ದೆಹಲಿ: ಪಶ್ಚಿಮ ಬಂಗಾಳ ((West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಯವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಪಶ್ಚಿಮಬಂಗಾಳ ಚುನಾವಣೆ ನಡೆದು, ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗುತ್ತಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ಪರಿಸ್ಥಿತಿ, ಲಸಿಕೆ ವಿಚಾರದ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಮೇ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು. ಆಗ ನರೇಂದ್ರ ಮೋದಿಯವರು ಯಾಸ್ ಚಂಡಮಾರುತದಿಂದಾದ ಹಾನಿ ಪರಿಶೀಲನೆಗೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದರೂ. ಅಲ್ಲೂ ಸಹ ಒಂದು ವಿವಾದ ಎದ್ದಿತ್ತು. ನರೇಂದ್ರ ಮೋದಿಯವರು ಕರೆದಿದ್ದ ಸಭೆಗೆ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಆಲಾಪನ್ ಬಂಡೋಪಾಧ್ಯಾಯ ಸರಿಯಾದ ಸಮಯಕ್ಕೆ ಹೋಗಿರಲಿಲ್ಲ. ನಂತರ ಆಲಾಪನ್ ಬಂಡೋಪಾಧ್ಯಾಯರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಮಮತಾ ಬ್ಯಾನರ್ಜಿ ನಡುವೆ ಸದಾ ಒಂದಿಲ್ಲೊಂದು ಫೈಟಿಂಗ್ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಂತೂ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ ಇದ್ದೇ ಇರುತ್ತದೆ. ಇಷ್ಟರ ಮಧ್ಯೆ 2024ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನೆಲ್ಲ ಒಗ್ಗೂಡಿಸುವ ಪ್ರಯತ್ನವನ್ನೂ ದೀದಿ ತೆರೆಮರೆಯಲ್ಲಿ ಮಾಡುತ್ತಿದ್ದಾರೆ.
ನಿನ್ನೆಯಿಂದ ನಾಲ್ಕು ದಿನಗಳ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಇಂದು 4 ಗಂಟೆ ಸುಮಾರಿಗೆ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ನಾಯಕ ಕಮಲನಾಥ್, ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ರನ್ನೂ ಅವರು ಭೇಟಿಯಾಗಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹೈದರಾಬಾದ್ನ ಜ್ಯುಬಿಲಿಹಿಲ್ಸ್ ಪ್ರದೇಶದಲ್ಲಿ 23.15 ಕೋಟಿ ರೂಪಾಯಿಯ ಆಸ್ತಿ ಖರೀದಿಸಿದ ಜಿವಿಕೆ ಸಮೂಹದ ಕೃಷ್ಣಾರೆಡ್ಡಿ
West Bengal CM Mamata Banerjee Meet PM Modi in his Delhi residence