ಕೇರಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಜೇಶ್ವರದಲ್ಲಿ ಕೆ.ಸುರೇಂದ್ರನ್, ನೇಮಂನಲ್ಲಿ ಕುಮ್ಮನಂ ರಾಜಶೇಖರನ್, ಪಾಲಕ್ಕಾಡ್​​ನಲ್ಲಿ ಶ್ರೀಧರನ್ ಸ್ಪರ್ಧೆ

Kerala Assembly Elections 2021: ಕೇರಳದ 115 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಚುನಾವಣಾ ಕ್ಷೇತ್ರ ಮತ್ತು ಕಾಸರಗೋಡು ಜಿಲ್ಲೆೆಯ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

ಕೇರಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಜೇಶ್ವರದಲ್ಲಿ ಕೆ.ಸುರೇಂದ್ರನ್, ನೇಮಂನಲ್ಲಿ ಕುಮ್ಮನಂ ರಾಜಶೇಖರನ್, ಪಾಲಕ್ಕಾಡ್​​ನಲ್ಲಿ ಶ್ರೀಧರನ್  ಸ್ಪರ್ಧೆ
ಕೆ.ಸುರೇಂದ್ರನ್- ಶ್ರೀಧರನ್ - ಕುಮ್ಮನಂ ರಾಜಶೇಖರನ್
Follow us
|

Updated on: Mar 15, 2021 | 6:48 PM

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಭಾನುವಾರ ಬಿಡುಗಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಚುನಾವಣಾ ಕ್ಷೇತ್ರ ಮತ್ತು ಕಾಸರಗೋಡು ಜಿಲ್ಲೆೆಯ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 115 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದ್ದು, ಕಳಕ್ಕೂಟಂ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿಲ್ಲ. ತಿರುವನಂತಪುರಂನಲ್ಲಿ ನಟ ಕೃಷ್ಣಕುಮಾರ್, ವಟ್ಟಿಯೂರ್ ಕಾವ್ ನಲ್ಲಿ ವಿ.ವಿ.ರಾಜೇಶ್, ನೇಮಂನಲ್ಲಿ ಕುಮ್ಮನಂ ರಾಜಶೇಖರನ್ ಸ್ಪರ್ಧಿಸಲಿದ್ದಾರೆ.  ಇನ್ನುಳಿದ 25 ಸೀಟುಗಳಲ್ಲಿ ಎನ್​ಡಿಎ ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆ.

ಇತ್ತೀಚೆಗೆ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕಿಳಿದಿರುವ ಮೆಟ್ರೊ ಮ್ಯಾನ್ ಇ.ಶ್ರೀಧರನ್ ಪಾಲಕ್ಕಾಡ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಹಿರಿಯ ನಾಯಕರಾದ ಎಂ.ಟಿ ರಮೇಶ್ (ಕೋಯಿಕ್ಕೋಡ್ ಉತ್ತರ), ಸಿ.ಕೆ. ಪದ್ಮನಾಭನ್ (ಧರ್ಮಡಂ), ಪಿ.ಕೆ. ಕೃಷ್ಣದಾಸ್ (ಕಾಟ್ಟಾಕ್ಕಡ) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಕ್ಯಾಲಿಕಟ್ ವಿವಿ ಮಾಜಿ ಉಪ ಕುಲಪತಿ ಡಾ. ಅಬ್ದುಲ್ ಸಲಾಂ ತಿರೂರ್​ನಲ್ಲಿ, ಮಾಜಿ ಡಿಜಿಪಿ ಜೇಕಬ್ ಥಾಮಸ್ ಇರಿಞಾಲಿಕ್ಕುಡದಲ್ಲಿ, ಶೊರ್ನೂರ್ನ​ಲ್ಲಿ ಸಂದೀಪ್ ವಾರ್ಯರ್, ತ್ರಿಶ್ಶೂರ್​ನಲ್ಲಿ ಸುರೇಶ್ ಗೋಪಿ ಸ್ಪರ್ಧಿಸಲಿದ್ದಾರೆ.

