ಬಿವೈ ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷ; ಯಡಿಯೂರಪ್ಪರಂತೆ ಮಗನ ಮುಂದೆಯೂ ಇದೆ ಸವಾಲುಗಳ ಸರಮಾಲೆ
ಬಿಎಸ್ ವಿಜಯೇಂದ್ರ ಅವರ ಅಧ್ಯಕ್ಷ ಗಾದಿಯ ಪಯಣ ಅಪ್ಪ ಬಿಎಸ್ ಯಡಿಯೂರಪ್ಪನವರು ತುಳಿದ ಹಾದಿಯಷ್ಟು ಕಠಿಣವಾಗಿಲ್ಲದೇ ಇರಬಹುದು. ಆಗ ಇದ್ದಷ್ಟು ಕಲ್ಲು-ಮುಳ್ಳುಗಳು ಇಲ್ಲದೇ ಇರಬಹುದು. ಆದರೆ ಸವಾಲುಗಳಂತೂ ಖಂಡಿತಾ ಕಡಿಮೆಯಲ್ಲ. ಹಲವು ಸವಾಲುಗಳು ಈಗಾಗಲೇ ಅವರ ಮುಂದಿದೆ. ಅದನ್ನವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.
ಕೊನೆಗೂ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕನಸು ನನಸಾಗಿದೆ. ಪಕ್ಷದಲ್ಲಿ ಮಗ ಬಿವೈ ವಿಜಯೇಂದ್ರ (BY Vijayendra) ಅವರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಹುದ್ದೆ ದೊರೆಯುವಂತೆ ಮಾಡಬೇಕೆಂಬ ಅವರ ಆಶಯ ಈಡೇರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ (BJP Karnataka President) ಬಿವೈ ವಿಜಯೇಂದ್ರ ಅವರನ್ನು ಪಕ್ಷದ ಹೈಕಮಾಂಡ್ ಶುಕ್ರವಾರ ನೇಮಕ ಮಾಡಿದೆ. ಆದರೆ, ಅಧ್ಯಕ್ಷ ಪಟ್ಟ ದೊರೆತ ಮಾತ್ರಕ್ಕೆ ವಿಜಯೇಂದ್ರ ಅವರ ಮುಂದಿನ ಹಾದಿ ಸುಗಮವಾದದ್ದೇನಲ್ಲ. ಹಿಂದೆ ಬಿಎಸ್ ಯಡಿಯೂರಪ್ಪ ಅವರು ಎದುರಿಸಿದ್ದ ಬಹುತೇಕ ಎಲ್ಲ ಸವಾಲುಗಳು ಈಗ ಅವರ ಮಗ ವಿಜಯೇಂದ್ರ ಎದುರಿಸಬೇಕಾದಂಥ ಪರಿಸ್ಥಿತಿ ರಾಜ್ಯ ರಾಜಕೀಯದಲ್ಲಿದೆ.
