Modi and first time voters: ಕರ್ನಾಟಕದ ಯುವ ಮತದಾರರಲ್ಲಿ ಬ್ರಾಂಡ್​ ಮೋದಿ ಸೆಳೆತ

|

Updated on: Apr 14, 2023 | 3:25 PM

ಈ ಬಾರಿ ಮೋದಿ ಹವಾ ಹೇಗಿರಬಹುದು ಮತ್ತು ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಪಡೆದಿರುವ ಯುವ ಜನತೆ ಏನು ವಿಚಾರ ಮಾಡುತ್ತಿರಬಹುದು? ಯುವಜನತೆ ಮೋದಿಯವರನ್ನು ಮೆಚ್ಚಲು ಕಾರಣವೇನಿರಬಹುದು? ಈ ಬಾರಿ ಯುವಜನತೆಯ ಒಲವು ಯಾರ ಕಡೆ ಇದೆ ಎಂಬುದನ್ನು ತಿಳಿಯೋಣ.

Modi and first time voters: ಕರ್ನಾಟಕದ ಯುವ ಮತದಾರರಲ್ಲಿ ಬ್ರಾಂಡ್​ ಮೋದಿ ಸೆಳೆತ
ಪ್ರಧಾನಿ ಮೋದಿ
Follow us on

2014 ರಲ್ಲಿ ಪ್ರಾರಂಭವಾದ ಮೋದಿ ಶಕೆ ಇನ್ನೂ ಮುಂದುವರಿದಿದೆ. ಒಂದೇ ಬಾರಿ ಮೋದಿ ಮೋಡಿ (PM Narendra Modi), ಉದ್ಯೋಗ ಕೊಟ್ಟಿಲ್ಲ ಹಾಗಾಗಿ ಯುವಜನತೆ ಅವರಿಗೆ ಬೆಂಬಲ ಸೂಚಿಸುವುದಿಲ್ಲ ಎಂಬ ವಿರೋಧ ಪಕ್ಷಗಳ (Opposition Party) ಲೆಕ್ಕಾಚಾರ ಉಲ್ಟಾ ಆಗಿ 2019 ರಲ್ಲಿ ಇನ್ನೂ ಹೆಚ್ಚಿನ ಸೀಟುಗಳೊಂದಿಗೆ ಅವರು ಅಧಿಕಾರಕ್ಕೆ ಬಂದರು. ಇನ್ನೇನು ಲೋಕಸಭಾ ಚುನಾವಣೆಗೆ (Lok Sabha Elections) ಒಂದೇ ವರ್ಷ ಇದೆ. ಅದರ ನಡುವೆ, ಕರ್ನಾಟಕದ ವಿಧಾನಸಭೆ ಚುನಾವಣೆ ಬಂದಿದೆ. ಈ ಬಾರಿ ಮೋದಿ ಹವಾ ಹೇಗಿರಬಹುದು ಮತ್ತು ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಪಡೆದಿರುವ ಯುವ ಜನತೆ ಏನು ವಿಚಾರ ಮಾಡುತ್ತಿರಬಹುದು? ಯುವಜನತೆ ಮೋದಿಯವರನ್ನು ಮೆಚ್ಚಲು ಕಾರಣವೇನಿರಬಹುದು? ಈ ಬಾರಿ ಯುವಜನತೆಯ ಒಲವು ಯಾರ ಕಡೆ ಇದೆ ಎಂಬುದನ್ನು ತಿಳಿಯೋಣ.

ಈ ವಿಚಾರ ಈ ಬಾರಿ ಮಾತ್ರ ಮುನ್ನೆಲೆಗೆ ಬಂದಿಲ್ಲ. 2018 ರಲ್ಲಿ ಕೂಡ ಇದೇ ರೀತಿಯ ಲೆಕ್ಕಾಚಾರದ ಬಗ್ಗೆ ಜನ ತುಂಬಾ ಕುತೂಹಲದಿಂದ ವಿಶ್ಲೇಷಣೆ ಮಾಡಿದ್ದರು. ವಿರೋಧ ಪಕ್ಷದ ನಾಯಕರು ಕೂಡ ಖಾಸಗಿಯಾಗಿ ಒಪ್ಪಿಕೊಳ್ಳುವ ಒಂದು ಮಾತೆಂದರೆ, ಹೆಚ್ಚಿನ ಸಂಖ್ಯೆಯ ಯುವ ಮತದಾರರು ಮೋದಿ ಮೋಡಿಯ ಸೆಳೆಕ್ಕೆ ಒಳಗಾಗಿದ್ದಾರೆ. 2018 ವಿಧಾನ ಸಭಾ ಚುನಾವಣಾ ನಂತರ ನಡೆದ ವಿಶ್ಲೇಷಣೆ ಪ್ರಕಾರ, 10-12 ಸೀಟನ್ನು ಮೋದಿ ತಮ್ಮ ಕರಿಷ್ಮಾ ಮೂಲಕ ಪಕ್ಷಕ್ಕೆ ಗೆಲ್ಲಿಸಿ ಕೊಟ್ಟಿದ್ದಾರೆ.

