ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷ: ವಿಜಯೇಂದ್ರ ಎಂಬ ಮಿಶ್ರ ಫಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 11, 2023 | 4:53 PM

ಮಾಜಿ ಸಿ.ಎಂ.ಯಡಿಯೂರಪ್ಪ ನವರ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಯಶಸ್ವಿಯಾಗುತ್ತಾರೆಯೇ?ಯಡಿಯೂರಪ್ಪನವರಂತೆ ಪಕ್ಷವನ್ನು ಬಲಪಡಿಸುತ್ತಾರೆಯೇ? ಎಂಬುದು ತಕ್ಷಣದ ಕುತೂಹಲ.

ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷ: ವಿಜಯೇಂದ್ರ ಎಂಬ ಮಿಶ್ರ ಫಲ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ ಜಿಲ್ಲೆಯಲ್ಲಿ ಜೀತ ವಿಮುಕ್ತರು, ಹಕ್ಕಿ ಪಿಕ್ಕಿ ಜನಾಂಗದವರು ಮತ್ತು ಅಲೆಮಾರಿಗಳ ಹೋರಾಟದ ಮೂಲಕ ಸಾರ್ವಜನಿಕ ಬದುಕನ್ನು ಪ್ರವೇಶಿಸಿದ್ದ ಯಡಿಯೂರಪ್ಪ ಸಂಘ ಪರಿವಾರದ ಕಾರ್ಯಕರ್ತರ ವ್ಯಾಪಕ ಬೆಂಬಲದೊಂದಿಗೆ ಒಬ್ಬ ರಾಜ್ಯ ಮಟ್ಟದ ರೈತ ನಾಯಕನಾಗಿ ಬೆಳೆದಿದ್ದು ಒಂದು ರೋಚಕ ಇತಿಹಾಸ. ಆಗ, ಈಗಿನಂತೆ ಒಂದು ಸಣ್ಣ ಕೆಲಸದ ಬಗ್ಗೆಯೂ ಕ್ಷಣಾರ್ಧದಲ್ಲಿ ಜನರ ಮನಸ್ಸಿನಲ್ಲಿ ಒಂದು ಭ್ರಮಾಲೋಕವನ್ನು ಸೃಷ್ಟಿಸಿಕೊಳ್ಳಲು ನೆರವಾಗುವ ಸೋಶಿಯಲ್ ಮೀಡಿಯಾ ಅಥವಾ 24×7 ನ್ಯೂಸ್ ಚಾನೆಲ್​​​ಗಳು ಇರಲಿಲ್ಲ. ಪಕ್ಷವನ್ನು ಕಟ್ಟಲು ಸತತವಾಗಿ ಬೀದಿಗಿಳಿದು ಹೋರಾಡಲೇಬೇಕಿತ್ತು ಮತ್ತು ಕಿಲೋಮೀಟರ್ ಗಟ್ಟಲೆ ಕೆ.ಎಸ್ .ಆರ್ .ಟಿ .ಸಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಸುತ್ತಾಡಿ ಕಾರ್ಯಕರ್ತರನ್ನು ಮತ್ತು ಬಿಜೆಪಿ ನಾಯಕರನ್ನು ಹುರಿದುಂಬಿಸಬೇಕಿತ್ತು. ಅಂತಹ ಸವಾಲಿನ ಸನ್ನಿವೇಶದಲ್ಲಿಯೂ ಯಡಿಯೂರಪ್ಪ ಒಬ್ಬ ನಾಯಕರಾಗಿ ಬೆಳೆದರು. ವಿಧಾನಸಭೆಯಲ್ಲಿ ಸದಾ ಬಹಿಷ್ಕಾರ, ಸಭಾತ್ಯಾಗ ಮತ್ತು ಧರಣಿಗಳ ಜೊತೆಗೆ ಬೆಂಕಿಯ ಉಂಡೆಯಂತಹ ಮಾತುಗಳ ಮೂಲಕ ರಾಜ್ಯದ ಗಮನ ಸೆಳೆದ ಅವರ ಬಗ್ಗೆ “ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡಗುವುದು” ಎಂಬ ಮಾತು ಜನಜನಿತವಾಗಿತ್ತು. ಜೆಡಿಎಸ್​​​ ಭ್ರಷ್ಟತೆ ಹಿನ್ನೆಲೆಯಲ್ಲಿ ಹುತಾತ್ಮನ ಪಟ್ಟವನ್ನು ಪಡೆದುಕೊಂಡಿದ್ದ ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾದರು. ಆಗ ಮೋದಿ ಅಥವಾ ಹಿಂದುತ್ವದ ಅಲೆಯಿರಲಿಲ್ಲ. ಅದು, ಒಬ್ಬ ನಾಯಕನ ಹೆಸರಿನ ಮೇಲೆ ಪಕ್ಷವೊಂದು ಅಧಿಕಾರದ ದಡ ತಲುಪಿದ್ದ ಅಪರೂಪದ ರಾಜಕೀಯ ವಿದ್ಯಮಾನವಾಗಿತ್ತು.

