Colored Cauliflower: ಇದೊಂದು ಬಾಕಿಯಿತ್ತು ಎಂಬಂತೆ ರಂಗುರಂಗಿನ ಹೂ ಕೋಸು ಬೆಳೆದ ರೈತ, ಬದುಕು ಶ್ರೀಮಂತವಾಗಿಸಿಕೊಂಡಿದ್ದಾನೆ

| Updated By: ಸಾಧು ಶ್ರೀನಾಥ್​

Updated on: Jan 30, 2023 | 3:15 PM

success story: ಯಾರೂ ನಿರೀಕ್ಷಿಸದ ರೀತಿಯಲ್ಲಿ ರೈತನೊಬ್ಬ ಅಚ್ಚ ಬಿಳುಪಿನ ಹೂಕೋಸು ಬೆಳೆಯನ್ನೂ ಕಲರ್​ಫುಲ್​ ಆಗಿಸಿದ್ದು, ಬಣ್ಣ ಬಣ್ಣದ ಹೋಕೋಸು ಬೆಳೆಯಲಾರಂಭಿಸಿದ್ದಾನೆ. ನಾನಾ ಬಣ್ಣದ ಹೂಕೋಸು ಬೆಳೆಯಲಾರಂಭಿಸಿದ್ದಾನೆ. ಈ ಹೂಕೋಸು ಅನೇಕ ಆರೋಗ್ಯಕಾರಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Colored Cauliflower: ಇದೊಂದು ಬಾಕಿಯಿತ್ತು ಎಂಬಂತೆ ರಂಗುರಂಗಿನ ಹೂ ಕೋಸು ಬೆಳೆದ ರೈತ, ಬದುಕು ಶ್ರೀಮಂತವಾಗಿಸಿಕೊಂಡಿದ್ದಾನೆ
ಇದೊಂದು ಬಾಕಿಯಿತ್ತು ಎಂಬಂತೆ ರಂಗುರಂಗಿನ ಹೂ ಕೋಸು ಬೆಳೆದ ರೈತ
Follow us on

