ಶಬರಿಮಲೆ ಅಫಿಡವಿಟ್ನಲ್ಲಿ ಯಾವುದೇ ಬದಲಾವಣೆ ಇಲ್ಲ, ಎಲ್ಡಿಎಫ್ ಸರ್ಕಾರದ ನಿಲುವು ಅಚಲ: ಸಿಪಿಐ ನಾಯಕ ಕಾನಂ ರಾಜೇಂದ್ರನ್
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಶಬರಿಮಲೆ ವಿಷಯದಲ್ಲಿ ಸರ್ಕಾರ ಈಗಾಗಲೇ ನಿಲುವು ಸ್ವೀಕರಿಸಿದ್ದು, ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಕೇರಳ ರಾಜ್ಯ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇರಳದ ಎಲ್ಡಿಎಫ್ ಮೈತ್ರಿಕೂಟದ ಸಿಪಿಐ ಪಕ್ಷ ಹೇಳಿದೆ. 10-50 ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪನ ದೇವಸ್ಥಾನದೊಳಗೆ ಪ್ರವೇಶ ನೀಡುವ ವಿಷಯವನ್ನು ಸರ್ಕಾರ ನಿರ್ಧರಿಸುವಂತಿಲ್ಲ ಎಂಬ ನಿಲುವನ್ನು ಅಫಿಡವಿಟ್ ತೆಗೆದುಕೊಂಡಿದೆ ಎಂದು ಸಿಪಿಐ ಸಮರ್ಥಿಸಿಕೊಂಡಿದ್ದು, ದೇವಾಲಯ ಪ್ರವೇಶವನ್ನು ಅಫಿಡವಿಟ್ ಬೆಂಬಲಿಸಿದೆ ಎಂದು ಬಿಜೆಪಿ ಆರೋಪಿಸಿದೆ. ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ನಿರ್ಧಾರವನ್ನು ಎಲ್ಡಿಎಫ್ ಬೆಂಬಲಿಸಿದೆ ಎಂಬುದು ಸಿಪಿಐ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಹೇಳಿದೆ.
ಏಪ್ರಿಲ್ 6 ರ ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ಧತೆ ನಡೆಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ವಿಪಕ್ಷ ಶಬರಿಮಲೆ ವಿಷಯವನ್ನು ಮುನ್ನೆಲೆಗೆ ತಂದಿದ್ದು,ಈ ವಿಚಾರದಲ್ಲಿ ಸರ್ಕಾರದ ನಿಲುವು ಏನು ಎಂಬುದನ್ನು ಅರಿಯಲು ಉತ್ಸುಕವಾಗಿದೆ.
ಶಬರಿಮಲೆ ಮಹಿಳೆಯ ಪ್ರವೇಶದ ವಿಚಾರದ ಬಗ್ಗೆ ಅಫಿಡವಿಟ್ ಸುಪ್ರೀಂಕೋರ್ಟ್ನಲ್ಲಿದೆ. ಕೋಟ್ಟಯಂನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಬರಿಮಲೆ ವಿಚಾರದ ಪರಿಶೀಲನಾ ಮನವಿ ಸುಪ್ರೀಂಕೋರ್ಟ್ನಲ್ಲಿದೆ. ಈ ಚುನಾವಣೆ ಹೊತ್ತಿನಲ್ಲಿ ಕೆಲವರು ಈ ವಿಷಯವನ್ನು ಮತ್ತೆ ಕೆದಕುತ್ತಿದ್ದಾರೆ ಎಂದಿದ್ದಾರೆ. ಈಗ ಅದನ್ನು ಕೆದಕುವ ಅಗತ್ಯವಿಲ್ಲ. ಅಂತಿಮ ತೀರ್ಪಿನ ನಂತರ ಇತರ ವಿಷಯಗಳ ಬಗ್ಗೆ ಯೋಚಿಸೋಣ ಎಂದು ಹೇಳಿದ ಪಿಣರಾಯಿ ವಿಜಯನ್, ಶಬರಿಮಲೆ ದೇವಾಲಯದಲ್ಲಿ ಯಾತ್ರಾರ್ಥಿಗಳ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ 1,487 ಕೋಟಿ ರೂ. ಅನುದಾನ ನೀಡಿದೆ ಎಂದಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಶಬರಿಮಲೆ ವಿಷಯದಲ್ಲಿ ಸರ್ಕಾರ ಈಗಾಗಲೇ ನಿಲುವು ಸ್ವೀಕರಿಸಿದ್ದು, ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬೇಕೇ ಬೇಡವೇ ಎಂಬುದರ ಬಗ್ಗೆ ಸರ್ಕಾರವಲ್ಲ, ಹಿಂದೂ ಧರ್ಮದ ಅಧ್ಯಯನಕಾರರು ಮತ್ತು ತಜ್ಞರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಫಿಡವಿಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ
