Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?

ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಎರಡು ಸೀಟು ತನ್ನದಾಗಿಸಿಕೊಂಡು ಮರ್ಯಾದೆ ಉಳಿಸಿಕೊಂಡಿದೆ. ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಎದುಸಿರು ಬಿಡುತ್ತ ಗೆದ್ದಿದ್ದು ಬಿಜೆಪಿಗೆ ಅನೇಕ ಸವಾಲನ್ನು ತಂದೊಡ್ಡಿದೆ.

Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬೆಳಗಾವಿ ಸಂಸದೆ ಮಂಗಳಾ ಅಂಗಡಿ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 02, 2021 | 8:52 PM

ಏಪ್ರಿಲ್ 17 ರಂದು ನಡೆದ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದ ಬಿಜೆಪಿ ಸಮಾಧಾನಕರ ಬಹುಮಾನ ಪಡೆದಂತಾಗಿದೆ. ಪ್ರಬಲ ಲಿಂಗಾಯತ ಸಮುದಾಯ ಇರುವ ಉತ್ತರ ಕರ್ನಾಟಕದಲ್ಲಿ ನಿರಾಯಾಸವಾಗಿ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಒಳಗೊಳಗೆ ಬೆವರುವಂತೆ ಆಗಿತ್ತು. ಎರಡು ವರ್ಷದ ಹಿಂದೆ ನಡೆದಿದ್ದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಸುರೇಶ ಅಂಗಡಿ 3.50 ಲಕ್ಷ ಅಂತರದಿಂದ ಗೆದ್ದಿದ್ದರು. ಈ ಬಾರಿ ಆ ಅಂತರ ಬರೀ ಎರಡುವರೆ ಸಾವರಕ್ಕೆ ಇಳಿದಿದ್ದು ಬಹಳ ವಿಶೇಷ. ಹಾಗೆ ನೋಡಿದರೆ ಆಡಳಿತಾರೂಢ ಬಿಜೆಪಿಗೆ ಭಾರಿ ನಿರಾಸೆ ತರುವ ಫಲಿತಾಂಶ.

ಲಿಂಗಾಯತ ಪ್ರಾಬಲ್ಯ ಇರುವ ಉತ್ತರ ಕರ್ನಾಟಕದಲ್ಲಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪನವರ ಹೆಸರು ಹೇಳಿದರೆ ಸಾಕು ಜನ ಬೆಂಬಲಿಸುತ್ತಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿಗೆ ಮಸ್ಕಿ ಕೈ ಹಿಡಿಯಲಿಲ್ಲ. ಅಲ್ಲಿ ಸ್ವತಃ ಯಡಿಯೂರಪ್ಪನವರ ಮಗ, ಬಿ.ವೈ. ವಿಜಯೇಂದ್ರ ಕಂಕಣ ಕಟ್ಟಿಕೊಂಡು ಕಣಕ್ಕಿಳಿದು ಪಕ್ಷಕ್ಕೆ ಜಯ ತಂದು ಕೊಡಲು ಪ್ರಯತ್ನಿಸಿದ್ದು ಕೊನೆಗೂ ಫಲಿಸಲಿಲ್ಲ. ಬೆಳಗಾವಿ ಬಿಜೆಪಿಯ ಭದ್ರ ಕೋಟೆ. ಇಂಥಲ್ಲಿ ಈ ರೀತಿಯ ಪ್ರಯಾಸದ ಗೆಲುವು ಯಾರೂ ನಿರೀಕ್ಷಿಸಿರಲಿಲ್ಲ.