ರಾಜ್ಯದಲ್ಲಿ ತಳಮಟ್ಟದಿಂದ ಅಧಿಕಾರದ ಗದ್ದುಗೆ ವರೆಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆ ಬಿಎಸ್ ಯಡಿಯೂರಪ್ಪ ಅವರದ್ದು. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರೊಂದಿಗೆ ಸೈಕಲ್ನಲ್ಲಿ ಮನೆ ಮನೆ ತೆರಳಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಹಾಗೂ ಆ ನಂತರ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಪರಿಯ ಬಗ್ಗೆ ಇತರ ಪಕ್ಷಗಳ ನಾಯಕರೂ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಆದರೂ, ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರಿಂದ ಸಾಧ್ಯವಾಗಿರಲಿಲ್ಲ. 2006 ರಲ್ಲಿ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಮೊದಲ ಬಾರಿ ಅಧಿಕಾರದ ರುಚಿ ಕಂಡಿದ್ದರು. ಆ ನಂತರ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆಯದ್ದರಿಂದ ಅವರಿಗಿಟ್ಟ ‘ವಚನ ಭ್ರಷ್ಟ’ ಎಂಬ ಹಣೆಪಟ್ಟಿಯನ್ನೇ ಮುಂದಿಟ್ಟುಕೊಂಡು ತಮ್ಮ ಪರ ಅನುಕಂಪದ ಅಲೆ ಎಬ್ಬಿಸುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ, ಬಳಿಕದ ಚುನಾವಣೆಯಲ್ಲಿ ಪಕ್ಷವು 108 ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮುಂದಿನ ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಮುಖ್ಯಮಂತ್ರಿ ಹುದ್ದೆ ತ್ಯಜಿಸುವಂತಾದದ್ದು, ಪಕ್ಷದಿಂದ ಹೊರಹೋಗಿ ಬೇರೆ ಪಕ್ಷ ಕಟ್ಟುವಂತಾದದ್ದು, ಮರಳಿ ಪಕ್ಷಕ್ಕೆ ಬಂದು ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿದ್ದು ಈಗ ಇತಿಹಾಸ. ಒಟ್ಟಿನಲ್ಲಿ ಬಿಜೆಪಿ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಬಿಜೆಪಿ ಎಂಬ ಮಟ್ಟಕ್ಕೆ ವರ್ಚಸ್ಸು ಉಳಿಸಿಕೊಂಡವರು ಅವರು. ಆದಾಗ್ಯೂ, ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂದರೂ ಛಲಬಿಡದೆ, ಪಕ್ಷದಲ್ಲಿ ತಮಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುವ ಛಾತಿ ಯಡಿಯೂರಪ್ಪನವರದ್ದು.
ಅಧ್ಯಕ್ಷ ಗಾದಿಯೊಂದಿಗೇ ಸವಾಲುಗಳ ಸರಮಾಲೆ
ವಿಜಯೇಂದ್ರ ಅವರ ಅಧ್ಯಕ್ಷ ಗಾದಿಯ ಪಯಣ ಅಪ್ಪ ತುಳಿದ ಹಾದಿಯಷ್ಟು ಕಠಿಣವಾಗಿಲ್ಲದೇ ಇರಬಹುದು. ಆಗ ಇದ್ದಷ್ಟು ಕಲ್ಲು-ಮುಳ್ಳುಗಳು ಇಲ್ಲದೇ ಇರಬಹುದು. ಆದರೆ ಸವಾಲುಗಳಂತೂ ಖಂಡಿತಾ ಕಡಿಮೆಯಲ್ಲ.
ಲೋಕಸಭೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಉಳಿಸಿಕೊಳ್ಳಬಹುದು? ಚದುರಿ ಹೋಗಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕರಲ್ಲಿ ಐಕ್ಯತೆ ಮೂಡಿಸುವುದು ಹೇಗೆ? ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಹಳೆ ಮೈಸೂರು ಭಾಗದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವ ಸವಾಲುಗಳು ಅಧ್ಯಕ್ಷ ಗಾದಿಯ ಜತೆಜತೆಗೇ ವಿಜಯೇಂದ್ರ ಅವರಿಗೆ ಎದುರಾಗುತ್ತವೆ. ಇದೆಲ್ಲದರ ಜತೆ ಕಳೆದ ಸಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಫಲಿತಾಂಶದಲ್ಲಿ 66 ಕ್ಕೆ ಕುಸಿದ ಬಿಜೆಪಿಗೆ ಪುನಶ್ಚೇತನ ನೀಡುವುದು ಹೇಗೆ? ಕಾರ್ಯಕರ್ತರಲ್ಲಿ ಶಕ್ತಿ ತುಂಬಿಸಿ ಅವರನ್ನು ಮತ್ತೆ ಕ್ರಿಯಾಶೀರನ್ನಾಗಿಸುವುದು ಹೇಗೆ ಎಂಬ ಪ್ರಶ್ನೆಗಳೂ ಅವರ ಮುಂದಿವೆ.
