ಬಯಲಿಗೆ ಬಂದ ಅಮೆರಿಕಾದ ಟಾಪ್ ಸೀಕ್ರೆಟ್ ದಾಖಲೆಗಳು: ಸೋರಿಕೆಯಾದ ದಾಖಲೆಗಳು ಉಕ್ರೇನ್ ಯುದ್ಧದ ಬಗ್ಗೆ ಏನು ಹೇಳುತ್ತಿವೆ?

|

Updated on: Apr 11, 2023 | 3:50 PM

ಅಮೆರಿಕಾದ ರಕ್ಷಣಾ ಇಲಾಖೆಯ ಅತ್ಯುನ್ನತ ಅಧಿಕಾರಿಗಳಿಗೆಂದು ಮೀಸಲಾದ ಒಂದಷ್ಟು ದಾಖಲೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರಿಗೂ ಲಭ್ಯವಾಗಿದ್ದವು. ಈ ದಾಖಲೆಗಳಲ್ಲಿ ಅಮೆರಿಕಾ ಆಂತರಿಕವಾಗಿ ನಡೆಸಿರುವ ಉಕ್ರೇನ್ ಯುದ್ಧದ ವಿಶ್ಲೇಷಣೆ, ಪಾಶ್ಚಾತ್ಯ ದೇಶಗಳೊಡನೆ ಉಕ್ರೇನಿನ ಸಂಬಂಧಗಳ ಕುರಿತಾದ ಗುಪ್ತಚರ ಮಾಹಿತಿಗಳೂ ಸೇರಿವೆ.

ಬಯಲಿಗೆ ಬಂದ ಅಮೆರಿಕಾದ ಟಾಪ್ ಸೀಕ್ರೆಟ್ ದಾಖಲೆಗಳು: ಸೋರಿಕೆಯಾದ ದಾಖಲೆಗಳು ಉಕ್ರೇನ್ ಯುದ್ಧದ ಬಗ್ಗೆ ಏನು ಹೇಳುತ್ತಿವೆ?
ಸಾಂದರ್ಭಿಕ ಚಿತ್ರ
Follow us on

ಈ ದಶಕದ ಅತಿದೊಡ್ಡ ಅಮೆರಿಕಾ(America) ಮಿಲಿಟರಿ ಸಂಬಂಧಿ ಮಾಹಿತಿ ಸೋರಿಕೆ ಪ್ರಕರಣದಲ್ಲಿ, ಉಕ್ರೇನಿಗೆ ಅಮೆರಿಕಾ ತೋರಿಸಿದ ಬೆಂಬಲದ ಮೇಲೂ ಅನುಮಾನ ಮೂಡಿಸುವಂತಹ ಬೆಳವಣಿಗೆಗಳು ತಲೆದೋರಿವೆ. ಅಮೆರಿಕಾದ ರಕ್ಷಣಾ ಇಲಾಖೆಯ ಅತ್ಯುನ್ನತ ಅಧಿಕಾರಿಗಳಿಗೆಂದು ಮೀಸಲಾದ ಒಂದಷ್ಟು ದಾಖಲೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರಿಗೂ ಲಭ್ಯವಾಗಿದ್ದವು. ಈ ದಾಖಲೆಗಳಲ್ಲಿ ಅಮೆರಿಕಾ ಆಂತರಿಕವಾಗಿ ನಡೆಸಿರುವ ಉಕ್ರೇನ್ ಯುದ್ಧದ ವಿಶ್ಲೇಷಣೆ, ಪಾಶ್ಚಾತ್ಯ ದೇಶಗಳೊಡನೆ ಉಕ್ರೇನಿನ ಸಂಬಂಧಗಳ ಕುರಿತಾದ ಗುಪ್ತಚರ ಮಾಹಿತಿಗಳೂ ಸೇರಿವೆ. ಈ ಮಾಹಿತಿ ಸೋರಿಕೆಯ ಕುರಿತು ಅಮೆರಿಕಾದ ರಕ್ಷಣಾ ಇಲಾಖೆ ಅಧಿಕೃತ ವಿಚಾರಣೆ ಆರಂಭಿಸಿದೆ. ನ್ಯೂಯಾರ್ಕ್‌ ಟೈಮ್ಸ್‌ ಹಾಗೂ ಇತರ ಮಾಧ್ಯಮಗಳ ಪ್ರಕಾರ, ಆರಂಭದಲ್ಲಿ ಸೋರಿಕೆಯಾದ ದಾಖಲೆಗಳನ್ನು ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ಬರೆಯಲಾಗಿದ್ದು, ಉಕ್ರೇನ್ ಹಾಗೂ ರಷ್ಯಾಗಳ ಸೈನಿಕರ ಸಾವಿನ ಸಂಖ್ಯೆಯನ್ನು ಹೊಂದಿದೆ. ವರದಿಗಳ ಪ್ರಕಾರ, ಇವುಗಳಲ್ಲಿ ಕನಿಷ್ಠ ಒಂದು ದಾಖಲೆಯನ್ನು ತಿದ್ದಲಾಗಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಿ ತೋರಿಸಲಾಗಿದೆ. ಇದು ದಾಖಲೆಗಳ ನಂಬಿಕಾರ್ಹತೆಯ ಮೇಲೆ ಪ್ರಶ್ನೆಗಳನ್ನು ಮೂಡಿಸಿದೆ.

