ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್

Kerala Assembly Elections 2021: ಕೇರಳದಲ್ಲಿ ಶೇ.55ರಷ್ಟು ಹಿಂದೂಗಳು ಮತ್ತು ಶೇ.45ರಷ್ಟು ಅಲ್ಪ ಸಂಖ್ಯಾತರು ಇದ್ದಾರೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಬೇರೆ ರಾಜ್ಯಗಳೊಂದಿಗೆ ಕೇರಳವನ್ನು ಹೋಲಿಸಲು ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ ಎಂದು ಒ.ರಾಜಗೋಪಾಲ್ ಹೇಳಿದ್ದಾರೆ.

ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್
ಒ. ರಾಜಗೋಪಾಲ್
Follow us
|

Updated on: Mar 24, 2021 | 12:27 PM

ತಿರುವನಂತಪುರಂ: ಕೇರಳ ರಾಜ್ಯ ಇತರ ರಾಜ್ಯಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಇಲ್ಲಿ ಶೇಕಡಾ 90ರಷ್ಟು ಸಾಕ್ಷರತೆ ಇದೆ. ಇಲ್ಲಿನ ಜನರು ಯೋಚಿಸುತ್ತಾರೆ, ಚರ್ಚಿಸುತ್ತಾರೆ. ವಿದ್ಯಾವಂತರ ಗುಣಲಕ್ಷಣಗಳಿವು. ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಸಾಧ್ಯವಾಗದೇ ಇರುವುದಕ್ಕೆ ಇರುವ ಕಾರಣಗಳಲ್ಲಿ ಇದೂ ಒಂದು ಎಂದು ಕೇರಳ ಬಿಜೆಪಿ ಶಾಸಕ ಒ.ರಾಜಗೋಪಾಲ್ ಹೇಳಿದ್ದಾರೆ. ಹರ್ಯಾಣ ಮತ್ತು ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೇರಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿಧಾನವಾಗಿ ತಮ್ಮ ಇರುವಿಕೆಯನ್ನು ತೋರಿಸುತ್ತಿದೆ. ಆದರೆ ಕೇರಳದಲ್ಲಿ ಇಲ್ಲಿಯವರೆಗೆ ಬಿಜೆಪಿಗೆ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ರಾಜಗೋಪಾಲ್ ಈ ರೀತಿ ಉತ್ತರಿಸಿದ್ದಾರೆ.

ಕೇರಳದಲ್ಲಿ ಶೇ.55ರಷ್ಟು ಹಿಂದೂಗಳು ಮತ್ತು ಶೇ.45ರಷ್ಟು ಅಲ್ಪ ಸಂಖ್ಯಾತರು ಇದ್ದಾರೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಬೇರೆ ರಾಜ್ಯಗಳೊಂದಿಗೆ ಕೇರಳವನ್ನು ಹೋಲಿಸಲು ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಕೇರಳದಲ್ಲಿ ಬಿಜೆಪಿ ನಿಧಾನವಾಗಿ ಬೆಳೆಯುತ್ತಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ರಾಜಗೋಪಾಲ್ ಹೇಳಿದ್ದಾರೆ.

2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನೇಮಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಒ.ರಾಜಗೋಪಾಲ್ ಗೆಲುವಿನ ಮೂಲಕ ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿತ್ತು. ಕೇರಳದಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿದ್ದಾರೆ ರಾಜಗೋಪಾಲ್. ಈ ಬಾರಿ ಚುನಾವಣೆ ಸ್ಪರ್ಧಿಸುವುದಿಲ್ಲ ಯಾಕೆ ಎಂದು ಕೇಳಿದಾಗ, ನನ್ನ ವಯಸ್ಸು 93. ನನ್ನ ಆರೋಗ್ಯ ಸಾಥ್ ಕೊಡುತ್ತಿಲ್ಲ. ಹಾಗಾಗಿಯೇ ನಾನು ಹಿಂದೆ ಸರಿದಿದ್ದು, ಕುಮ್ಮನಂ ರಾಜಶೇಖರನ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ.ನಾನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಅವರ ಗೆಲುವಿಗಾಗಿ ನಾನು ಪ್ರಯತ್ನಿಸುವೆ, ಅವರು ಗೆಲ್ಲಲಿ ಎಂಬುದು ನನ್ನ ಹಾರೈಕೆ.

