ದೇಶದ ಅತ್ಯಂತ ಕಿರಿಯ ಮೇಯರ್ ಆಗಿರುವ ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್ (Thiruvananthapuram Corporation) ಆರ್ಯಾ ರಾಜೇಂದ್ರನ್ (Mayor Arya Rajendran) ಅವರು, ಕೇರಳ 15ನೇ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕನಾಗಿರುವ ಬಲುಸೆರ್ರಿ ಎಂಎಲ್ಎ ಸಚಿನ್ ದೇವ್ನ್ನು ವಿವಾಹವಾಗಲಿದ್ದಾರೆ. ಈ ಬಗ್ಗೆ ಆರ್ಯಾ ಅವರೇ ದೃಢಪಡಿಸಿದ್ದಾರೆ. ‘ಮೊದಲು ನಾನು ಮತ್ತು ಸಚಿನ್ ದೇವ್ ಇಬ್ಬರೂ ಮಾತನಾಡಿಕೊಂಡಿದ್ದೇವೆ. ಬಳಿಕ ನಮ್ಮ ಪಾಲಕರಿಗೆ ಹೇಳಿದೆವು. ಇದೀಗ ನಮ್ಮ ಪಾಲಕರು ಮದುವೆ ಮಾತುಕತೆ ಪ್ರಾರಂಭಿಸಿದ್ದಾರೆ. ಹಾಗಂತ ತತ್ಕ್ಷಣಕ್ಕೇ ಮದುವೆ ನಡೆಯುತ್ತಿಲ್ಲ. ಇನ್ನೂ ಸ್ವಲ್ಪ ಕಾಲಾವಕಾಶ ಇದೆ’ ಎಂದು ಆರ್ಯಾ ಹೇಳಿದ್ದಾರೆ.
ಆರ್ಯಾ ರಾಜೇಂದ್ರನ್ ಅವರು 2020ರಲ್ಲಿ, ಅವರ 21ನೇ ವಯಸ್ಸಿನಲ್ಲಿ ತಿರುವನಂತಪುರಂ ಕಾರ್ಪೋರೇಶನ್ ಮೇಯರ್ ಹುದ್ದೆಗೆ ಏರಿದವರು. ಈ ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದಾರೆ. ಇವರು ನೇಮೊಮ್ ವಿಧಾನಸಭಾ ಕ್ಷೇತ್ರದ ಮುದವನ್ಮುಕಲ್ ಎಂಬ ವಾರ್ಡ್ನಿಂದ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದರು. ಸಚಿನ್ ದೇವ್ ಅವರು ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (SFI)ನ ರಾಜ್ಯ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿದ್ದರು. ಕೋಳಿಕ್ಕೋಡ್ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ. ನಂತರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಓದಿದ್ದಾರೆ. 27ನೇ ವಯಸ್ಸಿನಲ್ಲಿ ಬುಲುಸೆರ್ರಿ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.
ಇನ್ನು ಆರ್ಯಾ ಅವರೂ ಕೂಡ ಎಸ್ಎಫ್ಐನ ರಾಜ್ಯ ಸಮಿತಿ ಸದಸ್ಯರು. ಆರ್ಯಾ ಹಾಗೂ ಸಚಿನ್ ಇಬ್ಬರೂ ಕೇರಳದ ಅತ್ಯಂತ ದೊಡ್ಡ ಮಕ್ಕಳ ಸಂಸ್ಥೆಯಾದ, ಸಿಪಿಎಂ ಪಕ್ಷದ ಬಾಲ ಸಂಗಮ್ನಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ. ಹಾಗಾಗಿ ಮೊದಲಿನಿಂದಲೂ ಪರಿಚಿತರೂ ಹೌದು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯಾ ರಾಜೇಂದ್ರನ್, ಎಸ್ಎಫ್ಐನಲ್ಲಿದ್ದಾಗಿನಿಂದಲೂ ನಾವು ಪರಿಚಿತರು. ಈಗಷ್ಟೇ ಮದುವೆ ಮಾತುಕತೆ ಶುರುವಾಗಿದ್ದು, ನಮ್ಮ ಪಕ್ಷದ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ ಸಾಂಕ್ರಾಮಿಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಿ: ಹಾಂಗ್ ಕಾಂಗ್ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಲಹೆ
Published On - 5:49 pm, Wed, 16 February 22