ರಾಜಕೀಯ ವಿಶ್ಲೇಷಣೆ: ದಕ್ಷಿಣದಲ್ಲಿ ನಡೆಯಲಿಲ್ಲ ಬಿಜೆಪಿ ಜಾದೂ, ಎಲ್ಲೆಡೆ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್​, ಟಿಎಂಸಿ ಗೆಲುವಿನಲ್ಲಿದೆ ಹಲವು ಪಾಠ

ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಟಿಎಂಸಿ ಇತಿಹಾಸ ನಿರ್ಮಿಸಿದೆ. ಬಿಜೆಪಿ ಸೋತರೂ, ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಐದೂ ರಾಜ್ಯಗಳಲ್ಲಿ ಕಾಂಗ್ರೆಸ್​ ಮೂಲೆಗುಂಪಾಗಿದೆ.

ರಾಜಕೀಯ ವಿಶ್ಲೇಷಣೆ: ದಕ್ಷಿಣದಲ್ಲಿ ನಡೆಯಲಿಲ್ಲ ಬಿಜೆಪಿ ಜಾದೂ, ಎಲ್ಲೆಡೆ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್​, ಟಿಎಂಸಿ ಗೆಲುವಿನಲ್ಲಿದೆ ಹಲವು ಪಾಠ
ಮಮತಾ ಬ್ಯಾನರ್ಜಿ ಮತ್ತು ಎಂ.ಕೆ.ಸ್ಟಾಲಿನ್
Follow us
|

Updated on:May 02, 2021 | 6:47 PM

ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ಅಂತಿಮ ಘೋಷಣೆ ಬಾಕಿಯಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಇಂಥವರದ್ದೇ ಎಂದು ನಿಚ್ಚಳವಾಗಿ ತಿಳಿಯುತ್ತಿದೆ. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲನುಭವಿಸಿದ್ದರೂ ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಟಿಎಂಸಿ ಪಕ್ಷ ಹೊಸ ಇತಿಹಾಸ ನಿರ್ಮಿಸಿದೆ. ಅದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೂ, ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ತಮಿಳುನಾಡಿನಲ್ಲಿ ಸೂರ್ಯೋದಯ ಚಿಹ್ನೆಯ ಡಿಎಂಕೆ ಬಹುಮತ ಪಡೆದಿದ್ದು, ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ಮುಂದಿನ ಸಿಎಂ ಆಗಲು ದ್ರಾವಿಡ ನಾಡಿನ ಜನರು ಆಶೀರ್ವಾದ ಮಾಡಿದ್ದಾರೆ. ಆದರೆ, ಪಂಚ ರಾಜ್ಯಗಳಲ್ಲಿ ಅತಿ ದೊಡ್ಡ ನಷ್ಟ ಅನುಭವಿಸಿರೋದು ಕಾಂಗ್ರೆಸ್ ಪಕ್ಷ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ಕಹಿ ಅನುಭವಿಸಿದೆ.

ಪಂಚರಾಜ್ಯಗಳ ಫಲಿತಾಂಶವು ಬಿಜೆಪಿ ಪಾಲಿಗೆ ಸಿಹಿ-ಕಹಿ ಎರಡನ್ನೂ ನೀಡಿದೆ. ಬಿಜೆಪಿ ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಂಡಿದೆ. ಪುದುಚೇರಿಯಲ್ಲಿ ಮೈತ್ರಿ ಮೂಲಕ ಅಧಿಕಾರ ಹಿಡಿಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಆದರೇ, ತಮಿಳುನಾಡು, ಕೇರಳದಲ್ಲಿ ಬಿಜೆಪಿಯ ಜಾದೂ ನಡೆದಿಲ್ಲ.

ಕಾಂಗ್ರೆಸ್ ಪಕ್ಷಕ್ಕೆ ಪಂಚರಾಜ್ಯಗಳ ಫಲಿತಾಂಶ ಸಂಪೂರ್ಣ ನಿರಾಶದಾಯಕ. ಪುದುಚೇರಿಯಲ್ಲಿದ್ದ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಅಸ್ಸಾಂ, ಕೇರಳದಲ್ಲಿ 5 ವರ್ಷಗಳ ಬಳಿಕ ಮತ್ತೆ ಅಧಿಕಾರ ಹಿಡಿಯಲು ವಿಫಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೇವಲ ಒಂದೇ ಒಂದು ಸ್ಥಾನಕ್ಕೆ ಕುಸಿದು, ಆಸ್ತಿತ್ವವನ್ನು ಕಳೆದುಕೊಂಡಿದೆ. ತಮಿಳುನಾಡಿನಲ್ಲಿ ಗೆದ್ದಿರೋದು ಡಿಎಂಕೆಯೇ ವಿನಃ ಕಾಂಗ್ರೆಸ್ ಅಲ್ಲ.

ಪ್ರತಿಷ್ಠೆಯ ಕಾಳಗದಲ್ಲಿ ಮೋದಿ ಪಡೆಗೆ ಸೋಲುಣಿಸಿದ ದೀದಿ ಕಳೆದೆರೆಡು ತಿಂಗಳಿನಿಂದ ಐದು ರಾಜ್ಯಗಳಲ್ಲಿ ನಡೆದ ಅಬ್ಬರದ ಪ್ರಚಾರ, ರಾಜಕೀಯ ಚರ್ಚೆಗಳಿಂದ ಚುನಾವಣಾ ಫಲಿತಾಂಶದ ಬಗ್ಗೆ ದೇಶದ ಜನರಲ್ಲಿ ಕುತೂಹಲ ಕೆರಳಿತ್ತು. ಅಂತಿಮವಾಗಿ ಇಂದು ಜನರ ಕುತೂಹಲಕ್ಕೆ ತೆರೆ ಬಿದ್ದಿದೆ. ಪಂಚ ರಾಜ್ಯಗಳ ಪೈಕಿ ಭಾರಿ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೂರನೇ ಎರಡರಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಭೂಮಿ, ಆಕಾಶ ಒಂದು ಮಾಡಿ ಹೋರಾಟ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಪಡೆಗೆ ಸೋಲಾಗಿದೆ.

mamata banerjee

ಮಮತಾ ಬ್ಯಾನರ್ಜಿ

ಆದರೆ ಬಿಜೆಪಿ ಪಾಲಿಗೆ ಇದು ವಿರೋಚಿತ ಸೋಲು. 2016ರಲ್ಲಿ ಕೇವಲ ಮೂರೇ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈಗ ನೂರು ಸ್ಥಾನಗಳ ಹತ್ತಿರಕ್ಕೆ ಬಂದು ಸೋಲು ಅನುಭವಿಸಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವುದು ಸ್ಪಷ್ಟವಾಗಿದೆ. ಈ ಬಾರಿ ಗೆಲ್ಲಲಾಗದಿದ್ದರೂ, ಮುಂದಿನ ಬಾರಿ ಗೆಲುವಿಗೆ ಹೋರಾಟ ಮಾಡಲು ಈ ಬಾರಿಯ ಫಲಿತಾಂಶ ಬಿಜೆಪಿಗೆ ಸ್ಫೂರ್ತಿ ನೀಡಲಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಸುದೀರ್ಘ 34 ವರ್ಷಗಳ ಆಳ್ವಿಕೆ ಮಾಡಿತ್ತು. ಜೋತಿ ಬಸು, ಬುದ್ಧದೇವ್ ಭಟ್ಟಾಚಾರ್ಯ ಮುಖ್ಯಮಂತ್ರಿಗಳಾಗಿ ಎಡಪಕ್ಷವನ್ನು ಮುನ್ನಡೆಸಿದ್ದರು. ಈ ಬಾರಿ ಎಡಪಕ್ಷ ಅಲ್ಲಿ ಶೂನ್ಯ ಸಂಪಾದನೆ ಮಾಡಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 44 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಒಂದು ಕ್ಷೇತ್ರ ಮಾತ್ರ ಗೆಲ್ಲಲು ಶಕ್ತವಾಗಿದೆ. ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಾಮಾವಶೇಷವಾಗಿವೆ. ಪಶ್ಚಿಮ ಬಂಗಾಳದ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಈಗ ಬಿಜೆಪಿ ತನ್ನದಾಗಿಸಿಕೊಂಡಿದೆ. ಟಿಎಂಸಿ ಪಕ್ಷದಿಂದ ಚುನಾವಣೆಗೂ ಮುನ್ನ ಬಿಜೆಪಿಗೆ ವಲಸೆ ಹೋಗಿ ಬಿಜೆಪಿ ಅಭ್ಯರ್ಥಿಗಳಾಗಿದ್ದ 34 ಮಂದಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಸೈದ್ದಾಂತಿಕ ಗುರು ಶ್ಯಾಮ ಪ್ರಸಾದ್ ಮುಖರ್ಜಿ ಅವರ ತವರು ರಾಜ್ಯದಲ್ಲಿ ಗೆಲ್ಲಬೇಕೆಂಬ ಬಿಜೆಪಿಯ ಕನಸು ಕನಸಾಗಿಯೇ ಉಳಿದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 18 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿಗೆ 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಒಲಿದಿದ್ದವು. ಇದೇ ಫಲಿತಾಂಶವನ್ನು ವಿಧಾನಸಭಾ ಚುನಾವಣೆಯಲ್ಲೂ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಇದೀಗ ನಿರಾಶೆಯಾಗಿದೆ. ಬಿಜೆಪಿಯ ಚುನಾವಣಾ ಚಾಣಾಕ್ಯ ಅಮಿತ್ ಶಾ ರಾಜಕೀಯ ತಂತ್ರಗಳು ಮಮತಾ ಪ್ರತಿತಂತ್ರಗಳ ಎದುರು ವಿಫಲವಾಗಿವೆ. 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲುವ ಪಡೆಯುವ ಗುರಿ ಹೊಂದಿದ್ದ ಬಿಜೆಪಿ ಮೂರಂಕಿ ದಾಟಲು ಸಾಧ್ಯವಾಗಿಲ್ಲ. ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಕಳೆದ ಡಿಸೆಂಬರ್​ನಲ್ಲಿ ಬಿಜೆಪಿ ಸಾಧನೆ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ಬಿಜೆಪಿ ಡಬಲ್ ಡಿಜಿಟ್ ದಾಟಿ ಹೋಗಲು ಕಷ್ಟಪಡಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಅವರ ಮಾತು ಈಗ ನಿಜವಾಗಿದೆ.

ಪ್ರಶಾಂತ್ ಕಿಶೋರ್ ಡಿಸೆಂಬರ್​ನಲ್ಲೇ ಸರಿಯಾಗಿ ಭವಿಷ್ಯ ನುಡಿದಿದ್ದರೂ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಎರಡಂಕಿ ತಲುಪಿದರೆ ರಾಜಕೀಯ ಕನ್ಸಲ್ಟೆಂಟ್ ವೃತ್ತಿಯಿಂದ ದೂರ ಸರಿಯುವುದಾಗಿ ಪ್ರಶಾಂತ್ ಕಿಶೋರ್ ಈ ಹಿಂದೆ ನುಡಿದಿದ್ದರು. ಅದಕ್ಕೆ ಅನುಗುಣವಾಗಿ ಟಿಎಂಸಿ ಪಕ್ಷದ ಚುನಾವಣಾ ರಣತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಇವತ್ತು ರಾಜಕೀಯ ಕನ್ಸಲ್ಟೆಂಟ್ ವೃತ್ತಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಮುಂದೇನು ಮಾಡಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಅಧಿಕಾರ ವಿರೋಧಿ ಅಲೆ, ಅಣ್ಣನ ಮಗ ಅಭಿಷೇಕ್ ಬ್ಯಾನರ್ಜಿಯನ್ನು ತಮ್ಮ ಉತ್ತರಾಧಿಕಾರಿ ಮಾಡ್ತಾರೆ, ಭ್ರಷ್ಚಾಚಾರ ನಡೆಸಿದ್ದಾರೆ, ಮುಸ್ಲಿಂ ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡ್ತಾರೆ, ಹಿಂದೂ ವಿರೋಧಿ ಎಂಬ ಮಮತಾ ವಿರುದ್ಧದ ಆರೋಪಗಳಿಗೆ ಜನರು ಕಿವಿಗೊಟ್ಟಿಲ್ಲ. ಬಂಗಾಳದಲ್ಲಿ ಶೇ 30ರಷ್ಟಿರುವ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಮಮತಾ ಕೈ ಹಿಡಿದಿದೆ. ಜೊತೆಗೆ ಹಿಂದೂ ಮತಗಳನ್ನು ಪಡೆಯುವಲ್ಲಿ ಮಮತಾ ಬಳಸಿದ ಅಸ್ತ್ರಗಳು ಫಲ ನೀಡಿವೆ.

MK Stalin

ಎಂ.ಕೆ. ಸ್ಟಾಲಿನ್

ತಮಿಳುನಾಡಿನಲ್ಲಿ 10 ವರ್ಷದ ಬಳಿಕ ಸೂರ್ಯೋದಯ! ದ್ರಾವಿಡ ರಾಜಕಾರಣದ ತೊಟ್ಟಿಲು ಎನಿಸಿಕೊಂಡ ತಮಿಳುನಾಡಿನಲ್ಲಿ 10 ವರ್ಷದ ಬಳಿಕ ‘ಸೂರ್ಯೋದಯ’ ಆಗಿದೆ. ಡಿಎಂಕೆ ಪಕ್ಷದ ಚಿಹ್ನೆ ಸೂರ್ಯೋದಯ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಡಿಎಂಕೆ ಸ್ಪಷ್ಟ ಬಹುಮತ ಪಡೆದಿದೆ. ಕರುಣಾನಿಧಿ ಸಾವಿನ ಬಳಿಕ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಸ್ಟಾಲಿನ್ ಎದುರು ಎಐಎಡಿಎಂಕೆ ಧೂಳೀಪಟವಾಗಿದೆ. ಡಿಎಂಕೆಯ ಸೂರ್ಯನ ಶಾಖದ ಎದುರು ಎಐಎಡಿಎಂಕೆ ಪಕ್ಷದ ಎರಡೆಲೆ ತರಗೆಲೆಯಂತೆ ಉದುರಿ ಹೋಗಿದೆ. ಎಐಎಡಿಎಂಕೆ ಪಕ್ಷಕ್ಕೆ ಪ್ರಬಲ, ವರ್ಚಸ್ವಿ ನಾಯಕತ್ವದ ಕೊರತೆ ಕಾಡಿದೆ. ಬಿಜೆಪಿಯ ಹುರಿಯಾಳುಗಳಾಗಿದ್ದ ಕರ್ನಾಟಕದ ಸಿಂಗಂ ಖ್ಯಾತಿಯ ಕೆ.ಅಣ್ಣಾಮಲೈ, ಖ್ಯಾತ ನಟಿ ಖುಷ್ಬೂ ರಾಜಕೀಯ ರಂಗದ ಇನ್ನಿಂಗ್ಸ್​ನಲ್ಲಿ ಔಟಾಗಿದ್ದಾರೆ. ನಟ ಕಮಲಹಾಸನ್ ಅವರ ಎಂಎನ್‌ಎಂ ಪಕ್ಷ ಒಂದು ಕ್ಷೇತ್ರದಲ್ಲಷ್ಟೇ ಮುನ್ನಡೆ ಪಡೆದಿದೆ.