ತಪ್ಪಾಗಿದ್ದೆಲ್ಲಿ? ರಾಜಕೀಯದಲ್ಲಿ ಯಾವುದೇ ಸೋಲು ಅಥವಾ ಗೆಲುವು ಶಾಶ್ವತ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಗುಂಡ್ಲುಪೇಟೆ ಮತ್ತು ಇನ್ನು ಕೆಲವು ವಿಧಾನಸಭಾ ಉಪಚುನಾವಣೆಯನ್ನು ಕಾಂಗ್ರೆಸ್ ಗೆದ್ದಿತ್ತು. ಆಮೇಲೆ ಸಾರ್ವತ್ರಿಕ ಚುನಾವಣೆಯಲ್ಲಿ ಆ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಯಿತು. ಈ ರೀತಿ ಹೇಳುತ್ತಾ ಬಿಜೆಪಿ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ, ಮುಂಚೂಣಿಯಲ್ಲಿರುವ ಯಡಿಯೂರಪ್ಪ ಈ ಉಪಚುನಾವಣೆಯ ಕುರಿತಾಗಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ರಾಜಕೀಯ ಮತ್ತು ಆಡಳಿತ ಎರಡೂ ವಿಭಾಗಗಳಲ್ಲಿ ಅವರು ಹೇಳಿಕೊಳ್ಳುವ ಯಾವ ಸಾಧನೆ ಮಾಡದಿದ್ದುದು ಅವರ ಪಕ್ಷಕ್ಕೆ ಹಿನ್ನಡೆ ಆಗಲು ಮುಖ್ಯ ಕಾರಣ ಎಂಬುದನ್ನು ರಾಜ್ಯ ಬಿಜೆಪಿ ಒಪ್ಪಿಕೊಳ್ಳಬೇಕು.

ಮಸ್ಕಿ ಉಪಚುನಾವಣೆಯ ಫಲಿತಾಂಶ ಹೀಗಿರಬಹುದು ಎಂದು ಬಹುತೇಕರು ಮೊದಲೇ ಆಂದಾಜಿಸಿದ್ದರು. ಪ್ರತಾಪ್ಗೌಡ ಪಾಟೀಲ್ ಮೇಲೆ ಜನರಿಗೆ ಸಿಟ್ಟಿತ್ತು. ಕಾರಣವಿಲ್ಲದೇ ಪಕ್ಷ ಬದಲಾವಣೆ ಮಾಡಿದ ಸಿಟ್ಟು ಮತದಾರರಲ್ಲಿ ಇತ್ತು. ಅದಕ್ಕೇ ಅವರಿಗೆ ಪಾಠ ಕಲಿಸಿದರು. ಆದರೆ ಬೆಳಗಾವಿಯ ಪ್ರಯಾಸದ ಗೆಲುವಿನ ಹಿಂದಿನ ರಾಜಕೀಯ ಕಾರಣಗಳನ್ನು ಮೊದಲು ನೋಡೋಣ. 18 ಲಕ್ಷ ಮತದಾರರಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಪಂಚಮಸಾಲಿ ಲಿಂಗಾಯತ ಮತದಾರರು ಇದ್ದಾರೆ. ಮೇಲ್ನೋಟಕ್ಕೆ ನೋಡಿದಾಗ ಪಂಚಮಸಾಲಿ ಲಿಂಗಾಯತರು ಈ ಭಾರಿ ಬಿಜೆಪಿಗೆ ಮತ ನೀಡಿದಂತೆ ಕಾಣುತ್ತಿಲ್ಲ. ಅದಕ್ಕೆ ಕಾರಣ ಏನೇಂದರೆ, ಪಂಚಮಸಾಲಿಗಳ ಮೀಸಲಾತಿ ಹೋರಾಟಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂಬುದು ಇರಬಹುದು. ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಒಂದು ಶಾಕ್ ಕೊಟ್ಟರೆ ತಮ್ಮ ಬೇಡಿಕೆ ಬಗ್ಗೆ ಸರಕಾರ ಸ್ಪಂದಿಸಬಹುದು ಎಂಬ ಲೆಕ್ಕಾಚಾರ ಆ ಸಮುದಾಯದ ನಾಯಕರದ್ದಿರಬಹುದು.

ಎರಡನೆಯದು, ಮರಾಠಾ ಮತವನ್ನು ಅತ್ಯಂತ ವ್ಯವಸ್ಥಿತವಾಗಿ ಬಿಜೆಪಿಗೆ ಹೋಗದಂತೆ ತಡೆಯಲು ಕಾಂಗ್ರೆಸ್ ಮಾಡಿದ ಪ್ರಯತ್ನ ಯಶಸ್ವಿ ಆಯ್ತು ಎಂಬುದನ್ನು ಹೇಳಬಹುದು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಭ್ಯರ್ಥಿ ಶುಭಂ ಶಳಕೆ ಒಂದು ಲಕ್ಷಕ್ಕೂ ಹೆಚ್ಚಿನ ಮತ ಗಳಿಸಿದ್ದನ್ನು ಇಲ್ಲಿ ಗಮನಿಸಬಹುದು. ಕೆಲವು ಬಿಜೆಪಿ ಶಾಸಕರ ಕ್ಷೇತ್ರದಲ್ಲಿಯೇ ಕಾಂಗ್ರೆಸ್​ಗೆ ಹೆಚ್ಚಿನ ಮತ ದೊರಕಿರುವುದು ಕುತೂಹಲಕಾರಿ ಅಂಶವಾಗಿದೆ. ಈ ವಿಚಾರವನ್ನು ಇನ್ನೂ ಆಳಕ್ಕಿಳಿದು ನೋಡಬೇಕಾಗಿದೆ. ಆಗ ನಿಜವಾದ ಕಾರಣ ತಿಳಿಯಬಹುದು. ಲಿಂಗಾಯತರು ಯಡಿಯೂರಪ್ಪನವರ ಮೇಲೆ ಇಷ್ಟು ಭ್ರಮನಿರಸನರಾಗಿದ್ದು ನೋಡಿದರೆ ಬಿಜೆಪಿ ಮತ್ತು ಯಡಿಯೂರಪ್ಪ ಈ ಕುರಿತು ವಿಚಾರ ಮಾಡಲೇಬೇಕಾಗಿದೆ.

ಆಡಳಿತಾತ್ಮಕ ಕಾರಣಗಳನ್ನು ಬರೆಯೋಕೆ ಕುಳಿತರೆ ಅದು ಮುಗಿಯದ ಮಾತು. ಕಳೆದ ಮಳೆಗಾಲದಲ್ಲಿ ಬಂದ ಅತಿವೃಷ್ಟಿಯಿಂದ ಪ್ರಾರಂಭಿಸಿ ಕೊವಿಡ್ ಮೊದಲನೇ ಅಲೆ ಮತ್ತು ಈಗ ಎರಡನೇ ಅಲೆವರೆಗೆ ಯಾವುದಕ್ಕೂ ಸರಿಯಾಗಿ ಮೊದಲೇ ತಯಾರಿ ಮಾಡಿಕೊಳ್ಳದೇ ಬರೀ ಪ್ರತಿಕ್ರಿಯಾತ್ಮಕ (reactive and not proactive) ಆಡಳಿತ ನೀಡಿದ್ದು ಅವರ ವಿಫಲತೆಗೆ ಸಾಕ್ಷಿ ಆಗಿತ್ತು. ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲದೇ ಅಥವಾ ಕೊಟ್ಟ ಖಾತೆಯಲ್ಲಿಯೂ ಒಳ್ಳೆ ಆಡಳಿತ ನೀಡಬೇಕೆಂಬ ಛಲ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಿದ ಮಂತ್ರಿಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಸರಕಾರಕ್ಕೆ ಹಿನ್ನಡೆ ಆಗಿದ್ದನ್ನು ಅವರು ಒಪ್ಪಿಕೊಳ್ಳಬೇಕಾಗುತ್ತದೆ.