ಮಾಹಿತಿಗಳ ಪ್ರಕಾರ, ಅಮೆರಿಕಾ ತನ್ನ ರಾಜತಾಂತ್ರಿಕ ಮಿತ್ರರಾಷ್ಟ್ರಗಳಾದ ಇಸ್ರೇಲ್, ದಕ್ಷಿಣ ಕೊರಿಯಾ ಹಾಗೂ ಉಕ್ರೇನ್ ಸೇರಿದಂತೆ ವಿವಿಧ ರಾಷ್ಟ್ರಗಳ ಕುರಿತು ಗುಪ್ತಚರ ಮಾಹಿತಿಯನ್ನು ಆಗಾಗ ಕಲೆ ಹಾಕುತ್ತದೆ. ಈ ದಾಖಲೆಗಳ ಪ್ರಕಾರ, ಅಮೆರಿಕಾ ರಷ್ಯಾ ಸರ್ಕಾರದ ಉನ್ನತ ಶ್ರೇಣಿಗಳಲ್ಲಿರುವವರನ್ನು ಬಳಸಿಕೊಂಡು, ಗುಪ್ತಚರ ಮಾಹಿತಿ ಕಲೆಹಾಕುತ್ತಿದೆ. ಇದು ತಾತ್ಕಾಲಿಕವಾಗಿಯಾದರೂ ಅಮೆರಿಕಾದ ಬೇಹುಗಾರಿಕೆಗೆ ಕೊಡಲಿಯೇಟು ನೀಡಲಿದೆ.

ಸೋರಿಕೆಯಾದ ದಾಖಲಾತಿಗಳು ಎಲ್ಲಿದ್ದವು?

ಕಳೆದ ಕೆಲ ವಾರಗಳ ಅವಧಿಯಲ್ಲಿ, ಸೋರಿಕೆಯಾದ ಮಾಹಿತಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು.

ಬೆಲ್ಲಿಂಗ್ ಕ್ಯಾಟ್ ಎಂಬ ಸ್ವತಂತ್ರ ತನಿಖಾ ಮಾಧ್ಯಮ ಸಂಸ್ಥೆ ಈ ಕುರಿತು ತನಿಖಾ ವರದಿ ಪ್ರಕಟಿಸಿ, ಈ ದಾಖಲೆಗಳು ಮೊದಲಿಗೆ ಕಂಪ್ಯೂಟರ್ ಗೇಮ್‌ಗಳ ಅಭಿಮಾನಿಗಳ ಮೆಸೇಜಿಂಗ್ ಅಪ್ಲಿಕೇಶನ್ ಸೇರಿದಂತೆ, ಹಲವು ಅಷ್ಟೊಂದು ಜನಪ್ರಿಯವಲ್ಲದ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು ಎಂದಿದೆ.

ಈ ದಾಖಲೆಗಳು ಒಂದು ಬಾರಿ ಗುರುತಿಸಲ್ಪಟ್ಟ ಬಳಿಕ, ಅವುಗಳನ್ನು ಅಮೆರಿಕಾದ ಬಲಪಂಥೀಯ ನೋಟಿಸ್ ಬೋರ್ಡ್ 4ಚಾನ್ ಹಾಗೂ ಟೆಲಿಗ್ರಾಮ್ ಆ್ಯಪ್‌ನಲ್ಲಿನ ರಷ್ಯಾ ಬೆಂಬಲಿತ ಗ್ರೂಪ್‌ಗಳಲ್ಲಿ ವಿಸ್ತೃತವಾಗಿ ಹಂಚಲಾಯಿತು. ಆ ಬಳಿಕ ಅವುಗಳು ಹೆಚ್ಚು ಜನರ ಗಮನ ಸೆಳೆದವು.