ರಾಜ್ಯ ಸರ್ಕಾರ ಮತ್ತು ಟ್ರಾವೆಂಕೂರ್ ದೇವಸ್ವಂ ಮಂಡಳಿಯು ಮೂಲ ಅರ್ಜಿ ಬಗ್ಗೆ ತಮ್ಮ ನಿಲುವು ವ್ಯಕ್ತ ಪಡಿಸಿದ್ದು, ಆ ನಿಲುವು ಮುಂದುವರಿಯಲಿದ. ದೇವಾಲಯದ ಆಚಾರ ಮತ್ತು ಸಂಪ್ರದಾಯಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿರುವುದು ರಾಜ್ಯ ಸರ್ಕಾರವಲ್ಲ. ಹಿಂದೂ ಧರ್ಮದ ಪ್ರವೀಣರಾಗಿರುವ ವಿದ್ವಾಂಸರು ಮತ್ತು ತಜ್ಞರ ಸಮಿತಿಯನ್ನು ರಚಿಸಿ, ಮಹಿಳೆಯರ ಪ್ರವೇಶದ ಬಗ್ಗೆ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಅಂತಿಮ ತೀರ್ಮಾನ ಪ್ರಕಟಿಸಬೇಕು ಎಂದು ಸರ್ಕಾರ ಅಫಿಡವಿಟ್ನಲ್ಲಿ ಹೇಳಿದೆ. ಸರ್ಕಾರ ತಮ್ಮ ನಿಲುವು ಮುಂದುವರಿಸಲಿದೆ ಎಂದು ಸಿಪಿಐ ನೇತಾರ ಕಾನಂ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಎಡಪಕ್ಷ ಬೆಂಬಲಿಸುತ್ತಿದೆ. ಅಫಿಡವಿಟ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಪಿಐ ನಾಯಕ ಹೇಳುತ್ತಿದ್ದಾರೆ. ಅಂದರೆ ಪುಣ್ಯ ಕ್ಷೇತ್ರವನ್ನು ಅವರು ಮತ್ತೊಮ್ಮೆ ಗಲಭೆ ಪ್ರದೇಶವನ್ನಾಗಿ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.
ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಎರಡು ವರ್ಷಗಳ ಹಿಂದೆ ಎಲ್ಡಿಎಫ್ ಸರ್ಕಾರ ಈ ತೀರ್ಪುನ್ನು ಅನುಷ್ಠಾನಕ್ಕೆ ತಂದಿತ್ತು. ಮುಟ್ಟು ನಿಲ್ಲದ ಮಹಿಳೆಯರಿಗೆ ದೇವಾಲಯ ಪ್ರವೇಶ ಅನುಮತಿಸಿದ್ದಕ್ಕೆ ಬಲಪಂಥೀಯ ಪಕ್ಷಗಳು ವ್ಯಾಪಕವಾಗಿ ವಿರೋಧಿಸಿದ್ದವು.
ಸಿಪಿಐ(ಎಂ) ಶಬರಿಮಲೆಯನ್ನು ನಾಶ ಮಾಡಲು ಹೊರಟರೆ ಮತ್ತೊಮ್ಮೆ ಚಳವಳಿ ಆರಂಭವಾಗಲಿದೆ.ಭಕ್ತರಿಗಾಗಿ ನಾವು ಮತ್ತೊಮ್ಮೆ ಹೋರಾಟ ನಡೆಸಲು ಸಿದ್ಧ ಎಂದು ನರಿಯಪುರಂನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಸುರೇಂದ್ರನ್ ಗುಡುಗಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಶಬರಿಮಲೆಯನ್ನು ರಾಜಕೀಯದ ಮುಷ್ಠಿಯಿಂದ ಮುಕ್ತಗೊಳಿಸಲಾಗುವುದು ಎಂದು ಸುರೇಂದ್ರನ್ ಭರವಸೆ ನೀಡಿದ್ದಾರೆ.
ಕಾನಂ ರಾಜೇಂದ್ರನ್ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕ ಕೆ.ಮುರಳೀಧರನ್, ಶಬರಿಮಲೆ ಬಗ್ಗೆ ಮಾರ್ಕ್ಸಿಸ್ಟ್ ಸರ್ಕಾರದ ಕುಟಿಲ ನೀತಿ ರಾಜೇಂದ್ರನ್ ಹೇಳಿಕೆ ಮೂಲಕ ವ್ಯಕ್ತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ ಹೋರಾಟಗಾರ್ತಿಯರಿಗೆ ಸುಪ್ರೀಂಕೋರ್ಟ್ ಶಾಕ್