ನರೇಂದ್ರ ಮೋದಿ ಟ್ವೀಟ್: ಮಮತಾ ಬ್ಯಾನರ್ಜಿ, ಸ್ಟಾಲಿನ್, ಪಿಣರಾಯಿ ವಿಜಯನ್​ ಗೆಲುವಿಗೆ ಶ್ಲಾಘನೆ

Narendra Modi: ಇತರ ಪಕ್ಷಗಳು ಅಧಿಕಾರಕ್ಕೆ ಬಂದಿರುವ ರಾಜ್ಯಗಳ ನಾಯಕರಿಗೂ ಕೇಂದ್ರ ಸರ್ಕಾರದ ನಿರಂತರ ಸಹಕಾರ ನಿಮಗೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ನರೇಂದ್ರ ಮೋದಿ ಟ್ವೀಟ್: ಮಮತಾ ಬ್ಯಾನರ್ಜಿ, ಸ್ಟಾಲಿನ್, ಪಿಣರಾಯಿ ವಿಜಯನ್​ ಗೆಲುವಿಗೆ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: May 02, 2021 | 8:28 PM

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಿಚ್ಚಳವಾದ ನಂತರ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್ ಮಾಡಿ ವಿಜೇತ ಪಕ್ಷಗಳು ಮತ್ತು ನಾಯಕರನ್ನು ಅಭಿನಂದಿಸಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇತರ ಪಕ್ಷಗಳು ಅಧಿಕಾರಕ್ಕೆ ಬಂದಿರುವ ರಾಜ್ಯಗಳ ನಾಯಕರಿಗೂ ಕೇಂದ್ರ ಸರ್ಕಾರದ ನಿರಂತರ ಸಹಕಾರ ನಿಮಗೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ರಾಜಕೀಯ ಟ್ವೀಟ್ ಹೊರಬಂದಿದೆ. ‘ತೃಣಮೂಲ ಕಾಂಗ್ರೆಸ್​ನ ಗೆಲುವಿಗಾಗಿ ಮಮತಾ ಬ್ಯಾನರ್ಜಿ ನಿಮಗೆ ಅಭಿನಂದನೆಗಳು. ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರವನ್ನು ಮುಂದುವರಿಸುತ್ತದೆ. ಜನರ ಆಶೋತ್ತರಗಳನ್ನು ಈಡೇರಿಸಲು ಮತ್ತು ಕೋವಿಡ್-19 ಪಿಡುಗಿನಿಂದ ರಾಜ್ಯವನ್ನು ಹೊರತರಲು ನೆರವಾಗುತ್ತದೆ’ ಎಂದು ಭರವಸೆ ನೀಡಿದ್ದಾರೆ.

‘ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷಕ್ಕೆ ಅಸ್ತಿತ್ವವೇ ಇರಲಿಲ್ಲ. ಆದರೆ ಈ ಬಾರಿ ಪಶ್ಚಿಮ ಬಂಗಾಳದ ಸೋದರ, ಸೋದರಿಯರು ನಮ್ಮ ಪಕ್ಷವನ್ನು ಆಶೀರ್ವದಿಸಿದ್ದಾರೆ. ಅಲ್ಲಿ ಬಿಜೆಪಿಯ ಅಸ್ತಿತ್ವವೂ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿದೆ. ಬಿಜೆಪಿಯು ಜನರ ಸೇವೆಯನ್ನು ಮುಂದುವರಿಸುತ್ತದೆ. ನಮ್ಮ ಎಲ್ಲ ಕಾರ್ಯಕರ್ತರ ಪರಿಶ್ರಮವನ್ನು ನಾನು ಗೌರವಿಸುತ್ತೇನೆ’ ಎಂದು ಮೋದಿ ಭರವಸೆ ನೀಡಿದ್ದಾರೆ.

ಕೇರಳಲ್ಲಿ ಮತ್ತೊಮ್ಮೆ ಎಲ್​ಡಿಎಫ್​ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ ಪಿಣರಾಯಿ ವಿಜಯನ್ ಅವರನ್ನೂ ಪ್ರಧಾನಿ ಅಭಿನಂದಿಸಿದ್ದಾರೆ. ‘ನಾವು ಹಲವು ವಿಚಾರಗಳಲ್ಲಿ ಜತೆಗೂಡಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕೋವಿಡ್-19 ಪಿಡುಗಿನಿಂದ ಭಾರತ ಹೊರಬರುವಂತೆ ಮಾಡಲು ಶ್ರಮಿಸುತ್ತೇವೆ’ ಎಂದು ಮೋದಿ ಭರವಸೆ ನೀಡಿದ್ದಾರೆ.