ನೇಮಂನಲ್ಲಿ ಬಿಜೆಪಿ ವಿರುದ್ಧ ಸ್ಪರ್ಧೆಗಿಳಿದಿರುವುದು ಸಂಸದ, ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ. ಮುರಳೀಧರನ್. ಹಾಗಾಗಿ ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ, ಕಾಂಗ್ರೆಸ್-ಬಿಜೆಪಿ- ಎಲ್ ಡಿಎಫ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕಾಂಗ್ರೆಸ್ ಬಗ್ಗೆ ಹೇಳುವುದಾದರೆ ಕಾಂಗ್ರೆಸ್​ನ ಘನತೆ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟದಲ್ಲಿ ದುರ್ಬಲವಾಗಿದೆ. ಕಾಂಗ್ರೆಸ್​ನ ದಿವಂಗತ ನೇತಾರ ಕೆ.ಕರುಣಾಕರನ್ ಅವರ ಪುತ್ರ ಮುರಳೀಧರನ್ ಎಂಬುದು ಇಲ್ಲಿ ಪ್ರಾಮುಖ್ಯತೆ ವಹಿಸುವುದಿಲ್ಲ. ನನಗೆ ಮುರಳೀಧರನ್ ಜತೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಆದರೆ ಮಗ ಮಗನೇ, ಅಪ್ಪ ಅಪ್ಪನೇ ಎಂದಿದ್ದಾರೆ ರಾಜಗೋಪಾಲ್.

O Rajagopal- Kummanan Rajasekharan

ಕುಮ್ಮನಂ ರಾಜಶೇಖರನ್ ಜತೆ ರಾಜಗೋಪಾಲ್

ಕೇರಳದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಭಿನ್ನಾಭಿಪ್ರಾಯಗಳು ಇತ್ತೇ? ಎಂದು ಕೇಳಿದಾಗ, ಸ್ವಲ್ಪ ಪ್ರಮಾಣದಲ್ಲಿತ್ತು. ಕೊಳೆಯಾದ ಬಟ್ಟೆ ಮೇಲೆ ಶಾಯಿಯ ಹನಿಯೊಂದು ಬಿದ್ದರೆ ಯಾರೂ ಗಮನಿಸುವುದಿಲ್ಲ. ಅದೇ ಬಿಳಿ ಬಟ್ಟೆಯ ಮೇಲೆ ಶಾಯಿ ಬಿದ್ದರೆ ಅದು ಎದ್ದು ಕಾಣುತ್ತದೆ. ಅದೇ ರೀತಿ ಬಿಜೆಪಿಯಲ್ಲಿ ಏನೇ ಸಂಭವಿಸಿದರು ಅದು ಬೇಗ ಎದ್ದು ಕಾಣುತ್ತದೆ. ಸೀಟುಗಳಿಗೆ ಬೇಡಿಕೆ ಇತ್ತು ಎಂಬುದು ನಿಜ. ಕೆಲವೊಂದು ಕಡೆ ಪರಿಶಿಷ್ಟ ಜಾತಿಯವರಿಗೆ ಸೀಟು ಕೊಡಲೇ ಬೇಕಿತ್ತು. ಅಲ್ಲಿ ಇನ್ನೊಬ್ಬರು ಬಂದು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ನನಗೆ ಸೀಟು ನೀಡಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಅದೆಲ್ಲವೂ ಸರಿ, ಆದರೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ.

ಆರ್ಗನೈಸರ್ ವೀಕ್ಲಿಯ ಮಾಜಿ ಸಂಪಾದಕ ಆರ್. ಬಾಲಶಂಕರ್ ಅವರು ಬಿಜೆಪಿ ಮತ್ತು ಸಿಪಿಎಂ ನಡುವೆ ಹೊಂದಾಣಿಕೆ ಆಗಿದೆ ಎಂದು ಆರೋಪಿಸಿದ್ದರು. ಅವರು ಚೆಂಗನ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರು ಈ ಬಗ್ಗೆ ನೀವೇನಂತೀರಿ? ಎಂದು ಕೇಳಿದಾಗ, ಬಾಲಶಂಕರ್ ಕೇರಳಿಗರಲ್ಲ. ಅವರು ದೆಹಲಿ ಮೂಲದವರು. ಅವರು ಕೇರಳದಲ್ಲಿ ಹುಟ್ಟಿದ್ದಾರೆ ಎಂಬುದು ಬಿಟ್ಟರೆ ಬೇರೆ ಯಾವುದೇ ಸಂಬಂಧ ಅವರಿಗೆ ಕೇರಳದೊಂದಿಗೆ ಇಲ್ಲ. ನಮಗೆ ಜನರ ಮತ ಪಡೆಯಬೇಕಲ್ಲವೇ? ಎಂದು ಉತ್ತರಿಸಿದ್ದಾರೆ ರಾಜಗೋಪಾಲ್.

ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷೆ ಕೆ. ಸುರೇಂದ್ರನ್ ರಾಜ್ಯದ ಉತ್ತರ ಭಾಗದಲ್ಲಿರುವ ಮಂಜೇಶ್ವರ ಮತ್ತು ದಕ್ಷಿಣ ಭಾಗದಲ್ಲಿನ ಕೊನ್ನಿ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? ಕಳೆದ ಬಾರಿ ಸುರೇಂದ್ರನ್ 89 ಮತಗಳಿಂದ ಮಂಜೇಶ್ವರದಲ್ಲಿ ಪರಾಭವಗೊಂಡಿದ್ದರು. ಹಾಗಾಗಿ ಈ ಬಾರಿ ಅವರು ಅಲ್ಲಿ ವಿಜಯಗಳಿಸುವ ಸಾಧ್ಯತೆ ಇದೆ. ಕೊನ್ನಿಯೊಂದಿಗೆ ಸುರೇಂದ್ರನ್ ಅವರಿಗೆ ಭಾವನಾತ್ಮಕ ಸಂಬಂಧ ಇದೆ.

ನೀವು ಪಿಣರಾಯಿ ವಿಜಯನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಇದಕ್ಕೆ ಕಾರಣವೇನು? ಎಂದು ಕೇಳಿದಾಗ, ಅದರಲ್ಲಿ ರಾಜಕೀಯವಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ನಾವು ಅದನ್ನು ಶ್ಲಾಘಿಸಬೇಕು. ರಾಜಕಾರಣಿ ಅಂದ ಮಾತ್ರಕ್ಕೆ ಸುಳ್ಳು ಹೇಳಬೇಕೆಂದಿಲ್ಲ, ನಾವು ಸತ್ಯವನ್ನು ಹೇಳಬೇಕು. ಪ್ರಾಮಾಣಿಕತೆ ಇರಬೇಕು. ನಾನು ವಿ.ಎಸ್. ಅಚ್ಯುತಾನಂದನ್ ಬಗ್ಗೆ ಇದೇ ರೀತಿ ಹೇಳಲ್ಲ. ಎಲ್ಲ ವ್ಯಕ್ತಿಗಳಿಗೆ ಅವರದ್ದೇ ಆದ ಗುಣಗಳಿವೆ. ವಿಜಯನ್ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಗೊತ್ತು. ಅವರು ಸಮರ್ಥ, ಚತುರ, ಮಾತು ಕಮ್ಮಿ ಆದರೆ ಗುರಿ ನಿಖರವಾಗಿರುತ್ತದೆ. ಅವರಲ್ಲಿರುವ ಒಳ್ಳೆಯ ಗುಣಗಳನ್ನು ಅಲ್ಲಗೆಳೆಯ ಬಾರದು. ನೀರಾ (ಕಳ್ಳು) ಇಳಿಸುವ ಕೆಲಸಗಾರರನ ಮಗ ಅವರು. ಅವರು ಬಡತನದಲ್ಲಿ ಬೆಳೆದು ಬಂದವರು. ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅವರ ಗುಣಗಳೇ ಅದಕ್ಕೆ ಕಾರಣ. ಸತ್ಯವನ್ನು ನಾವು ಒಪ್ಪಲೇ ಬೇಕು. ನಾನು ಎಲ್ಲರ ಜತೆ ಸೌಹಾರ್ದತೆಯಿಂದ ಇರುತ್ತೇನೆ. ತುರ್ತು ಸಂದರ್ಭದಲ್ಲಿ ನಾನು ಜೈಲಿಗೆ ಹೋದಾಗಲೂ ಅಲ್ಲಿ ಕಮ್ಯುನಿಸ್ಟ್, ಸೋಷ್ಯಲಿಸ್ಟ್ ಇತರ ಜನರೊಂದಿಗೆ ನಾನು ಪ್ರೀತಿಯಿಂದ ಒಡನಾಡಿದ್ದೆ.

