ಕೇರಳದಲ್ಲಿ LDF ವಿಜಯೋತ್ಸವ; ಇದು ಜನರ ಗೆಲುವು ಎಂದ ಪಿಣರಾಯಿ ವಿಜಯನ್

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್​​ಡಿಎಫ್​ನ ಗೆಲುವು ಜನರ ಗೆಲುವು ಆಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳದಲ್ಲಿ LDF ವಿಜಯೋತ್ಸವ; ಇದು ಜನರ ಗೆಲುವು ಎಂದ ಪಿಣರಾಯಿ ವಿಜಯನ್
ಮಲಪ್ಪುರಂನಲ್ಲಿ ಎಲ್​​ಡಿಎಫ್ ಕಾರ್ಯಕರ್ತರ ಸಂಭ್ರಮಾಚರಣೆ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್​​ಡಿಎಫ್ ಅಧಿಪತ್ಯ ಸ್ಥಾಪಿಸಿದೆ. ಗ್ರಾಮ ಪಂಚಾಯತಿಗಳಲ್ಲಿಯೂ ಬ್ಲಾಕ್, ಜಿಲ್ಲಾ ಪಂಚಾಯತಿ ಮತ್ತು ಕಾರ್ಪೊರೇಷನ್​ಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ. ಮುನ್ಸಿಪಾಲಿಟಿಗಳಲ್ಲಿ ಯುಡಿಎಫ್- ಎಲ್​​ಡಿಎಫ್ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿತ್ತು.

941 ಗ್ರಾಮ ಪಂಚಾಯತಿ​​ಗಳ ಪೈಕಿ 517 ಸೀಟುಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ. ಯುಡಿಎಫ್ 374, ಎನ್​​ಡಿಎ 22, ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರ ಪಕ್ಷಗಳು 28 ಸೀಟುಗಳಲ್ಲಿ ಮುನ್ನಡೆ ಸಾಧಿಸಿವೆ. ಬ್ಲಾಕ್ ಪಂಚಾಯತ್​​ನ 152 ಸೀಟುಗಳ ಪೈಕಿ ಎಲ್​​ಡಿಎಫ್ 107, ಯುಡಿಎಫ್ 45 ಸೀಟುಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಒಟ್ಟು 14 ಜಿಲ್ಲಾ ಪಂಚಾಯತಿಗಳಲ್ಲಿ 10 ಸೀಟುಗಳಲ್ಲಿ ಎಲ್​​ಡಿಎಫ್ ಮತ್ತು ಯುಡಿಎಫ್ 4 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಮುನ್ಸಿಪಾಲಿಟಿಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದ್ದು 86 ಸೀಟುಗಳ ಪೈಕಿ 45 ಸೀಟುಗಳಲ್ಲಿ ಯುಡಿಎಫ್ ಮತ್ತು 35 ಸೀಟುಗಳಲ್ಲಿ ಎಲ್​​ಡಿಎಫ್ ಮುನ್ನಡೆ ಇದೆ.

ಕಾರ್ಪೊರೇಷನ್  ಚುನಾವಣೆ ತಿರುವನಂತಪುರಂ (43), ಕೊಲ್ಲಂ (38), ಕೋಯಿಕ್ಕೋಡ್ (47) ಮಹಾನಗರಪಾಲಿಕೆಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ. ಕೊಚ್ಚಿ ಕಾರ್ಪೊರೇಷನ್​ನಲ್ಲಿ ಎಲ್​​ಡಿಎಫ್ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಕಣ್ಣೂರು (2), ತ್ರಿಶ್ಶೂರ್ (23) ಸೀಟುಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ತಿರುವನಂತಪುರಂನಲ್ಲಿ ಕಳೆದ ವರ್ಷ ಎಲ್​​ಡಿಎಫ್ 42 ಸೀಟು ಗಳಿಸಿತ್ತು. ಈ ಹಿಂದೆ 20 ಸೀಟುಗಳಿಸಿದ್ದ ಯುಡಿಎಫ್​ಗೆ ಈ ಬಾರಿ 9 ಸೀಟುಗಳಲ್ಲಷ್ಟೇ ಜಯ ಸಾಧಿಸಲು ಸಾಧ್ಯವಾಗಿದ್ದು. ಕಳೆದ ಬಾರಿ 35 ಸೀಟುಗಳಿಸಿದ್ದ ಎನ್​ಡಿಎ ಈ ಬಾರಿ 27 ಸೀಟುಗಳಲ್ಲಿ ಮುನ್ನಡೆ ಗಳಿಸಿದೆ.

