ದೆಹಲಿ: ರಾಹುಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರನ್ನು ಗೌರವಿಸಲು ಅವರಲ್ಲಿ ಯಾರೂ ನೆಹರು ಹೆಸರನ್ನು ಏಕೆ ಬಳಸಲಿಲ್ಲ ಎಂದು ಕೇಳಿದ್ದಾರೆ. “ನಾವು ಎಲ್ಲಿಯಾದರೂ ನೆಹರು ಅವರನ್ನು ಉಲ್ಲೇಖಿಸುವುದನ್ನು ಬಿಟ್ಟಿದ್ದರೆ ಅವರು (ಕಾಂಗ್ರೆಸ್) ಅಸಮಾಧಾನಗೊಳ್ಳುತ್ತಾರೆ, ನೆಹರು ಅವರು ಅಂತಹ ಮಹಾನ್ ವ್ಯಕ್ತಿಯಾಗಿದ್ದರು. ಆದರೆ ಅವರ್ಯಾರೂ ನೆಹರು ಸರ್ನೇಮ್ ಏಕೆ ಬಳಸುವುದಿಲ್ಲ, ನೆಹರು ಹೆಸರನ್ನು ಬಳಸುವುದರಲ್ಲಿ ನಾಚಿಕೆ ಏನಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮೋದಿ ಈ ಮಾತನ್ನು ಹೇಳಿದ್ದಾರೆ.ಬಿಲಿಯನೇರ್ ಗೌತಮ್ ಅದಾನಿ ಅವರೊಂದಿಗಿನ ನಂಟಿನ ಬಗ್ಗೆ ಮೋದಿ ಹೇಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ಸದನದಲ್ಲಿ ಗದ್ದಲದ ನಡುವೆಯೇ ಮೋದಿ ಮಾತನಾಡಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಪ್ರಧಾನ ಮಂತ್ರಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಪಕ್ಷವು ತನ್ನ ಸರ್ಕಾರವನ್ನು ಟೀಕಿಸುವಾಗ ತನ್ನದೇ ಆದ ವಿವಾದಗಳನ್ನು ಮುಚ್ಚಿಹಾಕುತ್ತಿದೆ ಎಂದು ಆರೋಪಿಸಿದರು.”ನಾವು ರಾಜ್ಯಗಳಿಗೆ ತೊಂದರೆ ನೀಡುತ್ತೇವೆ ಎಂದು ಅವರು ಹೇಳುತ್ತಾರೆ, ಆದರೆ ಅವರು ಚುನಾಯಿತ ರಾಜ್ಯ ಸರ್ಕಾರಗಳನ್ನು 90 ಬಾರಿ ಉರುಳಿಸಿದ್ದಾರೆ. ಒಬ್ಬ ಕಾಂಗ್ರೆಸ್ ಪ್ರಧಾನಿ ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356 ನೇ ವಿಧಿಯನ್ನು ಐವತ್ತು ಬಾರಿ ಬಳಸಿದರು. ಅದು ಇಂದಿರಾ ಗಾಂಧಿ. ಅದೇ ವೇಳೆ ಈ ದೇಶ ಯಾವುದೇ ಕುಟುಂಬದ ಆಸ್ತಿಯಲ್ಲ ಎಂದು ಮೋದಿ ಹೇಳಿದ್ದಾರೆ.
ವಿಪಕ್ಷಗಳು ನಿರಂತರ ಘೋಷಣೆ ಕೂಗುತ್ತಿದ್ದಾಗ ಪ್ರಧಾನಿ ಮೋದಿ, “ನೀವು ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ ಕಮಲ (ಬಿಜೆಪಿ ಚಿಹ್ನೆ) ಅರಳುತ್ತದೆ” ಎಂದು ಹೇಳಿದರು. ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಸಾಂವಿಧಾನಿಕ ನಿಬಂಧನೆಗಳನ್ನು ಹೆಚ್ಚು ದುರುಪಯೋಗಪಡಿಸಿಕೊಂಡ ಪಕ್ಷ ಕಾಂಗ್ರೆಸ್: ಮೋದಿ ವಾಗ್ದಾಳಿ
“ಕೆಲವು ಸದಸ್ಯರ ನಡವಳಿಕೆ ಮತ್ತು ಸ್ವರ ಇಡೀ ದೇಶಕ್ಕೆ ನಿರಾಶಾದಾಯಕವಾಗಿದೆ, ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ ಜಿತ್ನಾ ಕೀಚಡ್ ಉಚ್ಛಾಲೋಗೆ, ಕಮಲ ಉತ್ನಾ ಹೀ ಖಿಲೇಗಾ (ನೀವು ನಮ್ಮ ಮೇಲೆ ಎಷ್ಟು ಕೆಸರು ಎಸೆದರೂ, ಕಮಲ ಹೆಚ್ಚು ಅರಳುತ್ತದೆ) ಕಮಲ ಅರಳಿಸಿದ್ದಕ್ಕಾಗಿ ನಾವು ಪ್ರತಿಪಕ್ಷಗಳಿಗೆ ಧನ್ಯವಾದ ಹೇಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Thu, 9 February 23