ಕೊನ್ನಿಯಲ್ಲಿ ಬಿಜೆಪಿಗೆ ಗೆಲುವು ಸಾಧ್ಯತೆ: ಕೇರಳದ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಕೊನ್ನಿಯಲ್ಲಿ ಬಿಜೆಪಿ ಗೆಲುವು ಸಾಧ್ಯತೆ ಇದೆ ಎಂದು ಕೇರಳದ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಕೊನ್ನಿ ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಕೆ.ಸುರೇಂದ್ರನ್ ಸ್ಪರ್ಧಿಸುತ್ತಿದ್ದು ಸೋಮವಾರ ಕೊನ್ನಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬಿಜೆಪಿಗೆ ಜನ ಬೆಂಬಲ ಜಾಸ್ತಿಯಾಗಿದೆ. ನೇಮಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಮುರಳೀಧರನ್ ಗೆಲ್ಲುವುದಕ್ಕಾಗಿ ಸ್ಪರ್ಧಿಸುತ್ತಿಲ್ಲ, ಸಿಪಿಎಂಗೆ ಸಹಾಯ ಮಾಡಲು ಅವರು ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆಯೂ ಸಿಪಿಎಂ ಜತೆ ಒಪ್ಪಂದ ಮಾಡಿಕೊಂಡವರು ಮುರಳೀಧರನ್ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.

ನೇಮಂನಲ್ಲಿ ಕಳೆದ ಬಾರಿಗಿಂತಲೂ ಹೀನಾಯವಾಗಿ ಕಾಂಗ್ರೆಸ್ ಸೋಲಲಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದಿದ್ದಾರೆ ಸುರೇಂದ್ರನ್. ಈ ಬಾರಿ ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಅವರನ್ನು ಕಡೆಗಣಿಸಲಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ ಅದು ಸರಿಯಲ್ಲ. ಶೋಭಾ ಅವರಲ್ಲಿ ಸ್ಪರ್ಧಿಸಲು ನಾವು ಹೇಳಿದ್ದೆವು. ಅವರೇ ಬೇಡ ಅಂದಿದ್ದಾರೆ ಎಂದು ಸುರೇಂದ್ರನ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಳಕ್ಕೂಟಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಶೋಭಾ ಸುರೇಂದ್ರನ್ ಅವರ ಹೆಸರನ್ನು ಕೇಂದ್ರ ಸಮಿತಿ ಸೂಚಿಸಿತ್ತು. ಆದರೆ ರಾಜ್ಯ ಸಮಿತಿ ಅದನ್ನು ನಿರಾಕರಿಸಿತ್ತು ಎಂಬ ವದಂತಿಗಳು ಹರಿದಾಡುತ್ತಿದ್ದು, ಇದಕ್ಕೆ ಸುರೇಂದ್ರನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನೇಮಂನಲ್ಲಿ ಕೆ.ಮುರಳೀಧರನ್ ಪ್ರಬಲ ಅಭ್ಯರ್ಥಿ : ಒ. ರಾಜಗೋಪಾಲ್ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಕೆ. ಮುರಳೀಧರನ್ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಒ ರಾಜಗೋಪಾಲ್ ಹೇಳಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಾಕರನ್ ಅವರ ಮಗ ಮುರಳೀಧರನ್. ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು ಅವರು ಎಂದು ರಾಜಗೋಪಾಲ್ ಹೇಳಿದ್ದಾರೆ. ನೇಮಂನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಮ್ಮನಂ ರಾಜಶೇಖರನ್ ಸ್ಪರ್ಧಿಸುತ್ತಿದ್ದು, ಕುಮ್ಮನಂ ಅವರ ಪಕ್ಕದಲ್ಲಿ ಕುಳಿತುಕೊಂಡೇ ರಾಜಗೋಪಾಲ್ ಈ ಮಾತನಾಡಿದ್ದಾರೆ.

ನೇಮಂನಲ್ಲಿ ಪ್ರಬಲ ಪೈಪೋಟಿ ನಡೆಯಲಿದೆ. ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಅಲ್ಲದ ಪಕ್ಷವೊಂದು ಗೆದ್ದ ಚುನಾವಣಾ ಕ್ಷೇತ್ರವಾಗಿದೆ ನೇಮಂ. ಹಾಗಾಗಿ ಎರಡೂ ಪಕ್ಷಗಳಿಗೂ ಇದು ಸವಾಲು ಆಗಿದೆ. ಈ ಬಾರಿ ನೇಮಂನಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನೇ ನಿರ್ಧರಿಸಿದ್ದೆ. ವಯಸ್ಸಾಯ್ತು ಹಾಗಾಗಿ ದೂರವುಳಿದಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ಪ್ರಚಾರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರಲಿದ್ದೇನೆ ಎಂದಿದ್ದಾರೆ ರಾಜಗೋಪಾಲ್.

 ಇದನ್ನೂ ಓದಿ:  Kerala Assembly Elections 2021: ಕೇರಳದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು 35 ಸೀಟುಗಳು ಸಾಕು: ಕೆ.ಸುರೇಂದ್ರನ್