ಇದನ್ನೂ ಓದಿ: ಪ್ಯಾಲೆಸ್ತೀನಿ ಆರಾಧಕರ ಮೇಲೆ ದಾಳಿ ನಡೆದಿದೆ ಎಂದ ಅಲ್ ಜಜೀರ: ಇಸ್ರೇಲ್ – ಹಮಾಸ್ ಕದನದ ಕಣ್ಣಲ್ಲಿ ಅಲ್ ಅಕ್ಸಾ ಮಸೀದಿ

ನ್ಯೂಯಾರ್ಕ್‌ ಟೈಮ್ಸ್‌ ಪ್ರಕಾರ, ಆ ದಾಖಲಾತಿಗಳನ್ನು ಪಡೆಯುವ ಮೊದಲು ಅವುಗಳನ್ನು ಮಡಚಿ ಇಡಲಾಗಿತ್ತು. ಆದ್ದರಿಂದ ಅವುಗಳನ್ನು ಯಾವುದೋ ಫೈಲ್ ಅಥವಾ ಬ್ರೀಫ್ ಕೇಸ್ ಒಳಗಿಂದ ತೆಗೆದಿರಬಹುದು ಎನ್ನಲಾಗಿದೆ.

ಆದರೆ ಈ ದಾಖಲೆಗಳನ್ನು ಸೋರಿಕೆ ಮಾಡಿದ್ದು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅವುಗಳು ಹಂಚಿಕೆಯಾಗಿರುವ ರೀತಿಯನ್ನು ಗಮನಿಸಿದರೆ, ಅವುಗಳನ್ನು ಯಾರೋ ಅಮೆರಿಕನ್ ವ್ಯಕ್ತಿಯೇ ಸೋರಿಕೆ ಮಾಡಿದ್ದಾರೆ ಎಂದು ಅಂದಾಜಿಸಬಹುದು. ಈ ಮಾಹಿತಿಗಳ ಮೂಲದ ಕುರಿತು ಅಮೆರಿಕಾದ ನ್ಯಾಯ ಇಲಾಖೆ ಈಗಾಗಲೇ ಅಧಿಕೃತ ವಿಚಾರಣೆ ಆರಂಭಿಸಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಈ ದಾಖಲೆಗಳು ಇನ್ನೂ ಅಂತರ್ಜಾಲದಲ್ಲಿ ಹಂಚಿಕೆಯಾಗುತ್ತಿವೆಯೇ?

ಒಂದು ಬಾರಿ ಇಂತಹ ದಾಖಲೆಗಳನ್ನು, ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹಂಚಿಕೆ ಮಾಡಿದ ಬಳಿಕ ಅವುಗಳನ್ನು ಸಂಪೂರ್ಣವಾಗಿ ಅಲ್ಲಿಂದ ತೆಗೆಯುವುದು ಅಥವಾ ಬಚ್ಚಿಡುವುದು ಬಹುತೇಕ ಅಸಾಧ್ಯ. ಆ ದಾಖಲಾತಿಗಳನ್ನು ಅಂತರ್ಜಾಲದಿಂದ ತೆಗೆಯಲು ಒಂದು ಸಾಮಾಜಿಕ ಜಾಲತಾಣ ಸಿದ್ಧವಿಲ್ಲ. ಅದರ ಕೋಟ್ಯಾಧಿಪತಿ ಮಾಲಿಕ ಆ ದಾಖಲೆಗಳನ್ನು ಅಂತರ್ಜಾಲದಿಂದ ಕಿತ್ತು ಹಾಕುವ ಯೋಚನೆಯನ್ನೇ ವ್ಯಂಗ್ಯವಾಡಿದ್ದಾರೆ. ಆದರೆ ಅವುಗಳನ್ನು ಅಂತರ್ಜಾಲದಿಂದ ತೆಗೆದು ಹಾಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ.