2023 ವಿಧಾನಸಭಾ ಚುನಾವಣೆಗೆ ಕೆಲವು ದಿನಗಳಷ್ಟೇ ಬಾಕಿ ಇದ್ದು, ಈಗಾಗಲೇ ಕರ್ನಾಟಕದ 221 ಕ್ಷೇತ್ರಗಳಲ್ಲಿ ಸುಮಾರು 12 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಜನವರಿಯಲ್ಲಿ ತಿಳಿಸಿದ್ದರು. ಕೆಲವು ಹೊಸ ಮತದಾರರ ಬಳಿ ನಾವು ಮಾತನಾಡಿದಾಗ ಅವರು ಯಾಕೆ ಮೋದಿಯನ್ನು ಇಷ್ಟ ಪಡುತ್ತಾರೆ? ಈ ಕುರಿತು ಕೆಲವು ಕುತೂಹಲಕಾರಿ ಅಂಶ ಬೆಳಕಿಗೆ ಬಂತು.

ಮೋದಿ ಅವರ ಕೆಲವು ನಡೆ ಅವರನ್ನು ಯುವ ಜನತೆಗೆ ಹತ್ತಿರ ಮಾಡಿತು. ಅದು ಮನ್ ಕಿ ಬಾತ್ ಕಾರ್ಯಕ್ರಮವಾಗಿರಬಹುದು ಅಥವಾ ಹೊರ ದೇಶಗಳಲ್ಲಿ ಹಿಂದಿಯಲ್ಲಿ ಭಾಷಣ ಮಾಡಿರುವುದಾಗಿರಬಹುದು. ಲಂಡನ್, ಸಿಡ್ನಿ ಮತ್ತು ನ್ಯೂ ಯಾರ್ಕ್ ನಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದ್ದರು, ಇದು ಯುವಜನತೆಗೆ ಹೆಮ್ಮೆಯನ್ನು ತಂದಿತ್ತು.

ಈ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಮನುಶ್ರೀ (ಹೆಸರು ಬದಲಾಯಿಸಲಾಗಿದೆ), “ಮನ್ ಕಿ ಬಾತ್ ಕಾರ್ಯಕ್ರಮವನ್ನು ಯಾವಾಗಲು ನಮ್ಮ ಮನೆಯಲ್ಲಿ ಕೇಳುತ್ತಾರೆ. ಅವರು ವಿದ್ಯಾರ್ಥಿಗಳ ಬಗ್ಗೆ ತೋರಿಸುವ ಕಾಳಜಿ, ಪರೀಕ್ಷಾ ಸಲಹೆಗಳು ನನ್ನನ್ನು ಅಂದಿನಿಂದಲೂ ಪ್ರೇರೇಪಿಸಿದೆ.” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಯುವ ಜನತೆ ಹೇಳುವ ಪ್ರಕಾರ ಮೋದಿಯವರು ಯುವಜನತೆಯಲ್ಲಿ ದೇಶಪ್ರೇಮೇವನ್ನು ಹುಟ್ಟು ಹಾಕುತ್ತಾರಂತೆ. ಇಷ್ಟು ವರ್ಷಗಳಲ್ಲಿ ಅದೆಷ್ಟೋ ಬಾರಿ ಭಾರತ ಉಗ್ರಗಾಮಿ ಚಟುವಟಿಕೆಗಳಿಗೆ ಬಲಿಯಾಗಿತ್ತು ಆದರೆ ಭಾರತ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಬೆಂಗಳೂರಿನ ನಿವಾಸಿ ಅನುಪಮ್ (ಹೆಸರು ಬದಲಾಯಿಸಲಾಗಿದೆ) “ಮೋದಿ ಆಡಳಿತದಲ್ಲಿ ಪ್ರಪ್ರಥಮ ಬಾರಿಗೆ ಭಾರತ ವಿಶ್ವಕ್ಕೆ ಮಹತ್ವದ ಸಂದೇಶವನ್ನು ಸಾರಿದೆ. ಅಂದು ನಡೆದ ಸರ್ಜಿಕಲ್ ಸ್ಟ್ರೈಕ್ ನೆನೆಸಿಕೊಂಡರೆ ಈಗಲೂ ಹೆಮ್ಮೆ ಎನಿಸುತ್ತದೆ. ಮೋದಿ ಇದ್ದರೆ ದೇಶ ಸುರಕ್ಷಿತವಾಗಿರುತ್ತದೆ ಎಂಬ ಭಾವನೆ ನನ್ನದು.” ಎಂದು ಹೇಳಿದರು. ಈ ನಡೆ ಮುಖ್ಯವಾಗಿ ಯುವಜನತೆಯಲ್ಲಿ ದೇಶಪ್ರೇಮದ ಭಾವನೆಯನ್ನು ಹುಟ್ಟು ಹಾಕಿದೆ.

