ಶ್ರೀಮಂತ ಮನೆಯಲ್ಲಿದ್ದರೂ ಸ್ವಾತಂತ್ರ್ಯವಿಲ್ಲದ ಬದುಕು: ಸಿಸಿ ಕ್ಯಾಮರಾ ಕಣ್ಗಾವಲು, ಪ್ರತಿ ರೂಪಾಯಿಗೂ ಕೈ ಚಾಚಬೇಕಾದ ಸ್ಥಿತಿ,ಮಾವನನ್ನು ಕೊಂದೇ ಬಿಟ್ಟ ಸೊಸೆ

ಕಾನ್ಪುರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದು. ಶ್ರೀಮಂತ ಕುಟುಂಬದ ಸೊಸೆಯು ಮನೆಯಲ್ಲಿ ಸಿಸಿಟಿವಿ ಕಣ್ಗಾವಲು, ಆರ್ಥಿಕ ಸ್ವಾತಂತ್ರ್ಯದ ಕೊರತೆಯಿಂದ ಬೇಸತ್ತು ಮಾವನ ಕೊಲೆಗೆ ಸುಪಾರಿ ನೀಡಿದ್ದಾಳೆ. ಬಂಧನಕ್ಕೊಳಗಾದ ಸೊಸೆಗೆ, ಅತಿಯಾದ ಕಟ್ಟುಪಾಡುಗಳು ಹಾಗೂ ಮೌನ ದ್ವೇಷವು ಈ ಭೀಕರ ದುರಂತಕ್ಕೆ ಕಾರಣವಾಯಿತು. ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳೇ ಕೊನೆಗೆ ಕೊಲೆ ರಹಸ್ಯ ಬಯಲು ಮಾಡಿದವು.

ಶ್ರೀಮಂತ ಮನೆಯಲ್ಲಿದ್ದರೂ ಸ್ವಾತಂತ್ರ್ಯವಿಲ್ಲದ ಬದುಕು: ಸಿಸಿ ಕ್ಯಾಮರಾ ಕಣ್ಗಾವಲು, ಪ್ರತಿ ರೂಪಾಯಿಗೂ ಕೈ ಚಾಚಬೇಕಾದ ಸ್ಥಿತಿ,ಮಾವನನ್ನು ಕೊಂದೇ ಬಿಟ್ಟ ಸೊಸೆ
ಮಹಿಳೆ
Image Credit source: NDTV

Updated on: Sep 09, 2026 | 10:49 AM

ಕಾನ್ಪುರ, ಸೆಪ್ಟೆಂಬರ್ 09: ಹೊರನೋಟಕ್ಕೆ ಅಷ್ಟೈಶ್ವರ್ಯ, ಸಮಾಜದಲ್ಲಿ ದೊಡ್ಡ ಉದ್ಯಮಿ ಕುಟುಂಬವೆಂಬ ಗೌರವ, ವೈಭವೋಪೇತ ಅಪಾರ್ಟ್‌ಮೆಂಟ್, ಆದರೆ ಆ ನಾಲ್ಕು ಗೋಡೆಗಳ ಒಳಗೆ ಕಾಲಿಟ್ಟರೆ ಕಾಣುತ್ತಿದ್ದದ್ದು ಪ್ರೀತಿಯ ಸಂಸಾರವಲ್ಲ, ಬದಲಿಗೆ ಜೈಲಿನಂತಹ ವಾತಾವರಣ. ಒಬ್ಬ ಗೃಹಿಣಿಯ ವೈಯಕ್ತಿಕ ಬದುಕು, ಸ್ವಾಭಿಮಾನ ಮತ್ತು ಮನೆಯ ಹಿರಿಯರ ಅತಿಯಾದ ಕಣ್ಗಾವಲಿನ ನಡುವಿನ ಸಂಘರ್ಷ ಕೊನೆಗೆ ಕಾನ್ಪುರದಲ್ಲಿ ಒಂದು ಭೀಕರ ರಕ್ತಸಿಕ್ತ ದುರಂತಕ್ಕೆ ನಾಂದಿ ಹಾಡಿದೆ.