ಅಮೆರಿಕಾದ ಮಾಹಿತಿ ಸೋರಿಕೆಯ ಕುರಿತು ರಷ್ಯಾದ ಪ್ರತಿಕ್ರಿಯೆ

ರಷ್ಯಾದ ಸರ್ಕಾರಿ ಮಾಧ್ಯಮ ಸ್ಪುಟ್ನಿಕ್ ಈ ಮಾಹಿತಿ ಸೋರಿಕೆ ಅಮೆರಿಕಾದ ಅಧ್ಯಕ್ಷ ಜೋ ಬಿಡನ್ ಅವರ ಉಕ್ರೇನ್ ನೀತಿಯಲ್ಲಿನ ವೈರುಧ್ಯವನ್ನು ಪ್ರದರ್ಶಿಸುತ್ತಿದೆ ಎಂದಿದೆ. ಅಮೆರಿಕಾದ ಸರ್ಕಾರಿ ವಕ್ತಾರರೊಬ್ಬರು, ಈ ದಾಖಲೆ ಉಕ್ರೇನ್ ಯುದ್ಧದಲ್ಲಿ ಅಮೆರಿಕಾ ಎಷ್ಟರಮಟ್ಟಿಗೆ ತನ್ನನ್ನು ತಾನು ಒಳಗೊಳಿಸಿದೆ ಎಂದು ತಿಳಿಯುತ್ತದೆ ಎಂದಿದ್ದಾರೆ. ಪೆಂಟಗನ್ ಅಧಿಕಾರಿಗಳೂ ಈ ದಾಖಲೆಗಳು ನಿಜ ಎಂದು ಒಪ್ಪಿಕೊಂಡರೂ, ಅವುಗಳನ್ನು ಅಲ್ಲಲ್ಲಿ ಯಾರೋ ತಮಗೆ ಬೇಕಾದಂತೆ ತಿದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ ಎಂದಿದ್ದಾರೆ.

ಮಾಹಿತಿ ಸೋರಿಕೆಯ ಮೂರು ಪ್ರಮುಖ ಬಹಿರಂಗಪಡಿಸುವಿಕೆಗಳು

1. ಅಪಾಯದಲ್ಲಿದೆ ಉಕ್ರೇನಿನ ವಾಯು ರಕ್ಷಣೆ

ಉಕ್ರೇನ್ ಪ್ರಸ್ತುತ ಸೋವಿಯತ್ ಅವಧಿಯ ಎಸ್-300 ಹಾಗೂ ಬಲ್ಕ್ ವಾಯು ರಕ್ಷಣಾ ವ್ಯವಸ್ಥೆಯನ್ನು ರಷ್ಯಾದ ವಾಯುಪಡೆಯ ವಿರುದ್ಧ ಸೆಣಸಲು ಬಳಸುತ್ತಿದೆ. ಆದರೆ ಈಗಾಗಲೇ ಬಯಲಾಗಿರುವ ಮಾಹಿತಿಗಳು, ಉಕ್ರೇನಿಗೆ ಒಂದು ವೇಳೆ ಆಯುಧಗಳು ಪೂರೈಕೆಯಾಗದಿದ್ದರೆ, ಎಪ್ರಿಲ್ ಮಧ್ಯಭಾಗದಲ್ಲಿ ಅಥವಾ ಮೇ ತಿಂಗಳಲ್ಲಿ ಆಯುಧಗಳು ಬರಿದಾಗುವ ಸಾಧ್ಯತೆಗಳಿವೆ ಎಂದಿವೆ. ಇದು ರಷ್ಯಾದ ಯುದ್ಧ ಪ್ರಯತ್ನಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಸಾಧ್ಯತೆಗಳಿವೆ. ರಷ್ಯಾ ಯುದ್ಧ ವಿಮಾನಗಳು ಹಾಗೂ ಬಾಂಬರ್‌ಗಳನ್ನು ಬಳಸಿ ಈಗಾಗಲೇ ದುರ್ಬಲವಾಗಿರುವ ಉಕ್ರೇನಿನ ವಾಯು ರಕ್ಷಣೆಯನ್ನು ಭೇದಿಸಬಹುದು. ಆ ಮೂಲಕ ರಷ್ಯಾ ಯುದ್ಧದ ಫಲಿತಾಂಶವನ್ನು ತನ್ನೆಡೆಗೆ ಬದಲಾಯಿಸಬಹುದು.