ಕೋಲ್ಕತ್ತಾ: ಇದೊಂದು ಬಾಕಿಯಿತ್ತು. ಹಸಿರು ಕ್ರಾಂತಿ, ಬಿಟಿ ತಳಿ, ಆಧುನಿಕ ಸಂಶೋಧನೆಗಳ ಫಲವಾಗಿ ರೈತನ ಅಂಗಳದಲ್ಲಿ ಭಾರೀ ಭಾರೀ ಬದಲಾವಣೆಗಳು ಆಗಿವೆ. ಕೃಷಿ ಪರಿಕರಗಳಿಂದ ಹಿಡಿದು, ಬೆಳೆಯುವ ಬೆಳೆಗಳು, ಬೆಳೆ ಪದ್ಧತಿಗಳು, ಕೃಷಿ ವಿಧಾನಗಳು ವಿಪರೀತ ಎನಿಸುವಷ್ಟು ಬದಲಾವಣೆಗಳು ಆಗಿವೆ. ಕೊನೆಗೆ ಇದರ ಉದ್ದೇಶ ಮಾಸ್ ಪ್ರೊಡಕ್ಷನ್ ಸಮೂಹ ಕೃಷಿ ಉತ್ಪಾದನೆ. ಅಂದರೆ ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹಸಿವು ನೀಗಿಸಲು, ಅಸಂಖ್ಯಾತ ಹೊಟ್ಟೆಗಳನ್ನು ತುಂಬಿಸಲು ಈ ಮಾರ್ಪಾಡುಗಳು ಅನಿವಾರ್ಯವೂ ಆಗಿವೆ. ಒಟ್ಟಾರೆಯಾಗಿ ರೈತನ ಕೃಷಿ ಬದುಕು ಕಲರ್​ಫುಲ್​ ಆಗುತ್ತಿವೆ. ಆದರೆ ಸ್ವತಃ ರೈತನ ಬದುಕು ಬಹುತೇಕ ಕಡೆ ಮೂರಾಬಟ್ಟೆಯಾಗಿದೆ. ಹೈಬ್ರೀಡ್ ವರ್ಸಸ್ ನಾಟಿ ತಳಿಗಳ ಸಮರದಲ್ಲಿ ನಾಟಿ ತಳಿಗಳು ಸದ್ದಿದಲ್ಲದೆ ವಿನಾಶದಂಚು ತಲುಪಿವೆ. ಈ ಮಧ್ಯೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ರೈತನೊಬ್ಬ (Farmer) ಅಚ್ಚ ಬಿಳುಪಿನ ಹೂಕೋಸು ಬೆಳೆಯನ್ನೂ ಕಲರ್​ಫುಲ್​ ಆಗಿಸಿದ್ದು (Colored Cauliflower), ಬಣ್ಣ ಬಣ್ಣದ ಹೋಕೋಸು ಬೆಳೆಯಲಾರಂಭಿಸಿದ್ದಾನೆ. ಮೇಲಿನ ಚಿತ್ರದಲ್ಲಿ ನಾನಾ ಬಣ್ಣಗಳ ಹೂಕೋಸು ಇದೆ (success story). ಈ ಹೂಕೋಸುಗಳು (vegetable) ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕಣ್ಣು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪರ್ಪಲ್ ವ್ಯಾಲೆಂಟಿನಾದಲ್ಲಿ ಆಂಥೋಸಯಾನಿನ್ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಕೃಷಿಯು ಶ್ರಮದಾಯಕ ಕ್ಷೇತ್ರವಾಗಿದೆ. ಅಲ್ಲದೆ ಕನಿಷ್ಠ ಲಾಭಕ್ಕಿಂತ, ಹೆಚ್ಚಾಗಿ ನಷ್ಟವೇ ಇಲ್ಲಿ ಕಂಡುಬರುತ್ತಿದೆ. ಅನೇಕ ರೈತರು ಕೃಷಿ ಕ್ಷೇತ್ರದಲ್ಲಿ ಹೊಸತನವನ್ನು ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ನಷ್ಟ, ಸಂಕಷ್ಟಗಳ ನಡುವೆಯೂ ಸಾಲದ ಸುಳಿಗೆ ಸಿಲುಕದೆ ಕೃಷಿಯಲ್ಲಿ ಹೊಸತನ ತಂದ ರೈತರು ನಮ್ಮ ನಡುವೆಯೇ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ರೈತನೂ ಹೊಸ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ. ಬಣ್ಣಬಣ್ಣದ ಹೂಕೋಸು ಬೆಳೆದು ತನ್ನ ಬದುಕನ್ನು ಕಲರ್ ಫುಲ್ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಪ್ರಮಥಾ ಮಾಝಿ ಎಂಬ 62 ವರ್ಷದ ರೈತನ ಸಾಧನೆ ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಪೂರ್ವ ಮಿಡ್ನಾಪುರ ಜಿಲ್ಲೆಯ ಕೋಲಘಾಟ್ ವೃಂದಾಬನ್ ಚಕ್ ಗ್ರಾಮದಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳದ ರೈತ ಈತ. ಇವರಿಗೆ ಸುಮಾರು ಮೂರೂವರೆ ಎಕರೆ ಕೃಷಿ ಭೂಮಿ ಇದೆ. ಪ್ರಮಥಾ ಮಾಝಿ ಅದರಲ್ಲಿ ಬಣ್ಣಬಣ್ಣದ ಹೂಕೋಸು ಬೆಳೆದು ಲಾಭ ಗಳಿಸುತ್ತಾರೆ. ಇವರು ತಮ್ಮ ಜಮೀನಿನಲ್ಲಿ ಕೇಸರಿ, ಹಸಿರು ಮತ್ತು ಗುಲಾಬಿ ಬಣ್ಣದಲ್ಲಿ ಹೂಕೋಸುಗಳನ್ನು ಬೆಳೆಯುತ್ತಾರೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಹೂಕೋಸು ಬೀಜಗಳನ್ನು ಖರೀದಿಸಿದ ಅವರು ವಿವಿಧ ಬಣ್ಣಗಳ ಹೂಕೋಸು ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ಅಂತ್ಯದ ವೇಳೆಗೆ ಅವರು ವ್ಯಾಲೆಂಟಿನಾ ಮತ್ತು ಕ್ಯಾರೊಟಿನಾ ಜಾತಿಯ ಹೂಕೋಸು ಬೀಜಗಳನ್ನು ನೆಟ್ಟರು. ಇದು ಬೆಳೆಯಲು 75 ರಿಂದ 85 ದಿನಗಳನ್ನು ತೆಗೆದುಕೊಂಡಿತು. 2013 ರಿಂದ ತರಕಾರಿಗಳ ವಿವಿಧ ಹೈಬ್ರೀಡ್ ಬೆಳೆಗಳ ಕೃಷಿಯೊಂದಿಗೆ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಹೈಬ್ರಿಡ್ ಹೂಕೋಸು ತಳಿಯು ಕ್ರೂಸಿಫೆರಸ್ ಅಥವಾ ಎಲೆಕೋಸು ಕುಟುಂಬಕ್ಕೆ ಸೇರಿದೆ. ಸಸ್ಯ ತಳಿಗಾರರು ನೈಸರ್ಗಿಕವಾಗಿ ಈ ಹಸಿರು ಪ್ರಭೇದಗಳನ್ನು ವ್ಯಾಲೆಂಟಿನಾ (ನೆರಳು ಬಣ್ಣ), ಕ್ಯಾರೋಟಿನಾ (ಕೇಸರಿ ಬಣ್ಣ) ಮತ್ತು ಬ್ರೊಕೊಲಿ ಎಂದು ಕರೆಯುತ್ತಾರೆ.