ಕೇರಳದಲ್ಲಿ ಪಿಣರಾಯಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿದೆಯೆ? ಎಂದು ಕೇಳಿದಾಗ, ಕೆಲವು ಜನರಲ್ಲಿ ಆ ಭಾವನೆ ಇದೆ, ಆದರೆ ನಾನು ಅದೇ ನಿರ್ಣಾಯಕ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಕುಸಿಯುತ್ತಲೇ ಇದೆ. ಅದನ್ನು ಮೇಲೆತ್ತಲು ಯಾರೂ ಸಹಾಯ ಮಾಡಲಾರರು. ಅದರ ದಿನಗಳು ಮುಗಿದಿವೆ. ಪ್ರತಿಪಕ್ಷಗಳನ್ನು ಜನರು ಒಪ್ಪಿಕೊಂಡಿಲ್ಲ. ರಮೇಶ್ (ಚೆನ್ನಿತ್ತಲ) ಸ್ಮಾರ್ಟ್ ಆಗಿರಬಹುದು. ಆದರೆ ಕಾಂಗ್ರೆಸ್ ಮುಳುಗುವ ಹಡಗು ಆಗಿರುವುದರಿಂದ ಜನರು ಕಾಂಗ್ರೆಸ್ ಜತೆ ಸೇರಲು ಹೆದರುತ್ತಾರೆ ಎಂದು ರಾಜಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳವು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ರಾಜ್ಯ ದರ ಕಡಿತ ಮಾಡಿ ಎಂದು ಕೇಳುತ್ತಿಲ್ಲ ಏಕೆಂದರೆ ಅವರೆಲ್ಲರೂ ದರ ಏರಿಕೆ ಯಿಂದ ಲಾಭ ಪಡೆಯುತ್ತಿದ್ದಾರೆ. ಪ್ರತಿ 1 ಲೀಟರ್ ಪೆಟ್ರೋಲ್‌ನಲ್ಲಿ ರಾಜ್ಯಕ್ಕೂ ತೆರಿಗೆಯ ಪಾಲು ಸಿಗುತ್ತಿದೆ. ಆದ್ದರಿಂದ ಅವರು ದೂರುತ್ತಿಲ್ಲ. ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಏನು ಮಾಡುವುದು?  ಪೆಟ್ರೋಲ್ ದರದಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳ ಕೈವಾಡವಿದೆ . ಇಲ್ಲಿ ಕೇವಲ ಪರಿಸ್ಥಿತಿಯ ಕಾರಣದಿಂದ  ದರ ಏರಿಕೆಯಾಗುತ್ತಿಲ್ಲ. ಪೆಟ್ರೋಲ್ ಉತ್ಪಾದಿಸುವ ಅರಬ್ ರಾಷ್ಟ್ರಗಳು, ಅವರ ರಾಜಕೀಯ, ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸುವ ಉತ್ಸಾಹ, ಎಲ್ಲವೂ ಪರಸ್ಪರ ಬೆಸೆದುಕೊಂಡಿವೆ ಆದ್ದರಿಂದ, ಇದು ನಮ್ಮ ನಿಯಂತ್ರಣದಲ್ಲಿಲ್ಲ ಎಂದಿದ್ದಾರೆ.

ಶಾಸಕರಾಗಿ ನಿಮ್ಮ ಕಾರ್ಯಕ್ಷಮತೆಯನ್ನು ನೀವು ಹೇಗೆ ನಿರ್ಣಯಿಸುತ್ತೀರಿ ಎಂದು ಕೇಳಿದಾಗ ನಾನು ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಅಭಿವೃದ್ಧಿಯ ದೃಷ್ಟಿಯಿಂದ ನೇಮಂ ಗರಿಷ್ಠ ಅಭಿವೃದ್ಧಿಯನ್ನು ಹೊಂದಿದೆ ಎಂಬ ಅಭಿಪ್ರಾಯವಿದೆ. ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳನ್ನು ನಿರ್ಮಿಸುವುದು,ದೀಪಗಳನ್ನು ಅಳವಡಿಸುವುದು ಸಾಮಾನ್ಯ ಜನರು ಬಯಸುವುದು ಇದನ್ನೇ ಎಂದು ಹೇಳಿದ್ದಾರೆ.

ಕೊನೆಯದಾಗಿ ಈ ಬಾರಿ ಬಿಜೆಪಿ ಯಾವ ರೀತಿ ಸಾಧನೆ ಮಾಡಬಹುದು ಎಂದು ಕೇಳಿದಾಗ ಒಮ್ಮೆಯಾದರೂ ಬಿಜೆಪಿ ಎರಡಂಕಿ ಸ್ಥಾನಗಳನ್ನು ಬಿಜೆಪಿ ಗಳಿಸಲಿ ಎಂಬುದು ನನ್ನ ಆಶಯ. ಅದು ಸಾಧ್ಯ ಆಗುತ್ತದೆ ಎಂದು ಬಿಜೆಪಿ ಶಾಸಕ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kerala Assembly Elections 2021: ಕಲ್ಯಾಣ ಪಿಂಚಣಿ 2500 ರೂ, ಗೃಹಿಣಿಯರಿಗೂ ಸಿಗಲಿದೆ ಪಿಂಚಣಿ: ಚುನಾವಣೆ ಪ್ರಣಾಳಿಕೆ ಪ್ರಕಟಿಸಿದ ಎಲ್​ಡಿಎಫ್