ಈಗ ಅಂತಹ ಮ್ಯಾಜಿಕ್ ವಿಜಯೇಂದ್ರ ಅವರಿಂದ ಸಾಧ್ಯವೇ?ಈ ಪ್ರಶ್ನೆಗೆ ಯಾವುದೇ ರಾಜಕೀಯ ವಿಶ್ಲೇಷಕರಿಂದ ತಕ್ಷಣ ಸಿಗುವ ಉತ್ತರ: “ಅಂತಹ ಮ್ಯಾಜಿಕ್ ವಿಜಯೇಂದ್ರ ಅವರಿಂದ ಖಂಡಿತಾ ಸಾಧ್ಯವಿಲ್ಲ. ಅವರೊಬ್ಬ ಹೋರಾಟಗಾರರೇ ಅಲ್ಲ. ಅವರ ಇಮೇಜ್ ಸರಿಯಿಲ್ಲ. ಅವರ ಅಪ್ಪ ಸಿ.ಎಂ. ಆಗಿದ್ದಾಗ ಇವರೇ ಸೂಪರ್ ಸಿಮ್ ಆಡಿದ್ದರು. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ಬರಲು ಆಡಳಿತದಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪವೂ ಕಾರಣವಾಗಿತ್ತು”.

“ಹಾಗಾದರೆ ವರಿಷ್ಠರು ಅವರಿಗೇ ಏಕೆ ಅಧ್ಯಕ್ಷ ಪಟ್ಟವನ್ನು ಕಟ್ಟಿದ್ದಾರೆ?”ಎಂಬ ಕುತೂಹಲ ಸಹಜ. ಕೆಲವು ವಿಶ್ಲೇಷಕರ ಪ್ರಕಾರ, ಚದುರಿ ಹೋಗಿರುವ ಲಿಂಗಾಯತ ಮತಗಳನ್ನು ಬಿಜೆಪಿಯತ್ತ ವಾಪಾಸ್ ಸೆಳೆಯುವುದು ವರಿಷ್ಠರ ಮುಂದಿರುವ ಮೊದಲ ಆದ್ಯತೆ. ಸುಮಾರು ಎರಡು ದಶಕಗಳ ಹಿಂದೆ ತಮ್ಮ ನಾಯಕ ರಾಮಕೃಷ್ಣ ಹೆಗಡೆಯವರ ನಿರ್ಗಮನದ ನಂತರ ಲಿಂಗಾಯತರು ಬಿಜೆಪಿಯತ್ತ ವಲಸೆ ಹೋಗಿದ್ದರು .ಬಿ.ಎಸ್.ಯಡಿಯೂರಪ್ಪನವರಲ್ಲಿ ಹೊಸ ನಾಯಕನನ್ನು ಕಂಡುಕೊಂಡಿದ್ದರು. ಅವರು ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿದ್ದರು. ಆದರೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ಅವರು ಅನ್ಯ ಮನಸ್ಕರಾಗಿದ್ದರು.ಕಳೆದ ಚುನಾವಣೆಯಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್​​ನತ್ತ ಚದುರಿ ಹೋಗಿದ್ದವು. ಈಗ ಬಿಜೆಪಿ ನಾಯಕತ್ವವನ್ನು ಯಡಿಯೂರಪ್ಪ ಪುತ್ರನಿಗೆ ವಹಿಸುವ ಮೂಲಕ ಲಿಂಗಾಯತ ಮತದಾರರನ್ನು ವಾಪಾಸ್ ಸೆಳೆಯಬಹುದು ಎಂಬುದು ವರಿಷ್ಠರ ನಿರೀಕ್ಷೆ.

