BY Vijayendra: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ

Karnataka BJP President: ಬಿವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ.

BY Vijayendra: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ
ಬಿವೈ ವಿಜಯೇಂದ್ರ
Follow us
| Updated By: ಗಣಪತಿ ಶರ್ಮ

Updated on:Nov 10, 2023 | 8:44 PM

ನವದೆಹಲಿ, ನವೆಂಬರ್ 10: ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ (BJP Karnataka President) ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (JP Nadda) ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ರಾಜ್ಯಾಧ್ಯಕ್ಷ ಆಯ್ಕೆ ಚರ್ಚೆಗೆ ತೆರೆ ಬಿದ್ದಂತಾಗಿದೆ. ವಿಜಯೇಂದ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮುಂಚುಣಿಯಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಇದೀಗ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪಗೆ ಮಣೆ ಹಾಕಿದಂತಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ದೂರವಾಗಿರುವ ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳುವ ಪ್ರಯತ್ನದ ಭಾಗವಾಗಿ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಸದ್ಯ ಜೆಡಿಎಸ್ ಎನ್​​ಡಿಎ ಭಾಗವಾಗಿರುವ ಕಾರಣ ಒಕ್ಕಲಿಗ ಸಮುದಾಯ ಹೊರತುಪಡಿಸಿದ ನಾಯಕನಿಗೆ ಮಣೆ ಹಾಕಲಾಗಿದೆ. ಜತೆಗೆ, ಯುವ ನಾಯಕತ್ವದ ಬಗ್ಗೆ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬಿವೈ ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷ; ಯಡಿಯೂರಪ್ಪರಂತೆ ಮಗನ ಮುಂದೆಯೂ ಇದೆ ಸವಾಲುಗಳ ಸರಮಾಲೆ

ಬಿಜೆಪಿ ಯುವ ಮೋರ್ಚಾದಲ್ಲಿ ಇರುವ ವಿಜಯೇಂದ್ರಗೆ ಇರುವ ನೆಟ್​​ವರ್ಕ್ ಬಳಸಿಕೊಳ್ಳುವುದರ ಜತೆಗೆ, ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಭಾಗವಾಗಿಯೂ ಈ ನಿರ್ಧಾರ ಮಹತ್ವದ್ದಾಗಿದೆ. ವಿಜಯೇಂದ್ರ ಅಧ್ಯಕ್ಷ ಆದರೆ ಯಡಿಯೂರಪ್ಪ ಅವರು ತಾನೇ ಅಧ್ಯಕ್ಷ ಎಂಬಂತೆ ಕೆಲಸ ಮಾಡುತ್ತಾರೆ ಎಂಬ ಲೆಕ್ಕಾಚಾರವನ್ನು ಕೂಡ ಬಿಜೆಪಿ ಹೈಕಮಾಂಡ್ ಹಾಕಿರಬಹುದು ಎನ್ನಲಾಗುತ್ತಿದೆ.

ರೇಣುಕಾಚಾರ್ಯ ಸ್ವಾಗತ

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿರುವುದನ್ನು ಬಿಜೆಪಿ ನಾಯಕ ರೇಣುಕಾಚಾರ್ಯ ಸ್ವಾಗತಿಸಿದ್ದಾರೆ. ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ದೀಪಾವಳಿ ಹಬ್ಬದ ದಿನವೇ ಹೈಕಮಾಂಡ್​ ದೊಡ್ಡ ಗಿಫ್ಟ್​ ನೀಡಿದೆ. ವಿಜಯೇಂದ್ರ ಸಂಘಟನಾ ಚತುರ. ರಾಷ್ಟ್ರೀಯ ನಾಯಕರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ವಿಜಯೇಂದ್ರಗೆ ಶುಭಾಶಯ ಕೋರುತ್ತೇನೆ. ಎಲ್ಲರೂ ಜೊತೆಗೂಡಿ ಕೆಲಸ ಮಾಡಿಕೊಂಡು ನಾವು ಹೋಗುತ್ತೇವೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Fri, 10 November 23