63 ವರ್ಷದ ವಿನೀತ್ ಮಿನೋಚಾ ಔಷಧ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದ ಶ್ರೀಮಂತ ವ್ಯಕ್ತಿ. ಆದರೆ ಅದೇ ಮನೆಯ ಸೊಸೆಯಾಗಿ ಬಂದ ಶಾಲು ಪಾಲಿಗೆ ಆ ಶ್ರೀಮಂತಿಕೆ ಕೇವಲ ಕಾಗದದ ಹೂವಾಗಿತ್ತು. ಮನೆಯ ಹಾಲ್, ಕಾರಿಡಾರ್, ಬಾಗಿಲು, ಹೀಗೆ ಪ್ರತಿ ಮೂಲೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ನಿರಂತರವಾಗಿ ಆಕೆಯನ್ನೇ ಹಿಂಬಾಲಿಸುತ್ತಿದ್ದವು.

ತಾನು ಎಲ್ಲಿಗೆ ಹೋಗುತ್ತಿದ್ದೇನೆ, ಯಾರೊಂದಿಗೆ ಮಾತನಾಡುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬ ಪ್ರತಿಯೊಂದು ಹೆಜ್ಜೆಯ ಮೇಲೂ ಮಾವನ ಕಣ್ಣಿತ್ತು. ಕೋಟಿಗಟ್ಟಲೆ ಆಸ್ತಿಯಿದ್ದರೂ ಸಣ್ಣಪುಟ್ಟ ಮನೆ ಖರ್ಚಿಗೂ, ತನ್ನ ವೈಯಕ್ತಿಕ ಆಸೆಗಳಿಗೂ ಮಾವನ ಎದುರು ಕೈಚಾಚಬೇಕಾದ ಪರಿಸ್ಥಿತಿ ಆಕೆಯಲ್ಲಿ ದಿನೇದಿನೆ ಹತಾಶೆಯನ್ನು ಹೆಚ್ಚಿಸುತ್ತಿತ್ತು. ತಿಂಗಳಿಗೆ ಸಿಗುತ್ತಿದ್ದ ಹತ್ತು ಸಾವಿರ ರೂಪಾಯಿಯ ಜೊತೆಗೆ, ತಡವಾಗಿ ಮನೆಗೆ ಬಂದರೆ ಎದುರಾಗುತ್ತಿದ್ದ ಪ್ರಶ್ನೆಗಳ ಸುರಿಮಳೆ ಆಕೆಯನ್ನು ಉಸಿರುಗಟ್ಟಿಸಿತ್ತು.

ಮತ್ತಷ್ಟು ಓದಿ: “ಅಪ್ಪ ನಾನು ಮದುವೆಯಾಗಿದ್ದೇನೆ, ನನ್ನನ್ನು ಬಿಟ್ಟುಬಿಡಿ”: ಮಗಳ ಕಣ್ಣೀರಿಗೂ ಬೆಲೆ ಕೊಡದೆ ಎಳೆದೊಯ್ದ ತಂದೆ

ಈ ಮೌನ ಆಕ್ರೋಶ, ಅವಮಾನಗಳು ವರ್ಷಗಳ ಕಾಲ ಎದೆಯೊಳಗೆ ಹೊಗೆಯಾಡಿ ಅಂತಿಮವಾಗಿ ಸೇಡಿನ ಬೆಂಕಿಯಾಗಿ ಬದಲಾದವು. ತನಗೆ ಸಿಗದ ಸ್ವಾತಂತ್ರ್ಯವನ್ನು ರಕ್ತದ ಮೂಲಕವೇ ಕಸಿದುಕೊಳ್ಳಲು ನಿರ್ಧರಿಸಿದ ಆಕೆ, ಮಾಜಿ ಕೆಲಸದಾಳಿಗೆ 6 ಲಕ್ಷ ರೂ. ಸುಪಾರಿ ಕೊಟ್ಟು ಮಾವನನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು. ಪತಿ, ಮಗುವಿನೊಂದಿಗೆ ಪಾರ್ಟಿಗೆ ತೆರಳಿ ಕೊಲೆಗೆ ವೇದಿಕೆ ಸಿದ್ಧಪಡಿಸಿದಳು. ಇತ್ತ ಮನೆಯೊಳಗಿನ ಹಿರಿಯ ಜೀವ ತನ್ನದೇ ಅಪಾರ್ಟ್‌ಮೆಂಟ್‌ನಲ್ಲಿ 26 ಬಾರಿ ಚಾಕು ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟಿರು.