ಈ ಹೂಕೋಸುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕಣ್ಣು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪರ್ಪಲ್ ವೆಲೆಂಟಿನಾದಲ್ಲಿ ಆಂಥೋಸಯಾನಿನ್ ಎಂಬ ಪೋಷಕಾಂಶ ಸಮೃದ್ಧವಾಗಿದೆ ಎಂದು ತಜ್ಞರು ಹೇಳುತ್ತಾರೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅವರು 2014 ರಲ್ಲಿ ಮಿಶ್ರ ಬಣ್ಣದ ಹೂಕೋಸು ಬೆಳೆಯಲು ಪ್ರಾರಂಭಿಸಿದರೆ, ಇತ್ತೀಚಿನ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ. ಈ ವರ್ಷ, ಅವರು ಸುಮಾರು 8 ಸಾವಿರ ಹಸಿರು ಕೋಸುಗಡ್ಡೆ ಬೆಳೆಗಳನ್ನು ಹಾಕಿದರು. ಚಳಿಗಾಲದಲ್ಲಿ ಕೊಯ್ಲು ಮಾಡಿ ಮಾರುಕಟ್ಟೆಗೆ ಹಂಚುತ್ತಿದ್ದರು.

ಮೊಟ್ಟಮೊದಲ ಬಾರಿಗೆ ಪ್ರಯೋಗಾರ್ಥವಾಗಿ ಸಣ್ಣ ಪ್ರಮಾಣದಲ್ಲಿ ಈ ಬೆಳೆಯನ್ನು ಕೃಷಿ ಮಾಡಿದ್ದಾಗಿ ಪ್ರಮಥಾ ಮಾಝಿ ತಿಳಿಸಿದ್ದಾರೆ. ಆದರೆ, ಅದು ದೊಡ್ಡ ಯಶಸ್ಸು ಕಂಡಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೃಷಿಯಲ್ಲಿ ಸದಾ ಸಂಕಷ್ಟ ಎದುರಿಸುತ್ತಿರುವ ರೈತರು ಕೃಷಿಯಲ್ಲಿ ನಾನಾ ಪ್ರಯೋಗ ಮಾಡಿ ಲಾಭ ಗಳಿಸುವ ಖುಷಿಯಲ್ಲಿದ್ದಾರೆ. ಅನ್ನದಾತೋ ಸುಖೀಭವ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