
ಏಷ್ಯಾಕಪ್ 2023 ಟೂರ್ನಿಗೆ ಈಗಾಗಲೇ ಚಾಲನೆ ಸಿಕ್ಕಾಗಿದೆ. ಆಗಸ್ಟ್ 30 ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕಿಸ್ತಾನ ದಾಖಲೆಯ ಗೆಲುವು ಕಾಣುವ ಮೂಲಕ ಭರ್ಜರಿ ಶುಭಾರಂಭ ಮಾಡಿತು. ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಅಮೋಘ ಗೆಲುವು ಕಂಡಿತು.

ಶನಿವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸಲಾಗಿದೆ. ಲಂಕಾದ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಆದರೆ, ಏಷ್ಯಾಕಪ್‌ನಲ್ಲಿ ಇಂದು ಪಂದ್ಯವನ್ನು ಆಯೋಜಿಸಲಾಗಿಲ್ಲ. ಯಾವುದೇ ಪಂದ್ಯ ಏಷ್ಯಾಕಪ್‌ನಲ್ಲಿ ಇಂದು ನಡೆಯುತ್ತಿಲ್ಲ. ಇದಕ್ಕೆ ಕಾರಣವಿದೆ.

ಏಷ್ಯಾಕಪ್‌ನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿವೆ. ಈ ಆರು ತಂಡಗಳನ್ನು ತಲಾ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಾಲ್ಕು ತಂಡಗಳು ಈಗಾಗಲೇ ಆಡಿದೆ. ಆದರೆ, ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಪಂದ್ಯಗಳಿಗಾಗಿ ತಂಡಗಳು ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಪ್ರಯಾಣ ನಡೆಸಬೇಕಿದೆ. ಹೀಗಾಗಿ ಶುಕ್ರವಾರ ವಿಶ್ರಾಂತಿಯ ದಿನವಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ ಮುಲ್ತಾನ್‌ನಲ್ಲಿ ನೇಪಾಳ ವಿರುದ್ಧದ ಆರಂಭಿಕ ಪಂದ್ಯದ ನಂತರ ಇದೀಗ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದೆ. ಬಾಬರ್ ಪಡೆ ಭಾರತ ವಿರುದ್ಧ ಶನಿವಾರದಂದು ಪಂದ್ಯವನ್ನು ಆಡಲಿದೆ. ಹೀಗಾಗಿ ಇಂದು ಏಷ್ಯಾಕಪ್‌ನಲ್ಲಿ ಯಾವುದೇ ಪಂದ್ಯವನ್ನು ಆಯೋಜಿಸಲಾಗಿಲ್ಲ.

ಶನಿವಾರ ನಡೆಯಲಿರುವ ಇಂಡೋ-ಪಾಕ್ ಕದನ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾರತ ಈಗಾಗಲೇ ಲಂಕಾನ್ನರ ನಾಡಿಗೆ ತಲುಪಿದ್ದು, ಇಂದು ಅಭ್ಯಾಸ ಶುರು ಮಾಡಲಿದೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ.

ಆದರೆ, ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಕಾಟ ಇರಲಿದೆ ಎಂದು ಹೇಳಲಾಗಿದೆ. ವೆದರ್ ಡಾಟ್ ಕಾಮ್ ವರದಿ ಪ್ರಕಾರ, ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಮಳೆಯ ಭೀತಿಯಿದೆ. ಈ ಪಂದ್ಯದ ವೇಳೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವೆಬ್‌ಸೈಟ್ ಹಾಗೂ ಹಲವು ಹವಾಮಾನ ವರದಿಗಳು ಹೇಳಿದೆ.

ತನ್ನ ಮೊದಲ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಿದ್ದ ಬಾಬರ್ ಪಡೆ 238 ರನ್ಗಳ ದಾಖಲೆ ಗೆಲುವು ಸಾಧಿಸಿತ್ತು. ಪಾಕಿಸ್ತಾನಕ್ಕೆ ಇದು ಎರಡನೇ ಪಂದ್ಯವಾದರೆ ಭಾರತಕ್ಕೆ ಇಂದು ಮೊದಲ ಪಂದ್ಯ. ಪಾಕ್ ವಿರುದ್ಧದ ಪಂದ್ಯದ ನಂತರ ಟೀಮ್ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ನೇಪಾಳ ವಿರುದ್ಧ ಸೆಪ್ಟೆಂಬರ್ 4 ರಂದು ಆಡಲಿದೆ.

ಏಷ್ಯಾಕಪ್ನ ಎಲ್ಲ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ನೇರ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಖರೀದಿಸಿದೆ. ಹೀಗಾಗಿ ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ವಿವಿಧ ಭಾಷೆಗಳಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ OTT ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲಿ ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದಾಗಿದೆ.