
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ (Mohammad Rizwan) ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರ ಮಾಡಿದ ಎಡವಟ್ಟು.

ಡ್ಯುನೆಡಿನ್ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಾಕ್ ತಂಡದ ಪರ ಮೊಹಮ್ಮದ್ ರಿಝ್ವಾನ್ ಇನಿಂಗ್ಸ್ ಆರಂಭಿಸಿದ್ದರು.

ಅದರಂತೆ ಪಾಕ್ ಇನಿಂಗ್ಸ್ನ 6ನೇ ಓವರ್ನಲ್ಲಿ ರನ್ ಓಡುವ ಯತ್ನದಲ್ಲಿದ್ದ ರಿಝ್ವಾನ್ ಅವರ ಕೈಯಿಂದ ಬ್ಯಾಟ್ ಕೆಳಗೆ ಬಿದ್ದಿದೆ. ಆದಾಗ್ಯೂ, ಅವರು ತಮ್ಮ ಕೈಯನ್ನು ಕ್ರೀಸ್ನಲ್ಲಿಟ್ಟು ಎರಡನೇ ರನ್ ಓಡಿದ್ದಾರೆ.

ಆದರೆ ಮೊಹಮ್ಮದ್ ರಿಝ್ವಾನ್ ಅವರ ಗ್ಲೌಸ್‌ಗಳು ನಾನ್‌ಸ್ಟ್ರೈಕರ್‌ನ ತುದಿಯಲ್ಲಿನ ಕ್ರೀಸ್‌ಗೆ ತಾಗಿರಲಿಲ್ಲ. ಹೀಗಾಗಿ ರನ್ ಕಡಿತ ಮಾಡಲಾಯಿತು. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇಲ್ಲಿ ಬ್ಯಾಟ್ ಇಲ್ಲದಿದ್ದರೂ ಮೊಹಮ್ಮದ್ ರಿಝ್ವಾನ್ ಕೈಯಿಂದ ಕ್ರೀಸ್ ಮುಟ್ಟಲು ಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ. ಅಂದರೆ ಅವರು ನೇರವಾಗಿ ಓಡಿ ಬಂದು ಕಾಲಿಂದಲೇ ಕ್ರೀಸ್ ಟಚ್ ಮಾಡಿ ಓಡಿದ್ದರೂ ಒಂದು ರನ್ ಸಿಗುತ್ತಿತ್ತು. ಆದರೆ ರಿಝ್ವಾನ್ ಮೈ ಬಗ್ಗಿಸಿ ಕೈಯಿಂದಲೇ ಕ್ರೀಸ್ ಮುಟ್ಟಲು ಯತ್ನಿಸಿರುವುದು ಅಚ್ಚರಿಯೇ ಸರಿ.

ಇಂತಹದೊಂದು ಎಡವಟ್ಟು ಮಾಡಿರುವ ಮೊಹಮ್ಮದ್ ರಿಝ್ವಾನ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇನ್ನು ಈ ಪಂದ್ಯದಲ್ಲಿ ನ್ಯೂಝಿಲೆಂಡ್ ನೀಡಿದ 225 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು 7 ವಿಕೆಟ್ ಕಳೆದುಕೊಂಡು 179 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನ್ಯೂಝಿಲೆಂಡ್ ತಂಡವು 45 ರನ್ಗಳ ಭರ್ಜರಿ ಜಯ ಸಾಧಿಸಿದೆ.