ಹೊರ ದೇಶಗಳಲ್ಲಿ ಮೋದಿಯವರಿಗೆ ಸಿಗುತ್ತಿರುವ ಗೌರವ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಉದಾಹರಣೆಗೆ ರಶಿಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ಮೋದಿಯವರ ಮಧ್ಯಸ್ಥಿಕೆಯಿಂದ ಬಹುತೇಕ ಎಲ್ಲರೂ ಅದರಲ್ಲೂ ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ತಾಯ್ನಾಡನ್ನು ಸೇರಿದರು. ಜೊತೆಗೆ ಈ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ಪಾಸ್ ಮಾಡಲು 2 ಪ್ರಯತ್ನಗಳನ್ನೂ ನೀಡಲಾಗಿದೆ. ಬೆಂಗಳೂರಿನ ನಿವಾಸಿ ಅನೀಶ್, ” ಮೋದಿ ಹೊರತಾಗಿ ಬೇರೆ ಯಾರಿಂದಲೂ 72 ಗಂಟೆಗಳಲ್ಲಿ ನಮ್ಮ ದೇಶದ ವಿದ್ಯಾರ್ಥಿಗಳನ್ನು ಯುದ್ಧಗ್ರಸ್ತ ಭೂಮಿಯಿಂದ ಸುರಕ್ಷಿತವಾಗಿ ಕರೆ ತರಲು ಆಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ನಿವಾಸಿ ಪ್ರೇರಣಾ ಮಾತನಾಡುತ್ತ,”ಮೋದಿಯವರು ಪ್ರಧಾನಿಯಾದ ಮೇಲೆ ಹೊರ ದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಇದ್ದ ಗೌರವ ಹೆಚ್ಚಾಗಿದೆ. ಮೋದಿಯವರ ಆಡಳಿತದಲ್ಲಿನ ಪಾರದರ್ಶಕತೆ ಅವರ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ಮುಂದಿನ 5 ವರ್ಷವೂ ಭಾರತ ಮೋದಿಯವರ ಆಡಳಿತದಲ್ಲಿದ್ದರೆ, ಭಾರತ ಮತ್ತಷ್ಟು ಅಭಿವೃದ್ಧಿಯನ್ನು ಕಾಣುವುದರಲ್ಲಿ ಸಂಶಯವೇ ಇಲ್ಲ. ರೈತರಿಂದ ಉದ್ಯಮಿಗಳ ವರೆಗೂ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಮೋದಿ.” ಎಂದು ತಮ್ಮ ಅನಿಸಿಕೆಯನ್ನು Tv9 ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ

ಮೋದಿಯವರ ನಡೆ, ನುಡಿ ಮತ್ತು ಅವರು ಹೊರ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವ ರೀತಿಗೆ ಯುವಜನತೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದೆ. ಪ್ರತಿ ಭಾಷಣದಲ್ಲಿ ಮೋದಿ ಯುವಜನತೆಯ ಕುರಿತು ಮಾತನಾಡುತ್ತಾರೆ. ಯುವಜನತೆಯ ಪ್ರಾಮುಖ್ಯತೆ, ಅವರ ಹೇಗೆ ದೇಶದ ಭವಿಷ್ಯವನ್ನು ರೂಪಿಸಲಿದ್ದಾರೆ ಎಂದು ಹೇಳುವ ಮೂಲಕ ಯುವಕರನ್ನು ಪ್ರೇರೇಪಿಸುತ್ತಾರೆ, ಈ ಎಲ್ಲ ಅಂಶಗಳು ಯುವ ಜನತೆಯನ್ನು ಮೋದಿ ಕಡೆ ವಾಲುವಂತೆ ಮಾಡಿದೆ.