ಅಪಾರ್ಟ್‌ಮೆಂಟ್‌ ನಕಲಿ ಕೀ ಮತ್ತು ಎಂಟ್ರಿ: ಶಾಲು ನಕಲಿ ಕೀಲಿಯನ್ನು ವಿಶಾಲ್‌ಗೆ ನೀಡಿದ್ದಳು. ಶನಿವಾರ ರಾತ್ರಿ ತಾನು ಪತಿ ಮತ್ತು ಮಗುವಿನೊಂದಿಗೆ ಪಾರ್ಟಿಗೆ ತೆರಳಿದ ತಕ್ಷಣ ವಿಶಾಲ್ ಮತ್ತು ಆತನ ಸಹಚರ ರಾಜ್ ಕಿಶೋರ್‌ಗೆ ಒಳಗೆ ಹೋಗಲು ಅವಕಾಶ ಕಲ್ಪಿಸಿದಳು. ಸೆಕ್ಯುರಿಟಿ ಗಾರ್ಡ್ ತಡೆದಾಗ, “ಅವರು ಔಷಧ ಡೆಲಿವರಿ ಮಾಡಲು ಬಂದಿದ್ದಾರೆ, ಬಿಡಿ ಎಂದು ಫೋನ್ ಮೂಲಕ ತಿಳಿಸಿದ್ದಳು.

ಹಾರ್ಟ್ ಅಟ್ಯಾಕ್ ನಾಟಕ ತಪ್ಪಿ 26 ಬಾರಿ ಇರಿತ: ಆರೋಪಿಗಳು ಮೊದಲು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು, ಅದನ್ನು ಹೃದಯಾಘಾತದಂತೆ ಬಿಂಬಿಸಲು ಯೋಜಿಸಿದ್ದರು. ಆದರೆ ವಿನೀತ್ ಮಿನೋಚಾ ಕೋಣೆಗೆ ಬರುತ್ತಿದ್ದಂತೆ ಯೋಜನೆಯಲ್ಲಿ ವ್ಯತ್ಯಾಸವಾಗಿ, ಅವರ ಮೇಲೆ 26 ಬಾರಿ ಚಾಕುವಿನಿಂದ ಇರಿದು ಪರಾರಿಯಾದರು.

ಮನೆಯಲ್ಲಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಕಳುವಾಗದ ಕಾರಣ ಪೊಲೀಸರಿಗೆ ದರೋಡೆಯಲ್ಲ ಎಂಬ ಅನುಮಾನ ಮೂಡಿತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ, ಭಾನುವಾರ ರಾತ್ರಿ ಎನ್‌ಕೌಂಟರ್ ನಡೆಸಿ ವಿಶಾಲ್ ಮತ್ತು ರಾಜ್ ಕಿಶೋರ್‌ನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ವಿಶಾಲ್ ನೀಡಿದ ಹೇಳಿಕೆಯಿಂದ ಸೊಸೆ ಶಾಲು ಅವರ ಕೈವಾಡ ಬಯಲಾಗಿದೆ.

ಯಾವ ಸಿಸಿಟಿವಿ ಕ್ಯಾಮೆರಾಗಳು ಸೊಸೆಯ ಪ್ರತಿ ಚಲನವಲನವನ್ನು ಸೆರೆಹಿಡಿಯುತ್ತಿದ್ದವೋ, ಕೊನೆಗೆ ಅದೇ ಕ್ಯಾಮೆರಾಗಳು ಹಂತಕರ ಮುಖಗಳನ್ನು ಬಯಲು ಮಾಡಿ ಸೊಸೆಯನ್ನು ಜೈಲಿನ ಕಂಬಿ ಹಿಂದೆ ತಳ್ಳಿದವು. ಕೌಟುಂಬಿಕ ಸಂಬಂಧಗಳಲ್ಲಿ ಪರಸ್ಪರ ಗೌರವ, ನಂಬಿಕೆ ಮತ್ತು ಸಂಭಾಷಣೆ ಕಳೆದುಹೋದಾಗ, ಮನೆಯೊಳಗಿನ ಕಟ್ಟುಪಾಡುಗಳು ಉಸಿರುಗಟ್ಟಿಸುವ ನಿಯಂತ್ರಣವಾದಾಗ ಎಂತಹ ಘೋರ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಾವ ಮಣ್ಣುಪಾಲಾದರೆ, ಸೊಸೆ ಕಂಬಿ ಎಣಿಸುತ್ತಿದ್ದಾಳೆ, ಇತ್ತ ತಂದೆಯನ್ನೂ ಕಳೆದುಕೊಂಡು, ಪತ್ನಿಯನ್ನೂ ಕಳೆದುಕೊಂಡ ವ್ಯಕ್ತಿ ಮತ್ತವರ ಮಗು ಅನಾಥವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us