
ಬೆಂಗಳೂರಿನಲ್ಲಿ ಬುಧವಾರದಂದು ಸಂಜೆಯವರೆಗೂ ಮಳೆಯ ಮುನ್ಸೂಚನೆ ಇರಲಿಲ್ಲ. ಆದರೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ನಗರದ ಹಲವೆಡೆ ಸುರಿದ ಮಳೆ ರಸ್ತೆಗಳು ಜಲಾವೃತಗೊಂಡಿವೆ. ಬೃಹತ್ ಮರಗಳು ಧರೆಗುರುಳಿವೆ. ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿದೆ.

ರಾತ್ರಿ ಸುರಿದ ಮಳೆಯಿಂದಾಗಿ ರಾಜಾಜಿನಗರದ 4ನೇ ಬ್ಲಾಕ್ನ ಎರಡು ಮನೆಗಳ ಮೇಲೆ ಬೃಹತ್ ಮರ ಧರೆಗುರುಳಿದೆ. ಚಂದ್ರಮ್ಮ ಮತ್ತು ಪೀಟರ್ ಎಂಬುವರ ಮನೆಗಳ ಮೇಲೆ ಬೃಹತ್ ಮರ ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇನ್ನು ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳಿಗೆ ದಿಗ್ಬಂಧನ ಎದುರಾಗಿದೆ. ಮನೆಯಿಂದ ಹೊರಬರಲಾಗದೆ ಪರದಾಟ ನಡೆಸಿದ್ದಾರೆ. ಮರ ಬಿದ್ದು 5 ಕಾರು, ಟಾಟಾ ಏಸ್ ವಾಹನ, 3 ರಿಂದ 4 ಬೈಕ್ಗಳು ಜಖಂಗೊಂಡಿವೆ.

ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಮನೆಗಳ ಮೇಲೆ ಮರ ಬಿದ್ದಿದೆ. ಮರ ಬಿದ್ದಿದ್ದರಿಂದ ಮನೆಯಿಂದ ಹೊರಗೆ ಬರಲು ಆಗಲಿಲ್ಲ. ಬಿಬಿಎಂಪಿ, ಹೊಯ್ಸಳ, ಬೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದ್ದೆವು. ಯಾರೂ ಕೂಡ ಬರಲಿಲ್ಲ ಎಂದು ಓರ್ವ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಮರ ಉರುಳಿದ್ದರಿಂದ 5ನೇ ಮುಖ್ಯ ರಸ್ತೆ ಚಾಮರಾಜಪೇಟೆಯಿಂದ 4ನೇ ಮುಖ್ಯ ರಸ್ತೆಯ ಕಡೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಹಾಗಾಗಿ ನಿಧಾಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
Published On - 9:10 am, Thu, 11 September 25