
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ (Abhishek Sharma) ಆರ್ಭಟಿಸಿದ್ದಾರೆ. ಈ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್ ಆಗಿದೆ. ಹೀಗೆ ಉಡೀಸ್ ಆಗಿರುವುದು ಕೆರಿಬಿಯನ್ ದೈತ್ಯ ಆ್ಯಂಡ್ರೆ ರಸೆಲ್ ಬರೆದಿಟ್ಟಿದ್ದ ವಿಶ್ವ ದಾಖಲೆ ಎಂಬುದು ವಿಶೇಷ.

ನಾಗಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅಲ್ಲದೆ ಕೇವಲ 35 ಎಸೆತಗಳಲ್ಲಿ 8 ಸಿಕ್ಸ್, 5 ಫೋರ್ ಗಳೊಂದಿಗೆ 84 ರನ್ ಚಚ್ಚಿದ್ದರು.

ಈ 84 ರನ್ ಗಳೊಂದಿಗೆ ಅಭಿಷೇಕ್ ಶರ್ಮಾ ಟಿ೨೦ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ್ದಾರೆ. ಅದು ಕೂಡ ಅತೀ ವೇಗವಾಗಿ. ಅಂದರೆ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ 5 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ ಹೆಸರಿನಲ್ಲಿತ್ತು. ರಸೆಲ್ ಕೇವಲ 2942 ಎಸೆತಗಳಲ್ಲಿ 5000 ರನ್ ಪೂರೈಸಿದ್ದರು. ಈ ಮೂಲಕ 3 ಸಾವಿರಕ್ಕಿಂತ ಕಡಿಮೆ ಎಸೆತಗಳಲ್ಲಿ 5 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಧೂಳೀಪಟ ಮಾಡಿದ್ದಾರೆ. ಅಭಿ ಕೇವಲ 2898 ಎಸೆತಗಳಲ್ಲಿ 5000 ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 5 ರನ್ ಪೂರೈಸಿದ ವಿಶ್ವ ದಾಖಲೆಯನ್ನು ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ.