₹970 ಸೇವಾ ಶುಲ್ಕ ವಿಧಿಸಿದ್ದಕ್ಕೆ ನೋಯ್ಡಾ ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ; ವಿಡಿಯೊ ವೈರಲ್

|

Updated on: Jun 20, 2023 | 4:17 PM

'ಫ್ಲೋಟ್ ಬೈ ಡ್ಯೂಟಿ ಫ್ರೀ' ರೆಸ್ಟೋರೆಂಟ್ ಪ್ರಕಾರ, ಗ್ರಾಹಕರ ಬಿಲ್ ತೆರಿಗೆಗಳು ಮತ್ತು 10 ಪ್ರತಿಶತ ಸೇವಾ ಶುಲ್ಕ ರೂ 970 ಸೇರಿದಂತೆ ರೂ 11,209 ರಷ್ಟಿದೆ. ಜಗಳದಲ್ಲಿ ಆಸ್ತಿಗೆ ಹಾನಿಯಾಗಿದೆ,ಕೆಲವು ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಈ ಹೊಡೆದಾಟದಲ್ಲಿ ಗ್ರಾಹಕರು ನಮಗೆ ಬಿಲ್ ಪಾವತಿ ಮಾಡಿಲ್ಲ ಎಂದಿದ್ದಾರೆ.

₹970 ಸೇವಾ ಶುಲ್ಕ ವಿಧಿಸಿದ್ದಕ್ಕೆ ನೋಯ್ಡಾ ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ; ವಿಡಿಯೊ ವೈರಲ್
ನೋಯ್ಡಾ ರೆಸ್ಟೋರೆಂಟ್
Follow us on

ಉತ್ತರ ಪ್ರದೇಶದ (Uttar Pradesh) ನೋಯ್ಡಾದ ಮಾಲ್‌ನಲ್ಲಿ (Noida Restaurant) ಭಾನುವಾರ ರಾತ್ರಿ ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರು ಮತ್ತು ರೆಸ್ಟೋರೆಂಟ್‌ನ ಸಿಬ್ಬಂದಿ ನಡುವೆ ನಡೆದ ಜಗಳದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೋಯ್ಡಾದ ಸ್ಪೆಕ್ಟ್ರಮ್ ಮಾಲ್‌ನಲ್ಲಿನ ‘ಫ್ಲೋಟ್ ಬೈ ಡ್ಯೂಟಿ ಫ್ರೀ’ (Float by Duty Free)ನಲ್ಲಿ ಸುಮಾರು ಹನ್ನೆರಡು ಗ್ರಾಹಕರು ಭೋಜನಕ್ಕೆ ಬಂದಿದ್ದರು.ಇದರಲ್ಲಿ ಒಬ್ಬರು ಬಿಲ್​​​ನಲ್ಲಿ ವಿಧಿಸಲಾದ ಶೇಕಡಾ 10 ರಷ್ಟು ಸೇವಾ ಶುಲ್ಕವನ್ನು ತೆಗೆದುಹಾಕುವಂತೆ ಕೇಳಿದ್ದು, ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಡಿಯೊಗಳು ವೈರಲ್ ಆದ ನಂತರ, ಮೂವರು ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಗ್ರಾಹಕರ ಗುಂಪಿನ ಇಬ್ಬರು ಸೇರಿದಂತೆ ಐದು ಜನರನ್ನು ಬಂಧಿಸಲಾಯಿತು. ಗಲಭೆ ಮತ್ತು ಹಲ್ಲೆ ಆರೋಪದ ಮೇಲೆ ಎರಡೂ ಕಡೆಯವರ ಪರವಾಗಿ ಪ್ರತಿ ದೂರುಗಳು ಮತ್ತು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ ನಂತರ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಗ್ರಾಹಕರು ಮೊದಲು ಸಪ್ಲೈಯರ್ ಜತೆ ವಾಗ್ವಾದ ನಡೆಸಿದ್ದು ನಂತರ ಮ್ಯಾನೇಜರ್ ಬಳಿ ಹೋಗಿದ್ದಾರೆ. ಎರಡೂ ಕಡೆಯ ಪುರುಷರು ಗಲಾಟೆಯಲ್ಲಿ ತೊಡಗುವ ಮೊದಲು ಈ ವಿಷಯದ ಬಗ್ಗೆ ಮಹಿಳಾ ಗ್ರಾಹಕರೊಂದಿಗೆ ವಾಗ್ವಾದ ನಡೆಯಿತು ಎಂದು ಅಧಿಕಾರಿ ಹೇಳಿದರು.