ಬಿಜೆಪಿ ಹಿರಿಯ ನಾಯಕರ ಮನಗೆಲ್ಲುವ ಸವಾಲು
ಸ್ವಯಂಪ್ರೇರಿತರಾಗಿ ಚುನಾವಣಾ ಹಿಂದೆ ಸರಿಯುತ್ತಿದ್ದೇವೆ ಎಂದು ಹೇಳಿದರೂ ಒಳಗಿಂದೊಳಗೆ ಅಸಮಾಧಾನಗೊಂಡಿರುವ ಕೆಲವು ನಾಯಕರು ಬಿಜೆಪಿಯಲ್ಲಿರುವುದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಪ್ರಬಲವಾಗಿರುವುದರಿಂದ ಅನಿವಾರ್ಯ ಕಾರಣಗಳಿಂದ ಮೌನವಾಗಿದ್ದು, ಒಳಗಿಂದೊಳಗೆ ಅಸಮಾಧಾನದ ಹೊಗೆಯಾಡುತ್ತಿರುವ ಕೆಲವು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ವಿಜಯೇಂದ್ರ ಮುಂದಿದೆ.
ತಣಿಸಬೇಕಿದೆ ಕಾರ್ಯಕರ್ತರ ಮುನಿಸು
ಲೋಕಸಭೆ ಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕಾರ್ಯಕರ್ತರ ಮಟ್ಟದಲ್ಲಿ ಒಂದಷ್ಟು ಕಡೆ ವಿರೋಧ ವ್ಯಕ್ತವಾಗಿದೆ. ಇವುಗಳನ್ನು ಸರಿಪಡಿಸಿಕೊಂಡು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ವಿಜಯೇಂದ್ರಗೆ ಇದೆ. ಲೋಕಸಭೆ ಚುನಾವಣೆಗೆ ಇನ್ನು ಬಹಳ ದೂರವೇನಿಲ್ಲ. ಸೀಮಿತ ಅವಧಿಯಲ್ಲಿ ಸಿಕ್ಕ ಜವಾಬ್ದಾರಿಯನ್ನು ವಿಜಯೇಂದ್ರ ಹೇಗೆ ನಿಭಾಯಿಸುತ್ತಾರೆ? ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಯಾವ ರೀತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸುಮಲತಾ ಮನೊವಲಿಕೆ, ಯತ್ನಾಳ್ ಅಸಮಾಧಾನ
ಜೆಡಿಎಸ್ ಜತೆ ಮೈತ್ರಿಯ ಕಾರಣ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಾಗಿ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಈಗಾಗಲೇ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಅವರಿಗೆ ಕ್ಷೇತ್ರವಿಲ್ಲದಂತಾಗುತ್ತದೆ. ಇದನ್ನು ವಿಜಯೇಂದ್ರ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ
ಮತ್ತೊಂದೆಡೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಿಂದಲೂ ಯಡಿಯೂರಪ್ಪ ಅವರ ಕುಟುಂದ ವಿರುದ್ಧ ಆರೋಪಗಳನ್ನು, ಟೀಕೆಗಳನ್ನು ಮಾಡುತ್ತಾ ಬಂದವರು. ಅವರು ವಿಜಯೇಂದ್ರಗೆ ಹೇಗೆ ಸಹಕಾರ ನೀಡಲಿದ್ದಾರೆ? ಅಥವಾ ಅವರ ಸವಾಲನ್ನು ವಿಜಯೇಂದ್ರ ಹೇಗೆ ಮೆಟ್ಟಿನಿಲ್ಲಲಿದ್ದಾರೆ ಎಂಬುದು ಕೌತುಕದ ವಿಷಯವಾಗಿದೆ.
ಒಟ್ಟಿನಲ್ಲಿ, ಯಡಿಯೂರಪ್ಪ ಅವರಂತೆಯೇ ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲೇ ಅವರ ಮಗ ವಿಜಯೇಂದ್ರಗೆ ಉನ್ನತ ಜವಾಬ್ದಾರಿ ಹೆಗಲೇರಿದೆ. ಇದನ್ನವರು ತಂದೆಯಂತೆಯೇ ನಿಭಾಯಿಸಿ ಮತ್ತೆ ಪಕ್ಷವನ್ನು ಅಧಿಕಾರದ ಗದ್ದುಗೆ ವರೆಗೆ ಕೊಂಡಯ್ಯಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Fri, 10 November 23