
ಕನ್ನಡ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವುದಾಗಿ ತಿಳಿಸಿದ್ದು, ಅವರ ಮನಗೆದ್ದ ಹುಡುಗ ವರುಣ್ ಮುನಿರಾಜು ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ವರುಣ್ ಮುನಿರಾಜು ಅವರ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದ ಕುರಿತು ಹೇಳುವುದಾದರೆ, ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅದಲ್ಲದೆ, ತಮ್ಮ ಕಾಲೇಜು ದಿನಗಳಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಒಬ್ಬ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಇವರಿಬ್ಬರ ನಡುವಿನ ಪ್ರೇಮ ಪಯಣ ಕಾಲೇಜು ದಿನಗಳಲ್ಲೇ ಚಿಗುರೊಡೆದಿತ್ತು. ಆ ಸಂದರ್ಭದಲ್ಲಿ ಜೀವನದಲ್ಲಿ ಇಬ್ಬರೂ ಉದ್ಯೋಗ ಹಾಗೂ ಭವಿಷ್ಯದ ದಾರಿಯ ಹುಡುಕಾಟದಲ್ಲಿದ್ದಾಗ ಪರಸ್ಪರ ಬೆಂಬಲವಾಗಿ ನಿಂತಿದ್ದರು. ಸ್ಪಂದನಾ ಅವರಿಗೆ ನಟನಾ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಕನಸಿದ್ದಾಗ, ಅವರ ಪ್ರತಿಯೊಂದು ಆಡಿಷನ್‌ಗಳಿಗೂ ಜೊತೆಯಾಗಿ ಹೋಗಿ ಪ್ರೋತ್ಸಾಹ ನೀಡಿದ್ದು ವರುಣ್.
ಸಾಕಷ್ಟು ವರ್ಷಗಳ ಸತತ ಪ್ರೀತಿ, ಕಷ್ಟ-ಸುಖಗಳನ್ನು ಹಂಚಿಕೊಂಡ ನಂತರ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಪ್ಯಾರೀಸ್‌ನ ಪ್ರಸಿದ್ಧ ಐಫೆಲ್ ಟವರ್ ಮುಂದೆ ವರುಣ್ ಅವರು ಸ್ಪಂದನಾಗೆ ಅತ್ಯಂತ ರೋಮ್ಯಾಂಟಿಕ್ ಆಗಿ ವಿವಾಹದ ಪ್ರಪೋಸಲ್ ಮಾಡಿದ್ದಾರೆ.
ತಮ್ಮ ಭಾವಿ ಪತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಪರಿಚಯಿಸಿರುವ ಸ್ಪಂದನಾ, ‘ನನ್ನ ಜೀವನದಲ್ಲಿ ನಾನು ತಗೆದುಕೊಂಡ ಅತ್ಯಂತ ಸುಲಭವಾದ ಹಾಗೂ ಮಧುರವಾದ ನಿರ್ಧಾರ ಇದು’ ಎಂದು ಬರೆದುಕೊಂಡಿದ್ದಾರೆ. ಈ ಜೋಡಿಯ ಶುಭ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಚಿತ್ರರಂಗದ ತಾರೆಯರು ಹಾರೈಸುತ್ತಿದ್ದಾರೆ.
Published On - 6:56 am, Thu, 8 October 26