
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಇನ್ನು ಈ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರನಿಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿದೆ.

ನ್ಯೂಜಿಲೆಂಡ್ ತಂಡದಲ್ಲಿ ಸ್ಪಿನ್ನರ್ ಆಗಿ ಆಡುತ್ತಿರುವ ಆದಿತ್ಯ ಅಶೋಕ್ ತಮಿಳುನಾಡು ಮೂಲದವರಾಗಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ಆತಿದ್ಯಗೆ ನಾಲ್ಕು ವರ್ಷವಿರುವಾಗ ಅವರ ಕುಟುಂಬ ಉದ್ಯೋಗ ಹುಡುಕುತ್ತಾ ಆಕ್ಲೆಂಡ್‌ನಲ್ಲಿ ನೆಲೆ ಕಂಡುಕೊಂಡಿತು. ಕ್ರಮೇಣ ಕ್ರಿಕೆಟ್ನತ್ತ ಒಲವು ಹೆಚ್ಚಿಸಿಕೊಂಡ ಆದಿತ್ಯ ಆಕ್ಲೆಂಡ್‌ನ ದೇಶೀಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ಪಡೆದರು.

ಆ ನಂತರ 2020 ರ ಅಂಡರ್-19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಆದಿತ್ಯ, ಡಿಸೆಂಬರ್ 2021 ರಲ್ಲಿ ಆಕ್ಲೆಂಡ್ ಪರ ತಮ್ಮ ವೃತ್ತಿಪರ ಟಿ20 ಕ್ರಿಕೆಟ್ ಪದಾರ್ಪಣೆ ಮಾಡಿದರು. ಆ ಬಳಿಕ ಮೂರು ಸ್ವರೂಪಗಳಲ್ಲಿ ತಂಡದ ನಿಯಮಿತ ಸದಸ್ಯರಾದರು. 2022-23 ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆದಿತ್ಯಗೆ ವರ್ಷದ ನ್ಯೂಜಿಲೆಂಡ್ ಯುವ ಕ್ರಿಕೆಟಿಗ ಪ್ರಶಸ್ತಿಯೂ ಲಭಿಸಿತು.

ನ್ಯೂಜಿಲೆಂಡ್ ಸೀನಿಯರ್ ತಂಡದೊಂದಿಗೆ ಮೊಟ್ಟ ಮೊದಲ ಬಾರಿಗೆ ಯುಇಎ ಪ್ರವಾಸ ಮಾಡಿದ್ದ ಆದಿತ್ಯ, ಆ ಪ್ರವಾಸದಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು. ನಂತರ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಮೂರು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆದಿತ್ಯ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ಆದಿತ್ಯ ಅಶೋಕ್ ಪ್ರಸ್ತುತ ನ್ಯೂಜಿಲೆಂಡ್ನಲ್ಲಿ ನೆಲೆಸಿದ್ದರೂ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಅವರು ತಮ್ಮ ಕೈ ಮೇಲೆ ರಜನಿಕಾಂತ್ ಅವರ ‘ಪಡಯಪ್ಪ’ ಚಿತ್ರದ ಡೈಲಾಗ್ ಒಂದನ್ನು ಅಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನೊಂದು ಅಚ್ಚರಿ ಸಂಗತಿಯೆಂದರೆ ಆದಿತ್ಯ ಅವರ ದಿವಂಗತ ಅಜ್ಜನೊಂದಿಗೆ ನೋಡಿದ ಕೊನೆಯ ಚಿತ್ರವೂ ಇದೇ ಆಗಿತ್ತು.