ಟ್ವಿಟರ್‌ನಲ್ಲಿ ಜಗಳದ ವಿಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ಈ ಘಟನೆಯು ತಮ್ಮ ಕುಟುಂಬದೊಂದಿಗೆ ಸಂಭವಿಸಿದೆ ಎಂದು ಬರೆದಿದ್ದಾರೆ, ಅವರ ತಾಯಿ, ಚಿಕ್ಕಮ್ಮ, ಸಹೋದರಿ, ಸಹೋದರರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಅವರು ನನ್ನ ಸಹೋದರಿಯ ಫೋನ್ ಎಸೆದರು, ನನ್ನ ತಾಯಿಗೆ ಕಪಾಳಮೋಕ್ಷ ಮಾಡಿದರು ಎಂದು ಬಳಕೆದಾರ ಆರ್ಯನ್ ವಶಿಷ್ ಬರೆದಿದ್ದಾರೆ.


‘ಫ್ಲೋಟ್ ಬೈ ಡ್ಯೂಟಿ ಫ್ರೀ’ ರೆಸ್ಟೋರೆಂಟ್ ಪ್ರಕಾರ, ಗ್ರಾಹಕರ ಬಿಲ್ ತೆರಿಗೆಗಳು ಮತ್ತು 10 ಪ್ರತಿಶತ ಸೇವಾ ಶುಲ್ಕ ರೂ 970 ಸೇರಿದಂತೆ ರೂ 11,209 ರಷ್ಟಿದೆ. ಜಗಳದಲ್ಲಿ ಆಸ್ತಿಗೆ ಹಾನಿಯಾಗಿದೆ,ಕೆಲವು ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಈ ಹೊಡೆದಾಟದಲ್ಲಿ ಗ್ರಾಹಕರು ನಮಗೆ ಬಿಲ್ ಪಾವತಿ ಮಾಡಿಲ್ಲ ಎಂದಿದ್ದಾರೆ.

ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ 75 ರಲ್ಲಿನ ಸ್ಪೆಕ್ಟ್ರಮ್ ಶಾಪಿಂಗ್ ಮಾಲ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ (ನೋಯ್ಡಾ) ಹರೀಶ್ ಚಂದರ್ ಹೇಳಿದ್ದಾರೆ. “ಸೇವಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಎರಡು ಕಡೆಯ ನಡುವೆ – ಗ್ರಾಹಕರು ಮತ್ತು ರೆಸ್ಟೋರೆಂಟ್ ಸಿಬ್ಬಂದಿಗಳ ನಡುವೆ ಜಗಳವಾಗಿತ್ತು. ಎರಡೂ ಕಡೆಯಿಂದ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲಾಗುವುದು ಎಂದು ಚಂದರ್ ಸೋಮವಾರ ಬೆಳಗ್ಗೆ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಮತ್ತು ಎರಡೂ ಕಡೆಯ ಸದಸ್ಯರು ಹಿಂಸಾಚಾರದಲ್ಲಿ ತೊಡಗಿರುವ ವಿಡಿಯೋ ಪುರಾವೆಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ ಎಂದು ಸೆಕ್ಟರ್ 113 ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸೋಮವಾರ ಮಧ್ಯಾಹ್ನ ತಿಳಿಸಿದ್ದಾರೆ.

ಎರಡು ಕೌಂಟರ್ ಎಫ್‌ಐಆರ್‌ಗಳನ್ನು ಭಾರತೀಯ ದಂಡದ ಸೆಕ್ಷನ್‌ಗಳು 147 (ಗಲಭೆ), 323 (ದಾಳಿ), 504 (ಶಾಂತಿ ಭಂಗವನ್ನು ಪ್ರಚೋದಿಸಲು ಅವಮಾನ), 506 (ಅಪರಾಧ ಬೆದರಿಕೆ), 354 (ಮಹಿಳೆಯರ ಮೇಲೆ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 20 June 23