ಯಡಿಯೂರಪ್ಪನವರ ರಾಜಕೀಯ ಮತ್ತು ಆಡಳಿತ ವೈಖರಿಯಲ್ಲಿ ಒಂದು ವೈರುಧ್ಯವನ್ನು ಕಾಣಬಹುದು. ಸಾರ್ವಜನಿಕ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ನೀಡುವ ರಚನಾತ್ಮಕ ಸಲಹೆಗಳ ವಿಚಾರಕ್ಕೆ ಅವರು ಗಮನ ಕೊಡುತ್ತಾರೆ ಎಂಬುದು ಸಾಬೀತಾಗಿಲ್ಲ. ಆದರೆ ವಿರೋಧ ಪಕ್ಷಗಳ ನಾಯಕರ ರಾಜಕೀಯ ಒತ್ತಾಸೆಗೆ ಅನುವಾಗುವಂತೆ ಆಡಳಿತಾತ್ಮಕ ನಿರ್ಣಯವನ್ನು ತೆಗೆದುಕೊಂಡಂತೆ ಕಾಣುತ್ತಿದೆ. ಕೆಲವು ಬಿಜೆಪಿ ನಾಯಕರು ಹೇಳುವಂತೆ ತಮ್ಮ ಮೇಲೆ ಬರುವ ಟೀಕೆ ತಪ್ಪಿಸಿಕೊಳ್ಳಲು, ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರುಗಳ ಬೆಂಬಲಿಗರ ಪುಂಡಾಟವನ್ನು ಮನ್ನಿಸುವುದು ಮತ್ತು ಆ ನಾಯಕರುಗಳ ತಾಳಕ್ಕೆ ಗುಟ್ಟಾಗಿ ಕುಣಿಯುವುದನ್ನು ಮಾಡಿಕೊಂಡೇ ಬಂದಿದ್ದಾರೆ. ಇದು ಪಕ್ಷಕ್ಕೆ ಬಹಳ ಹಾನಿ ಮಾಡುತ್ತಿರುವುದನ್ನು ಅನೇಕರು ಮುಗುಮ್ಮಾಗಿ ಹೇಳುತ್ತಾರೆ.

ಈ ರೀತಿಯ ರಾಜಕೀಯದಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಇದರಿಂದ ಆಗಿದ್ದೇನೆಂದರೆ, ವಿರೋಧ ಪಕ್ಷದ ನಾಯಕರು ಯಡಿಯೂರಪ್ಪ ಅವರನ್ನು ಪ್ರತಿನಿತ್ಯ ಟೀಕಿಸಿ ಗೋಳು ಹೊಯ್ದುಕೊಳ್ಳುವುದು ತಪ್ಪಿತ್ತು. ಆದರೆ, ಇದರಿಂದ ಬಿಜೆಪಿ ಪಕ್ಷಕ್ಕೆ ಭಾರೀ ಹಾನಿ ಆಗಿರುವುದು ನಿಜ. ಅದರ ಜೊತೆಗೆ ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್​ರಂಥ ಶಾಸಕರನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗಿದ್ದು ಪಕ್ಷಕ್ಕೆ ಬಹಳ ಹಾನಿಯುಂಟು ಮಾಡಿದ್ದು ನಿಜ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಮುಖ್ಯಮಂತ್ರಿ ಇಳಿಸಲು ಹೊಂಚು ಹಾಕುವ ಪ್ರವ್ರತ್ತಿ ಬಿಜೆಪಿ ನಾಯಕರಲ್ಲಿ ಜಾಸ್ತಿಯಾಗಿದೆ. ವಿಶೇಷ ಎಂದರೆ, ಇದು ಕರ್ನಾಟಕದಲ್ಲಿ ಮಾತ್ರ ಕಾಣುವ ಪ್ರವ್ರತ್ತಿ.

ಬಿಜೆಪಿ ಆಡಳಿತದಲ್ಲಿರುವ ಇತರ ರಾಜ್ಯಗಳಲ್ಲಿ ಇಂಥ ರಾಜಕೀಯ ಪ್ರವ್ರತ್ತಿ ಕಾಣುತ್ತಿಲ್ಲ. ಉದಾಹರಣೆಗೆ ಅಸ್ಸಾಂ ಅನ್ನೇ ತೆಗೆದುಕೊಳ್ಳೋಣ. ಅಲ್ಲ ಸರಭಾನಂದ ಸೊನೋವಾಲ್ ಮುಖ್ಯಮಂತ್ರಿ. ಅಲ್ಲಿನ ಆರೋಗ್ಯ ಸಚಿವ ಮತ್ತು ಪ್ರಮುಖ ರಾಜಕಾರಿಣಿ ಹೇಮಂತ ಬಿಸ್ವ ಶರ್ಮಾ ಆರಾಮಾಗಿ ಸೊನೋವಾಲರನ್ನು ಕೆಳಗಿಳಿಸಲು ಪ್ರಯತ್ನಿಸಬಹುದಿತ್ತು ಅಥವಾ ಈ ಬಾರಿ ಅವರು ಮುಖ್ಯಮಂತ್ರಿ ಆಗಬಾರದು ಎಂದು ಚುನಾವಣಾ ತಂತ್ರ ಹೆಣೆಯಬಹುದಿತ್ತು. ಹಾಗೆ ಮಾಡಲಿಲ್ಲ. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದಿದೆ. ಅದೇ ಕರ್ನಾಟಕ ಮಾತ್ರ ಮನೆಯೊಂದು ಮೂರು ಬಾಗಿಲು ಆದಂತಿದೆ.