ಮತ್ತೊಂದು ಮುಖ್ಯವಾದ ಸಂಭವನೀಯ ಕಾರಣವೆಂದರೆ ಯುವ ನಾಯಕರೊಬ್ಬರಿಗೆ ಪಕ್ಷವನ್ನು ಬೆಳೆಸುವ ಹೊಣೆಯನ್ನು ವಹಿಸುವುದು ಈ ಕಾಲಮಾನದ ಅಗತ್ಯ ಎಂಬುದು. ಈ ಮೂಲಕ ಯುವ ಮತದಾರರನ್ನು ಆಕರ್ಷಿಸಬಹುದು ಎನ್ನುವುದು ವರಿಷ್ಠರ ನಿರೀಕ್ಷೆ. ಈಗಾಗಲೇ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ತಮಿಳುನಾಡಿನಲ್ಲಿ ಅಣ್ಣಾಮಲೈ, ಆಂಧ್ರ ಪ್ರದೇಶದಲ್ಲಿ ಕಿಶನ್ ರೆಡ್ಡಿ ಹೀಗೆ ಯುವನಾಯಕತ್ವಕ್ಕೆ ಮಣೆ ನೀಡಲಾಗಿದೆ. ಅದೇ ಮಾದರಿಯನ್ನು ಈಗ ಕರ್ನಾಟಕದಲ್ಲಿಯೂ ಮುಂದುವರಿಸಲಾಗಿದೆ. ತೇಜಸ್ವಿ ಸೂರ್ಯ ,ಪ್ರತಾಪ್ ಸಿಂಹ ಮುಂತಾದ ಯುವಕರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಮುಂದಿನ ಚುನಾವಣೆಯಲ್ಲಿಯೂ ಹತ್ತರಿಂದ ಹದಿನೈದು ಕ್ಷೇತ್ರಗಳಲ್ಲಿ ಹಳಬರ ಬದಲು ಯುವಕರಿಗೆ ಟಿಕೆಟ್ ನೀಡಲು ಚಿಂತನೆ ಆರಂಭವಾಗಿದೆಯಂತೆ. ಇದರ ಜೊತೆಗೆ ಎಲ್ಲಾ ಪಕ್ಷಗಳಲ್ಲಿಯೂ ಯುವಕರನ್ನು ಬೆಳೆಸಲಾಗುತ್ತಿದೆ. ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ದರ್ಶನ್ ಪುಟ್ಟಣ್ಣಯ್ಯ, ನಿಖಿಲ್ ಕುಮಾರಸ್ವಾಮಿ ಮುಂತಾದ ಯುವ ನಾಯಕರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಇದರಲ್ಲಿ ಬಿಜೆಪಿ ಹಿಂದೆ ಬೀಳಬಾರದು ಎಂಬುದು ವರಿಷ್ಠರ ಲೆಕ್ಕಾಚಾರವಿರಬಹುದು.

