
ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 70 ರನ್ಗಳ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಸೇಡುಕೂಡ ತೀರಿಸಿಕೊಂಡಿತು.

ಭಾರತ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 7 ವಿಕೆಟ್ ಕಿತ್ತು ಮಿಂಚಿದರೆ, ಬ್ಯಾಟಿಂಗ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಶತಕ ಸಿಡಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ 50ನೇ ಏಕದಿನ ಶತಕಗಳನ್ನು ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಕೊಹ್ಲಿಯ ಸಾಧನೆಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.

ಸಚಿನ್ ತೆಂಡೂಲ್ಕರ್ ತನ್ನ ದಾಖಲೆಯನ್ನು ಮುರಿದ ಕೊಹ್ಲಿಯನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿ ದಾಖಲೆಯನ್ನು ಕೊಂಡಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಂಡಿರುವ ಅನುಷ್ಕಾ ನೀನು ದೇವರ ಮಗು ಎಂದು ಹೇಳಿದ್ದಾರೆ.

"ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜೊತೆಗೆ ವಿರಾಟ್ ಕೊಹ್ಲಿಯ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞನಾಗಿದ್ದೇನೆ. ಮುಂಬರುವ ದಿನಗಳಲ್ಲಿ ವಿರಾಟ್ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಗಳಿಸಿ, ಬೆಳವಣಿಗೆ ಹೊಂದಲಿ. ನೀವು ನಿಜವಾಗಿಯೂ ದೇವರ ಮಗು" ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಸಚಿನ್ ಅವರು, ನಾನು ನಿಮ್ಮನ್ನು (ವಿರಾಟ್ ಕೊಹ್ಲಿ) ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಎಂದು ನಿಮಗೆ ಹೇಳಿದ್ದರು. ನೀವು ಹಾಗೆ ಮಾಡಲು ಬಂದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ಸಹ ನಗು ತಡೆಯಲಾಗಲಿಲ್ಲ. ಆದರೆ ಇಂದು ನೀವು ನನ್ನ ಹೃದಯವನ್ನು ಮುಟ್ಟಿದ್ದೀರಿ. ಅಂದಿನ ಚಿಕ್ಕ ಹುಡುಗ ‘ವಿರಾಟ್’ ಆಗಿ ಬೆಳೆದಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸೌರವ್ ಗಂಗೂಲಿ ಕೂಡ ಕೊಹ್ಲಿ ದಾಖಲೆ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸಿದ್ದು, ‘ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ಈ ಸಾಧನೆಯನ್ನು ಹಿಂದಿಕ್ಕಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಮತ್ತು ವಿರಾಟ್ ಕೊಹ್ಲಿ ತಮ್ಮ ಸಾಧನೆಯ ಪಯಣ ಇನ್ನು ಮುಗಿದಿಲ್ಲ ಎಂದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸೆಮೀಸ್ನಲ್ಲಿ 117 ರನ್ ಗಳಿಸುವ ಮೂಲಕ ಕೊಹ್ಲಿ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು. 2003ರಲ್ಲಿ ಸಚಿನ್ 673 ರನ್ ಗಳಿಸಿದ್ದರೆ, 2023ರ ಏಕದಿನ ವಿಶ್ವಕಪ್‌ನ 10 ಪಂದ್ಯಗಳಲ್ಲಿ ಕೊಹ್ಲಿ ಒಟ್ಟು 711 ರನ್ ಗಳಿಸಿದ್ದಾರೆ.