ಬಿಜೆಪಿಗೆ ಈ ಬಾರಿ ಹೆಚ್ಚಿನ ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಪಾಲಕ್ಕಾಡ್ ಮುನ್ಸಿಪಾಲಿಟಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಗಿದೆ. ತ್ರಿಶ್ಶೂರ್ ಕಾರ್ಪೊರೇಷನ್​ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನೇತಾರ ಬಿ.ಗೋಪಾಲಕೃಷ್ಣ ಅವರ ಸೋಲು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಿದೆ.

ರಾಜಕೀಯ ಪಕ್ಷಗಳ ವಿರುದ್ಧ ಸಂಘಟಿತವಾದ ಟ್ವೆಂಟಿ- 20 ಪಕ್ಷವು ಕಿಳಕ್ಕಂಬಲಂ, ಐಕ್ಕರನಾಡಿನಲ್ಲಿ ಗೆಲುವು ಸಾಧಿಸಿದೆ. ಮುಳುವನ್ನೂರ್, ಕುನ್ನತ್ತುನಾಡ್​ನಲ್ಲಿ ಟ್ವೆಂಟಿ – 20 ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿದೆ. ಪಾಲಾ ನಗರಸಭೆಯಲ್ಲಿ ಜೋಸ್ ಕೆ. ಮಾಣಿ ಪಕ್ಷದ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕೋಟ್ಟಯಂ ಜಿಲ್ಲಾ ಪಂಚಾಯತ್ ನಲ್ಲಿ ಎಲ್​​ಡಿಎಫ್ ಹೆಚ್ಚಿನ ಸೀಟುಗಳಿಸುವಲ್ಲಿ ಯಶಸ್ವಿಯಾಗಿದೆ.

ಇದು ಜನರ ಗೆಲುವು: ಸಿಎಂ ಪಿಣರಾಯಿ ವಿಜಯನ್ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್​​ಡಿಎಫ್​ನ ಗೆಲುವು ಜನರ ಗೆಲುವು ಆಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನ್, ಕೇರಳದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುವವರಿಗೆ ನಾಡಿನ ಜನರು ನೀಡಿದ ಉತ್ತರವಾಗಿದೆ ಈ ಚುನಾವಣಾ ಫಲಿತಾಂಶ ಎಂದಿದ್ದಾರೆ.

ದಲ್ಲಾಳಿಗಳಿಗೂ, ಅಪಪ್ರಚಾರ ಮಾಡುತ್ತಿರುವವರಿಗೂ ಕೇರಳಿಗರು ಸೂಕ್ತ ಉತ್ತರವನ್ನೇ ನೀಡಿದ್ದಾರೆ. ಕೇರಳ ರಾಜಕೀಯದಲ್ಲಿ ಯುಡಿಎಫ್ ಹೇಳಹೆಸರಿಲ್ಲದಂತಾಗುತ್ತಿದೆ. ಬಿಜೆಪಿಯ ಕುತಂತ್ರಗಳು ಮತ್ತೊಮ್ಮೆ ವಿಫಲವಾಗಿದೆ. ಕೇರಳ ರಾಜಕೀಯದಲ್ಲಿ ಧಾರ್ಮಿಕ, ಮತ ದ್ವೇಷಗಳಿಗೆ ಜಾಗವಿಲ್ಲ ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ ಎಂದಿದ್ದಾರೆ ಪಿಣರಾಯಿ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್​ಬಿಟ್ಟ BJP

Published On - 7:25 pm, Wed, 16 December 20

Click on your DTH Provider to Add TV9 Kannada