ಚಂಡೀಗಢ: ದೆಹಲಿ ಚಲೋ ಚಳುವಳಿ ಸೇರಲು ಸಾವಿರಾರು ಯುವತಿಯರು ಸನ್ನದ್ಧರಾಗುತ್ತಿದ್ದಾರೆ. ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡುತ್ತ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸುವುದು ಅವರ ಗುರಿಯಾಗಿದೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಒಕ್ಕೂಟಗಳು ಭರ್ಜರಿ ತಾಲೀಮು ನಡೆಸಿವೆ. ಇದೇ ಉದ್ದೇಶದಿಂದ ಹರಿಯಾಣದ ರೈತ ಮಹಿಳೆಯರಿಗೆ ಟ್ರ್ಯಾಕ್ಟರ್ ಚಾಲನೆ ಕಲಿಸಲಾಗುತ್ತಿದೆ. ಟ್ರ್ಯಾಕ್ಟರ್ ಪರೇಡ್ ಮೂಲಕ ಚಳುವಳಿ ನಿರತ ತಮ್ಮ ಕುಟುಂಬದ ಇತರ ಸದಸ್ಯರನ್ನು ಸೇರುವ ಖುಷಿಯಲ್ಲಿ ಯುವತಿಯರು ಉತ್ಸಾಹದಿಂದಲೇ ಟ್ರ್ಯಾಕ್ಟರ್ ಚಾಲನೆ ಕಲಿಯುತ್ತಿದ್ದಾರೆ.
ತಮ್ಮ ಬೇಡಿಕೆಗಳು ಈಡೇರದಿದ್ದರೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ರೈತ ಸಂಘಟನೆಗಳು ಘೋಷಿಸಿದ್ದವು. ಕೇವಲ ಘೋಷಿಸಿದರೆ ಸಾಕೇ, ತಯಾರಿ ಬೇಡವೇ. ರಾಜಧಾನಿ ಸೇರಲು ತಮ್ಮ ಊರುಗಳಿಂದ ಸಾವಿರಾರು ಟ್ರ್ಯಾಕ್ಟರ್ಗಳನ್ನು ರೈತರ ಸಿದ್ಧಪಡಿಸುತ್ತಿದ್ದಾರೆ. ಜೊತೆಗೆ, ಜನವರಿ 26ರಂದು ಸ್ವತಃ ಯುವತಿಯರೇ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸುವಂತೆ ತಯಾರಿ ನಡೆಸುತ್ತಿದ್ದಾರೆ.
ಇದು ಕೇವಲ ಟ್ರೇಲರ್ ಅಷ್ಟೇ!
ಹರಿಯಾಣದ ಖಟ್ಕರ್ ಟೋಲ್ ಬೂತ್ ಸಮೀಪ ಯುವತಿಯರು ಟ್ರ್ಯಾಕ್ಟರ್ ಚಾಲನೆ ಕಲಿಯುವ ದೃಶ್ಯ ಸಾಮಾನ್ಯವಾಗಿದೆ. ಈ ಟೋಲ್ ಬೂತ್ ಅನ್ನು ಚಳುವಳಿಕಾರರು ಮುಕ್ತ ಪ್ರವೇಶಕ್ಕೆ ಅನುವುಗೊಳಿಸಿದ್ದರು ಎಂಬುದು ಸಹ ಇಲ್ಲಿ ಉಲ್ಲೇಖನೀಯ. ಇಡೀ ಜಿಲ್ಲೆಯ ಯುವತಿಯರಿಗೆ ಖಟ್ಕರ್ ಬಳಿ ಟ್ರ್ಯಾಕ್ಟರ್ ತರಬೇತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಯುವತಿಯರೂ ಟ್ರ್ಯಾಕ್ಟರ್ ಚಾಲನೆಯಲ್ಲಿ ಪಳಗುತ್ತಿದ್ದಾರೆ ಎನ್ನುತ್ತಾರೆ ಸಪಾ ಖೇರಿ ಗ್ರಾಮದ ಸಿಕ್ಕಿಮ್ ನೈನ್. ಇದು ಕೇವಲ ಟ್ರೇಲರ್ ಅಷ್ಟೇ, ನಿಜವಾದ ಸಿನಿಮಾ ಇನ್ನೂ ಬಾಕಿಯಿದೆ ಎಂದು ಅವರು ಯುವತಿಯರ ಟ್ರ್ಯಾಕ್ಟರ್ ಕಲಿಕೆಯನ್ನು ವ್ಯಾಖ್ಯಾನಿಸುತ್ತಾರೆ. ಜನವರಿ 26 ಕ್ಕೆ ‘ದೆಹಲಿ ಚಲೋ’ ಎಂಬ ರಾಜಧಾನಿಯ ಗಡಿಗಳಳಲ್ಲಿ ನಡೆಯುತ್ತಿರುವ ವಾಸ್ತವದ ಚಲನಚಿತ್ರ 65ನೇ ದಿನವನ್ನು ಯಶಸ್ವಿಯಾಗಿ ಪೂರೈಸುವ ದೃಢ ವಿಶ್ವಾಸ ಅವರದು. ಅಂದು ನಮ್ಮ ಟ್ರ್ಯಾಕ್ಟರ್ ಚಲೋ ನೋಡಲು ಮರೆಯದಿರಿ ಎಂದು ರೈತ ನಾಯಕರು ಆಹ್ವಾನಿಸುತ್ತಾರೆ.
ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಅನಿಸುತ್ತಿದೆ
ನಮ್ಮ ಹಕ್ಕುಗಳನ್ನು ಪಡೆಯಲು ನಡೆಸುತ್ತಿರುವ ಈ ಹೋರಾಟ ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಅನಿಸುತ್ತಿದೆ ಎನ್ನುತ್ತಾರೆ ಟ್ರ್ಯಾಕ್ಟರ್ ಚಾಲನೆ ಕಲಿಕೆಯಲ್ಲಿ ತೊಡಗಿರುವ 35 ವರ್ಷದ ಸರೋಜ. ನಾನು ರೈತನ ಮಗಳು, ಹೀಗಾಗಿ ಈ ಚಳುವಳಿಯ ಭಾಗವಾಗಲು ನನಗೆ ಹೆಮ್ಮೆಯಿದೆ ಎಂದು ಅವರು ಹೇಳುತ್ತಾರೆ.
ಖಟ್ಕರ್, ಸಪಾ ಖೇರಿ, ಬರ್ಸಾಲಾ, ಪೋಕ್ರಿ ಖೇರಿಗಳಿಂದಲೂ ಟ್ರ್ಯಾಕ್ಟರ್ ಚಾಲನೆ ಕಲಿಯಲು ಹುಮ್ಮಸ್ಸಿನಿಂದ ಮಹಿಳೆಯರು ಬರುತ್ತಿದ್ದಾರೆ. ನಮ್ಮ ಮಕ್ಕಳು ಭಾರತದ ಗಡಿಯಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರರು ದೇಶದ ಗಡಿಯಲ್ಲಿ ಚಳುವಳಿ ನಿರತರಾಗಿದ್ದಾರೆ. ನಾವು ಗಣರಾಜ್ಯೋತ್ಸವದಲ್ಲಿ ಸೈನಿಕರಂತೆಯೇ ಪರೇಡ್ ನಡೆಸಲಿದ್ದೇವೆ ಎಂದು ಈಭಾಗದ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೂಲಕ ರೈತರ ಪರೇಡ್!