ಕೇರಳದಲ್ಲಿಯೂ ಬಿಜೆಪಿಗೆ ಮತ ಹಾಕಿರುವರನ್ನು ಮೋದಿ ಅಭಿನಂದಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಭದ್ರಪಡಿಸಲು ಶ್ರಮಿಸುತ್ತಿರುವ ಕಾರ್ಯಕರ್ತರ ಪರಿಶ್ರಮವನ್ನು ನಾನು ಗೌರವಿಸುತ್ತೇನೆ. ಕೇರಳ ಜನರ ಸೇವೆಯನ್ನು ನಮ್ಮ ಪಕ್ಷ ಮತ್ತು ಕಾರ್ಯಕರ್ತರು ನಿರಂತರ ಮಾಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ನಿಚ್ಚಳ ಜಯ ಸಾಧಿಸಿರುವ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರನ್ನೂ ಮೋದಿ ಅಭಿನಂದಿಸಿದ್ದಾರೆ. ‘ದೇಶದ ಪ್ರಗತಿಗಾಗಿ ನಾವು ಒಗ್ಗೂಡಿ ಕೆಲಸ ಮಾಡೋಣ. ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸಲು ಮತ್ತು ಕೋವಿಡ್-19 ಪಿಡುಗಿನ್ನು ಸೋಲಿಸಲು ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.

ಎನ್​ಡಿಎ ಮೈತ್ರಿಕೂಟಕ್ಕೆ ಆಶೀರ್ವದಿಸಿದ ತಮಿಳುನಾಡಿನ ಜನರಿಗೆ ನಾನು ಕೃತಜ್ಞ. ರಾಜ್ಯದ ಕಲ್ಯಾಣಕ್ಕೆ ಮತ್ತು ತಮಿಳು ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರಿಹೇಳುವ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ನಮ್ಮ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ನಾನು ಗೌರವಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ

ಅಸ್ಸಾಂನಲ್ಲಿ ಬಿಜೆಪಿ ಗೆಲುವಿನ ವಿಚಾರವನ್ನು ತುಂಬಾ ಖುಷಿಯಿಂದ ಪ್ರಸ್ತಾಪಿಸಿರುವ ನರೇಂದ್ರ ಮೋದಿ, ‘ಅಸ್ಸಾಂನ ಜನರು ಎನ್​ಡಿಎ ಮೈತ್ರಿಕೂಟದ ಅಭಿವೃದ್ಧಿ ಅಜೆಂಡಾಕ್ಕೆ ಮತ್ತು ಅಲ್ಲಿನ ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಬೆಂಬಲಿಸಿದ್ದಾರೆ. ನಮ್ಮನ್ನು ಆಶೀರ್ವದಿಸಿರುವ ಅಸ್ಸಾಂನ ಜನರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಎನ್​ಡಿಎ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ಮತ್ತು ಜನರಿಗೆ ಸೇವೆ ಮಾಡಬೇಕು ಎನ್ನುವ ಅವರ ಆಶಯವನ್ನು ಗೌರವಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ನಡೆದ ಹಲವು ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಅಶೀರ್ವದಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷವು ಜನರು ಜನರ ಅಭ್ಯುದಯಕ್ಕಾಗಿ ಶ್ರಮಿಸುತ್ತದೆ. ಬಿಜೆಪಿ ಕಾರ್ಯಕರ್ತರ ಬದ್ಧತೆಯನ್ನು ಶ್ಲಾಘಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

(Assembly Elections Result Narendra Modi Applauds Victory of Mamata Banerjee Stalin Pinarayi Vijayan)

ಇದನ್ನೂ ಓದಿ: ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಎಂ.ಕೆ.ಸ್ಟಾಲಿನ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ರಿಂದ ಅಭಿನಂದನೆ..

ಇದನ್ನೂ ಓದಿ: Karnataka By Election Results 2021 LIVE: ಕರ್ನಾಟಕ ಉಪಚುನಾವಣಾ ಕದನ: ರೋಚಕ ಗೆಲುವು ಕಂಡ ಬಿಜೆಪಿಯ ಮಂಗಳಾ ಅಂಗಡಿ