
ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಂಗಳೂರು ನಗರದ ಗಲ್ಲಿ ಗಲ್ಲಿಗಳಲ್ಲೂ ವಿಘ್ನನಿವಾರಕನ ಸ್ಮರಣೆ ಆರಂಭವಾಗಿದ್ದು, ವಿವಿಧ ತರಹದ ಅತ್ಯಾಕರ್ಷಕ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿವೆ. ಬಿಬಿಎಂಪಿ ಕೂಡ ಗಣೇಶ ಮೂರ್ತಿ ವಿಸರ್ಜನೆಗೆ ಸಕಲ ತಯಾರಿ ಮಾಡಿಕೊಂಡಿದೆ.

ವರ್ಷಕ್ಕೆ ಒಮ್ಮೆ ಬರುವ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ ಭಾವದೊಂದಿಗೆ ಆಚರಣೆ ಮಾಡಲು ಭಕ್ತರು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯಾಕರ್ಷಕ ಗಣಪನ ಮೂರ್ತಿಗಳು ಮಾರುಕಟ್ಟೆಯಲ್ಲಿದ್ದು, ಗಮನ ಸೆಳೆಯುತ್ತಿವೆ. ಗ್ರಾಹಕರು ಪರಿಸರ ಸ್ನೇಹಿ ಮೂರ್ತಿಗಳತ್ತ ಈ ಬಾರಿ ಒಲವು ತೋರಿಸಿದ್ದು, ಸರ್ಕಾರದ ನಿಷೇಧದ ಹೊರತಾಗಿಯೂ ಅಲ್ಲಲ್ಲಿ ಪಿಒಪಿ ಮೂರ್ತಿಗಳು ಕೂಡ ಕಾಣಸಿಗುತ್ತಿವೆ.

ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲು ಸಿದ್ಧತೆ ಜೋರಾಗಿದೆ. ಬೆಂಗಳೂರು ನಗರದಾದ್ಯಂತ ಲಕ್ಷಾಂತರ ಭಕ್ತರು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ತಯಾರಾಗುತ್ತಿರುವ ನಡುವೆ, ಬಿಬಿಎಂಪಿ ವಿಶೇಷ ಮಾರ್ಗಸೂಚಿ ಪ್ರಕಟಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ನಗರದಲ್ಲಿ ಹಲಸೂರು, ಯಡಿಯೂರು, ಸ್ಯಾಂಕಿ ಕೆರೆ ಸೇರಿ ಒಟ್ಟು 41 ಕೆರೆ ಅಂಗಳಗಳಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ಕಲ್ಯಾಣಿಗಳು ನಿರ್ಮಿಸಲಾಗಿದ್ದು, ಸಾರ್ವಜನಿಕರು ಗಣೇಶ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ, ನಗರದ ವಿವಿಧ ಭಾಗಗಳಲ್ಲಿ 489 ತಾತ್ಕಾಲಿಕ ಸಂಚಾರಿ ಟ್ಯಾಂಕರ್ಗಳನ್ನು ನಿಲ್ಲಿಸಲಾಗಿದೆ. ಬಿಬಿಎಂಪಿ ಈ ಬಾರಿ ವಿಶೇಷವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಮಾಡಲು ನಾಗರಿಕರಿಗೆ ಮನವಿ ಮಾಡಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಬಳಸದಂತೆ ಮನವಿ ಮಾಡಿಕೊಂಡಿದೆ. ಕಲ್ಯಾಣಿಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಲಾಗಿದೆ.

ಒಟ್ಟಾರೆಯಾಗಿ ಬೆಂಗಳೂರು ನಗರದಾದ್ಯಂತ ಬಿಬಿಎಂಪಿ ಗಣೇಶ ಚತುರ್ಥಿ ಹಬ್ಬದ ಯಶಸ್ವಿ ಮತ್ತು ಪರಿಸರ ಸ್ನೇಹಿ ಆಚರಣೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು, ಭಕ್ತರು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
Published On - 7:49 am, Wed, 27 August 25