇರಳದಲ್ಲಿರುವ ಎಡಪಕ್ಷ ಸರ್ಕಾರ ವಿರುದ್ಧ ಹರಿಹಾಯ್ದ ರಾಜನಾಥ್ ಸಿಂಗ್, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧವೇ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸಚಿವ ಸಂಪುಟ ನಿರ್ಧರಿಸಿದೆ. ಈ ಮೂಲಕ ಕೇರಳ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಗೆ ಸವಾಲು ಹಾಕಿದೆ ಎಂದು ಹೇಳಿದ್ದಾರೆ.

Kerala Assembly Elections 2021: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಬರಿಮಲೆಯ ಆಚಾರಗಳನ್ನು ಕಾಪಾಡಲು ಕಾನೂನು ತರುತ್ತೇವೆ: ರಾಜನಾಥ್ ಸಿಂಗ್
ಕೇರಳದಲ್ಲಿ ರಾಜನಾಥ್ ಸಿಂಗ್ ಸುದ್ದಿಗೋಷ್ಠಿ (ಕೃಪೆ: ಸಿ.ಎನ್. ಅಶ್ವತ್ ನಾರಾಯಣ್ ಅವರ ಟ್ವಿಟರ್ ಖಾತೆ)

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗಾಗಿ ಭಾನುವಾರ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಶಬರಿಮಲೆಯ ಸಂಪ್ರದಾಯ ಮತ್ತು ಆಚರಣೆಗಳನ್ನು ರಕ್ಷಿಸಲು ಕಾನೂನು ತರಲಾಗುವುದು. ಇದು ನಮ್ಮ ಪ್ರಮುಖ ನಿರ್ಧಾರಗಳಲ್ಲೊಂದು ಎಂದು ಹೇಳಿದ್ದಾರೆ. ಕೇರಳದಲ್ಲಿ ಎಲ್​ಡಿಎಫ್ ಮತ್ತು ಯುಡಿಎಫ್ ನಡುವೆ ರಾಜಕೀಯ ಪರ್ಯಾಯವೊಂದು ಬೇಕಿದೆ. ಬಿಜೆಪಿ ಅದನ್ನು ನೀಡಲಿದೆ. ಎಲ್​ಡಿಎಫ್ ಪೂರೈಸಿದ ಭರವಸೆಗಳ ಪಟ್ಟಿಯನ್ನು ನೀಡಬೇಕೇ ಹೊರತು ಹುಸಿ ಭರವಸೆಗಳನ್ನಲ್ಲ. ಪಿಣರಾಯಿ ವಿಜಯನ್ ನೇತೃತ್ವದಲ್ಲಿ 10 ಪಕ್ಷಗಳ ಗುಂಪು ಎಲ್​ಡಿಎಫ್ ಎಂದಿದ್ದಾರೆ ಸಿಂಗ್.

ಕೇರಳದಲ್ಲಿನ ರಾಜಕೀಯ ಹಿಂಸಾಚಾರಕ್ಕೆ ನಾವು ಅಂತ್ಯ ಕಾಣಿಸಲಿದ್ದೇವೆ. ಎಲ್​ಡಿಎಫ್ ಮತ್ತು ಯುಡಿಎಫ್ ಹೇಳುವುದೊಂದು ಮಾಡುವುದೊಂದು. ಜನರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕೇರಳದಲ್ಲಿರುವ ಎಡಪಕ್ಷ ಸರ್ಕಾರ ವಿರುದ್ಧ ಹರಿಹಾಯ್ದ ರಾಜನಾಥ್ ಸಿಂಗ್, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧವೇ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸಚಿವ ಸಂಪುಟ ನಿರ್ಧರಿಸಿದೆ. ಈ ಮೂಲಕ ಕೇರಳ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಗೆ ಸವಾಲು ಹಾಕಿದೆ ಎಂದು ಹೇಳಿದ್ದಾರೆ.

ಕೇರಳದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸ್ವಪ್ನಾ ಸುರೇಶ್ ಅವರದು ಎನ್ನಲಾಗಿರುವ ಧ್ವನಿ ತುಣುಕೊಂದನ್ನು ತನಿಖೆ ನಡೆಸುತ್ತಿರುವ ಕ್ರೈಂ ವಿಭಾಗದ ಪೊಲೀಸರ ವರದಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿ ಸಿಂಗ್ ಈ ಮಾತನ್ನು ಹೇಳಿದ್ದಾರೆ.

ಸಿಪಿಐ(ಎಂ) ನೇತೃತ್ವದ ಎಲ್​ಡಿಎಫ್ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷ ಯುಡಿಎಫ್ ಕೇರಳದಲ್ಲಿ ಸೌಹಾರ್ದ ಪಂದ್ಯವನ್ನಾಡುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿರುವಾಗ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.


ಎಲ್​ಡಿಎಫ್ ಅಥವಾ ಯುಡಿಎಫ್​ನ ಗೆಲುವು ಕೇರಳದ ಜನರ ಸೋಲಾಗಲಿದೆ. ಎಲ್​ಡಿಎಫ್ ಮತ್ತು ಯುಡಿಎಫ್​ನ ಸಮಯ ಮುಗಿದಿದೆ. ಈ ಎರಡೂ ಮೈತ್ರಿಕೂಟಗಳು ಕೇರಳದ ಜನರ ಹಂಬಲವನ್ನು ಅರ್ಥ ಮಾಡಿಕೊಂಡಿಲ್ಲ. ಜನ ಬದಲಾವಣೆ ಬಯಸುತ್ತಾರೆ. ಈ ಎರಡೂ ಪಕ್ಷಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಚುನಾವಣಾ ಪ್ರಚಾರದ ನಂತರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಸಚಿವರು, ಮೀನುಗಾರರನ್ನು ಕೂಡಾ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ₹6000 ಸಹಾಯಧನ ಸಿಗಲಿದೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಸಾಲ ನೀಡುವ ಮೂಲಕ ಮೋದಿ ಸರ್ಕಾರ ಸಹಾಯ ಮಾಡಲಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ( CAA) ಅನುಷ್ಠಾನಕ್ಕೆ ತರುವ ಮೂಲಕ ನಾವು ಜಾತಿ-ಧರ್ಮ ಭೇದವಿಲ್ಲದೆ ದೇಶದ ಪ್ರಜೆಗಳನ್ನು ಸಂರಕ್ಷಿಸುತ್ತೇವೆ ಎಂದು ಹೇಳಿದ ಸಿಂಗ್, ಸಂವಿಧಾನದ 370ನೇ ವಿಧಿ ರದ್ದು, ತ್ರಿವಳಿ ತಲಾಖ್ ರದ್ದು ಮತ್ತು ಸಿಎಎ ಅನುಷ್ಠಾನಕ್ಕೆ ತರುವುದಾಗಿ ನಾವು ಭರವಸೆ ನೀಡಿದ್ದೆವು. ಅದನ್ನು ಬಿಜೆಪಿ ಪೂರೈಸಿದೆ ಎಂದು ಅವರು ಹೇಳಿದ್ದಾರೆ.

140 ಸೀಟುಗಳಿರುವ ಕೇರಳ ವಿಧಾನಸಭೆಗೆ ಏಪ್ರಿಲ್ 6ರಂದು  ಚುನಾವಣೆ ನಡೆಯಲಿದ್ದು ಮೇ. 2ರಂದು  ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿKerala Assembly Elections 2021: ಕೇರಳದಲ್ಲಿ ಬಿಜೆಪಿ ಕಿಂಗ್ ಮೇಕರ್ ಆಗಲಿದೆ: ಇ.ಶ್ರೀಧರನ್ 

Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್

 

Click on your DTH Provider to Add TV9 Kannada