ಬಿಜೆಪಿಗೆ ಭವಿಷ್ಯವಿಲ್ಲವೇ? ದೂರದ ಬಂಗಾಲವನ್ನು ಬಿಟ್ಟುಬಿಡೋಣ. ಪಕ್ಕದ ಕೇರಳವನ್ನು ನೋಡಿದರೆ ಯಡಿಯೂರಪ್ಪನವರು ಪಾಠ ಕಲಿಯಬಹುದು. ಹಗರಣಗಳ ಆರೋಪ, ಒಂದೇ ಎರಡೇ. ಆದರೆ, ಜನರಿಗೆ ಆಡಳಿತ ನೀಡುವಲ್ಲಿ ಅವರು ಹಿಂದೆ ಬೀಳಲಿಲ್ಲ. ಮೂಲಸೌಕರ್ಯದಿಂದ ಪ್ರಾರಂಭಿಸಿ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಕೊನೆಗೆ ಆಹಾರ ಇಲಾಖೆಯಿಂದ ಕೊರೊನಾ ಸಮಯದಲ್ಲಿ ಆಹಾರದ ಪೊಟ್ಟಣ ನೀಡುವವರೆಗೆ ಎಲ್ಲವನ್ನೂ ನೀಡಿ ಗೆದ್ದ ಪಣರಾಯಿ ವಿಜಯನ್ ಅವರ ಆಡಳಿತ ನೋಡಿದರೆ ಗೊತ್ತಾಗುತ್ತೆ-ಆಡಳಿತ ವಿರೋಧಿ ಅಲೆ ಸದ್ದಡಗಿಸುವುದು ಹೇಗೆ ಎಂದು.

ಆದರೆ, ವಿಜಯನ್ ಅವರು ಚುನಾವಣೆಯಲ್ಲಿ ನೇತೃತ್ವವಹಿಸಿದ್ದು ಮತ್ತು ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಿದ್ದನ್ನು ಕಾಣಬಹುದು. ಆದರೆ, ಯಡಿಯೂರಪ್ಪ ಅವರಿಗೆ 2023 ರಲ್ಲಿ ಈ ಅವಕಾಶ ಇರುತ್ತೋ ಎಂಬುದು ಇನ್ನೂ ಖಾತರಿ ಆಗಿಲ್ಲ. ಹಾಗಾಗಿ ಬಿಜೆಪಿಯ ರಾಜಕೀಯ ಹೋರಾಟದ ಮುಂದಿನ ದಾರಿ ಹೇಗಿರುತ್ತೆ ಎಂದು ಹೇಳುವುದು ಕಷ್ಟವಾಗುತ್ತದೆ.

(The bypoll win has thrown up several challenges for BJP in Karnataka for CM BS Yediyurappa)

ಇದನ್ನೂ ಓದಿ: ಉಪ ಚುನಾವಣೆ ಮತ ಎಣಿಕೆಗೆ ಒಂದು ವಾರ: ಬಿಜೆಪಿ ಒಳ ಲೆಕ್ಕಾಚಾರ -ಎರಡು ಗೆಲುವು ನಿಶ್ಚಿತ, ಇನ್ನೊಂದರಲ್ಲಿ ಫೋಟೋ ಫಿನಿಶ್​

ಇದನ್ನೂ ಓದಿ: Belagavi Lok sabha bypoll 2021: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್​ ಭಿನ್ನಮತ ಬಹಿರಂಗ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