ಇನ್ನು ವಿಜಯೇಂದ್ರ ಅವರು ತಮ್ಮ ತಂದೆಯಂತೆ ಹುಟ್ಟು ಹೋರಾಟಗಾರರು ಅಲ್ಲದೆ ಇರಬಹುದು. ಆದರೆ ಅವರು ಒಬ್ಬ ಸಂಘಟನಾ ಚತುರರು. ರಾಜ್ಯದ ಎಲ್ಲಾ ಭಾಗಗಳಲ್ಲೂ ಬಹುತೇಕ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಅವರಿಗೆ ರಾಜ್ಯದಲ್ಲೆಡೆ ಜನಪ್ರಿಯತೆ ಇದೆ ಎನ್ನುವುದನ್ನು ವರಿಷ್ಠರು ಖಚಿತ ಪಡಿಸಿಕೊಂಡಿರುವ ಸಾಧ್ಯತೆಯಿದೆ.

ಇದನ್ನೂ ಓದಿ:ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ

ಇನ್ನು ವಿಜಯೇಂದ್ರ ಒಬ್ಬ ಕಳಂಕಿತ ಯುವರಾಜಕಾರಣಿ ಎಂಬ ಆರೋಪಗಳಿಗೂ ವರಿಷ್ಠರು ಉತ್ತರವನ್ನು ಕಂಡುಕೊಂಡಿರುವಂತಿದೆ. ಸ್ವತಃ ಜೈಲಿಗೆ ಹೋಗಿ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದ ನಂತರವೂ ಅವರಿಗೆ ಜನರು ಮನ್ನಣೆ ನೀಡಿ, ಬಿಜೆಪಿಗೆ ಎರಡನೇ ಬಾರಿ ಅತ್ಯಧಿಕ 105 ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದರು. ಆದ್ದರಿಂದ ಭ್ರಷ್ಟಾಚಾರದ ಬಗ್ಗೆ ಜನರು ತಲೆಯನ್ನೇ ಕೆಡಿಸಿಕೊಂಡಿಲ್ಲ ಎನ್ನುವುದು ವರಿಷ್ಠರಿಗೆ ಮಾನವರಿಕೆಯಾಗಿರಬಹುದು. ಜೊತೆಗೆ ವಿಜಯೇಂದ್ರ ತಮ್ಮ ನಡವಳಿಕೆಯನ್ನು ಮತ್ತೊಬ್ಬ ಯುವ ನಾಯಕ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಅವರನ್ನು ನೋಡಿ ತಿದ್ದಿಕೊಳ್ಳಲು ಅವಕಾಶವಿದೆ. ಫಡ್ನವಿಸ್ ಐದು ವರ್ಷ ಮುಖ್ಯಮಂತ್ರಿಯಾಗಿದ್ದರೂ ಯಾವುದೇ ಹಗರಣಗಳ ಆರೋಪಗಳನ್ನು ಎದುರಿಸಿರಲಿಲ್ಲ. ಇದರ ಜೊತೆಗೆ ದಕ್ಷಿಣ ರಾಜ್ಯಗಳಲ್ಲಿ ಉತ್ತರ ಭಾರತದಂತೆ ಸೈದ್ಧಾಂತಿಕ ರಾಜಕಾರಣದ ಅಗತ್ಯವೂ ಅಷ್ಟಾಗಿ ಇಲ್ಲ. ಉತ್ತರ ರಾಜ್ಯಗಳಂತೆ ದಕ್ಷಿಣ ಭಾರತ ಯಾವುದೇ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ ಮತ್ತು ಗೋವಾ ಮೂಲಕ ಬಂದ ಪೋರ್ಚುಗೀಸರ ದಾಳಿಯನ್ನು ಹೊರತು ಪಡಿಸಿ ಯಾವುದೇ ಪರಕೀಯರ ಅಕ್ರಮಣವನ್ನು ಎದುರಿಸಿಲ್ಲ. ಪ್ರಾಯಶಃ ಇದೇ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಹಿಜಾಬ್ ಮುಂತಾದ ವಿವಾದಗಳಿಂದ ಬಿಜೆಪಿಗೆ ಲಾಭವಾಗಲಿಲ್ಲ. ಆದ್ದರಿಂದ ಇಲ್ಲಿ ಸೈದ್ಧಾಂತಿಕ ರಾಜಕಾರಣಿಗಳಿಗಿಂತ ವಿಜಯೇಂದ್ರ ಅವರಂತಹ ಕಾಲಕ್ಕೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಪಟ್ಟುಗಳನ್ನ್ನು ಮತ್ತು ಪ್ರತಿ ಪಟ್ಟುಗಳನ್ನು ಹಾಕುವ ವಾಸ್ತವಿಕ ರಾಜಕಾರಣಿಗಳೇ ಮೇಲು ಎಂಬ ಲೆಕ್ಕಾಚಾರವನ್ನು ವರಿಷ್ಠರು ಹಾಕಿರಬಹುದು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ವಿಜಯೇಂದ್ರ ಅವರ ಮುಂದೆ ಹಲವು ಸವಾಲುಗಳು ಇರುವುದಂತೂ ನಿಜ. ಅವರ ಪಕ್ಷದಲ್ಲಿನ ಹಿರಿಯರ ವಿಶ್ವಾಸವನ್ನು ಗಳಿಸಿಕೊಳ್ಳಬೇಕಿದೆ. ಲಿಂಗಾಯತರಂತೆ ಬಿಜೆಪಿಯಿಂದ ಚದುರಿ ಹೋಗಿರುವ ಎಡಗೈ ದಲಿತರು, ವಾಲ್ಮೀಕಿ ಅವರಲ್ಲದೆ ಬೊಮ್ಮಾಯಿ ಸರ್ಕಾರದ ಒಳ ಮೀಸಲಾತಿ ಪರಿಣಾಮವಾಗಿ ಮುನಿಸಿಕೊಂಡಿರುವ ಬಂಜಾರ ಮತ್ತಿತರ ಬಿಜೆಪಿಯ ಸಾಂಪ್ರದಾಯಕ ಮತಗಳನ್ನು ವಾಪಾಸ್ ಸೆಳೆಯಬೇಕಿದೆ.ರಾಜ್ಯಾದ್ಯಂತ ಕಾರ್ಯಕರ್ತರನ್ನು ಹುರಿದುಂಬಿಸಲು ಅಣ್ಣಾಮಲೈ ಮಾದರಿಯಲ್ಲಿ ಯಾವುದಾದರೂ ಜ್ವಲಂತ ಸಮಸ್ಯೆ ಕುರಿತು ಪಾದಯಾತ್ರೆಯನ್ನು ನಡೆಸಬೇಕಾದೀತು.ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಎಂಬ ಈ ಹೊತ್ತಿನ ಬಲಾಢ್ಯ ನಾಯಕನನ್ನು ಅನಾಮತ್ತಾಗಿ ಎದುರಿಸಲು ಜೆಡಿಎಸ್ ನಾಯಕ ಎಚ್ .ಡಿ .ಕುಮಾರಸ್ವಾಮಿಯವರ ಜೊತೆ ವಿಜಯೇಂದ್ರ ಯಾವ ರೀತಿ ಜಂಟಿ ಹೋರಾಟವನ್ನು ರೂಪಿಸುತ್ತಾರೆ ಎನ್ನುವುದನ್ನು ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ .ಒಟ್ಟಿನಲ್ಲಿ ಬಿಜೆಪಿಗೆ ವಿಜಯೇಂದ್ರ ಅವರ ನೇಮಕದಿಂದ ರಾಜ್ಯ ಬಿಜೆಪಿಗೆ ಮಿಶ್ರ ಫಲ ಕಾದಿರುವಂತಿದೆ.

ಲೇಖಕರು: ರುದ್ರಪ್ಪ ಸಿ

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