ಕೇರಳದಲ್ಲಿ ಎಲ್‌ಡಿಎಫ್​ಗೆ ಅಧಿಕಾರ ದೇವರ ನಾಡು ಕೇರಳದಲ್ಲಿ 40 ವರ್ಷಗಳ ಇತಿಹಾಸವನ್ನು ಮುರಿದು ಸತತ ಎರಡನೇ ಭಾರಿಗೆ ಅಧಿಕಾರಕ್ಕೇರಲು ಎಲ್‌ಡಿಎಫ್ ಯಶಸ್ವಿಯಾಗಿದೆ. ಕೇರಳದ 140 ಕ್ಷೇತ್ರಗಳ ಪೈಕಿ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಲ್​ಡಿಎಫ್ ಗೆಲುವು ಸಾಧಿಸಿದೆ. ಎರಡು ವರ್ಷದ ಭೀಕರ ಪ್ರವಾಹ, ಕೊರೊನಾ ನಿಯಂತ್ರಣ, ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದ ಜನರ ಒಲವನ್ನು ಮತ್ತೆ ಗಳಿಸುವಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್​ಡಿಎಫ್ ಯಶಸ್ವಿಯಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಾಯವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಅಸ್ಸಾಂನಲ್ಲಿ ಬಿಜೆಪಿಗೆ ಮತದಾರರ ಆಶೀರ್ವಾದ ಈಶಾನ್ಯದ ಅಸ್ಸಾಂನಲ್ಲಿ ಸತತ ಎರಡನೇ ಭಾರಿಗೆ ಅಧಿಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಿಎಎ, ಎನ್‌.ಆರ್‌.ಸಿ ಬಗ್ಗೆ ಜನರ ವಿರೋಧದ ಮಧ್ಯೆಯೂ ಅಸ್ಸಾಂನಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಪಡೆದಿದೆ. ಆದರೇ, ಈಗ ಬಿಜೆಪಿ ಪಕ್ಷ ಸಿಎಂ ಆಗಿ ಸರ್ಬಾನಂದ ಸೋನವಾಲ್, ಹೀಮಂತ್ ಬಿಸ್ವಾ ಶರ್ಮಾ ಪೈಕಿ ಯಾರನ್ನು ಆಯ್ಕೆ ಮಾಡುತ್ತೆ ಎಂಬ ಕುತೂಹಲ ಇದೆ.

ಪುದುಚೇರಿಯಲ್ಲಿ ಎನ್‌ಡಿಎಗೆ ಗೆಲುವು ಪುದುಚೇರಿಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿ, ಅಧಿಕಾರದಿಂದ ಕೆಳಗೆ ಇಳಿದಿದೆ. ಎನ್‌ಡಿಎ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿದೆ. ಎನ್.ಆರ್‌.ಕಾಂಗ್ರೆಸ್, ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದ್ದವು. ಈಗ ಎನ್‌.ಆರ್‌.ಕಾಂಗ್ರೆಸ್ ಪಕ್ಷದ ಎನ್‌.ರಂಗಸ್ವಾಮಿ ಮತ್ತೊಮ್ಮೆ ಪುದುಚೇರಿಯ ಸಿಎಂ ಗಾದಿಗೇರುವ ಸಾಧ್ಯತೆ ಇದೆ.

(West Bengal Tamil Nadu Kerala Assam Puducherry Assembly Post Election Results Political Analysis in Kannada)

ಇದನ್ನೂ ಓದಿ: West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ

ಇದನ್ನೂ ಓದಿ: #PrashantKishore: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

Published On - 6:18 pm, Sun, 2 May 21

ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