2. ಸ್ವಲ್ಪದರಲ್ಲೇ ಸೋಲು ತಪ್ಪಿಸಿಕೊಂಡ ಉಕ್ರೇನ್

ಸೋರಿಕೆಯಾದ ದಾಖಲೆಗಳ ಪ್ರಕಾರ, ರಷ್ಯಾದ ಸೇನಾಪಡೆಗಳು ಹಲವು ತಿಂಗಳುಗಳ ಕಾಲ ಭೀಕರ ಯುದ್ಧ ನಡೆದಿರುವ ಬಾಖ್‌ಮುಟ್ ಪ್ರದೇಶದಲ್ಲಿ ಫೆಬ್ರವರಿ ಕೊನೆಯ ವೇಳೆ ಉಕ್ರೇನ್ ಸೇನೆಯನ್ನು ಬಹುತೇಕ ಸುತ್ತುವರಿದಿದ್ದವು. ಆ ಸಮಯದಲ್ಲಿ ಉಕ್ರೇನ್ ಬಳಿ ಯುದ್ಧ ಮುಂದುವರಿಸಲು ಹೆಚ್ಚಿನ ಆಯುಧಗಳೂ ಇಲ್ಲದ್ದರಿಂದ, ಸೈನಿಕರ ಮನೋಸ್ಥೈರ್ಯವೂ ಕುಸಿತ ಕಂಡಿತ್ತು. ಆದರೂ ಉಕ್ರೇನ್ ಪಡೆಗಳು ತಮ್ಮ ಮುಖ್ಯ ಘಟಕಗಳನ್ನು ಬಳಸಿಕೊಂಡು, ಅಂತಿಮವಾಗಿ ರಷ್ಯನ್ ಸೇನೆಯನ್ನು ಹಿಂದೊತ್ತಲು ಯಶಸ್ವಿಯಾದವು. ಆದರೆ ಅದಕ್ಕಾಗಿ ಉಕ್ರೇನ್ ಬಹುದೊಡ್ಡ ಬೆಲೆ ತೆರಬೇಕಾಗಿ ಬಂದಿತ್ತು. ಉಕ್ರೇನ್ ಮುಂದಿನ ಕೆಲ ವಾರ, ತಿಂಗಳಲ್ಲಿ ಪ್ರತಿದಾಳಿ ನಡೆಸುವ ಅವಕಾಶ ಬಂದಾಗ ಬಳಸಿಕೊಳ್ಳಬೇಕೆಂದಿದ್ದ ಅತ್ಯುನ್ನತ ತರಬೇತಿ ಹೊಂದಿದ್ದ ಪಡೆಗಳನ್ನೂ ಇಲ್ಲಿ ಬಳಸಿಕೊಳ್ಳುವಂತಾಯಿತು.

3. ಟ್ಯಾಂಕ್‌ಗಳ ನಾಶಕ್ಕೆ ರಷ್ಯಾದ ಪ್ರೋತ್ಸಾಹ ಧನ

ರಷ್ಯಾ ತನ್ನ ಸೈನಿಕರ ಮನೋಸ್ಥೈರ್ಯವನ್ನು ಉತ್ತೇಜಿಸುವ ಸಲುವಾಗಿ, ಸೈನಿಕರಿಗೆ ಅಪಾರ ಪ್ರಮಾಣದ ಹಣವನ್ನು ಒದಗಿಸುತ್ತಿದೆ. ಸೋರಿಕೆಯಾದ ದಾಖಲೆಗಳ ಪ್ರಕಾರ, ರಷ್ಯಾ ತನ್ನ ಸೈನಿಕರಿಗೆ ಉಕ್ರೇನಿನ ಯುದ್ಧ ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರೆ ಅಥವಾ ನಾಶಪಡಿಸಿದರೆ ಪ್ರೋತ್ಸಾಹ ಧನ ನೀಡುತ್ತಿದೆ. ಅದರೊಡನೆ ರಷ್ಯಾ ಉಕ್ರೇನಿನ ಟ್ಯಾಂಕ್‌ಗಳು ನಾಶವಾಗುವ ವೀಡಿಯೋಗಳನ್ನು ಎಲ್ಲೆಡೆ ಹಂಚಿ, ಉಕ್ರೇನಿಯನ್ನರ ಮತ್ತು ಪಾಶ್ಚಾತ್ಯ ದೇಶಗಳ ಆತ್ಮವಿಶ್ವಾಸವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ರಷ್ಯಾ ತನ್ನ ಸೈನಿಕರಿಗೆ ನಾವು ಈ ಪರಿಸ್ಥಿತಿಯನ್ನು ಮೀರಲು ಸಮರ್ಥರಾಗಿದ್ದೇವೆ ಎಂದು ಸಂದೇಶ ರವಾನಿಸುತ್ತಿದೆ.

ಗಿರೀಶ್ ಲಿಂಗಣ್ಣ

ಲೇಖನ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 3:48 pm, Tue, 11 April 23