
2025 ರ ಏಷ್ಯಾಕಪ್ನ ಆರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವನ್ನು 127 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಮೊದಲ ಪಂದ್ಯದಂತೆ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಸ್ಪಿನ್ನರ್‌ಗಳು ಎದುರಾಳಿಗಳನ್ನು ಕಾಡಿದರು. ಆದರೆ ಮೊದಲ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕ್ ಆರಂಭಿಕ ಸೈಮ್ ಆಯೂಬ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಐತಿಹಾಸಿಕ ಸಾಧನೆ ಮಾಡಿದರು. ಈ ಮೂಲಕ ಇದಕ್ಕೂ ಮೊದಲು ಪಾಕಿಸ್ತಾನ ವಿರುದ್ಧ ಯಾವುದೇ ಭಾರತೀಯ ಬೌಲರ್ ಮಾಡಲು ಸಾಧ್ಯವಾಗದ ಸಾಧನೆಯನ್ನು ಹಾರ್ದಿಕ್ ಪಾಂಡ್ಯ ಮಾಡಿದರು.

ಪಂದ್ಯದ ಆರಂಭದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ವಹಿಸಿದರು. ನಾಯಕನ ನಂಬಿಕೆಗೆ ತಕ್ಕಂತೆ ಬೌಲಿಂಗ್ ಮಾಡಿದ ಪಾಂಡ್ಯ, ಪಾಕಿಸ್ತಾನದ ಆರಂಭಿಕ ಆಟಗಾರ ಸೈಮ್ ಅಯೂಬ್ ಅವರ ವಿಕೆಟ್ ಉರುಳಿಸಿದರು.

ಈ ವಿಕೆಟ್‌ನೊಂದಿಗೆ, ಹಾರ್ದಿಕ್ ಪಂದ್ಯದ ಆರಂಭದಲ್ಲಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದು ಮಾತ್ರವಲ್ಲದೆ, ತಮ್ಮ ಹೆಸರಿನಲ್ಲಿ ಒಂದು ವಿಶಿಷ್ಟ ದಾಖಲೆಯನ್ನೂ ನಿರ್ಮಿಸಿದರು. ವಾಸ್ತವವಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಭಾರತೀಯ ಬೌಲರ್ ಒಬ್ಬ ವಿಕೆಟ್ ಪಡೆದ ದಾಖಲೆ ಹಾರ್ದಿಕ್ ಪಾಲಾಯಿತು.

ಹಾರ್ದಿಕ್ ಪಾಂಡ್ಯ ನಂತರ, ಜಸ್ಪ್ರೀತ್ ಬುಮ್ರಾ ಕೂಡ ಉತ್ತಮ ಆರಂಭ ನೀಡಿದರು. ಪಂದ್ಯದ ಎರಡನೇ ಓವರ್‌ನಲ್ಲಿ ಅವರು ಪಾಕಿಸ್ತಾನಕ್ಕೆ ಎರಡನೇ ಹೊಡೆತ ನೀಡಿದರು. ಜಸ್ಪ್ರೀತ್ ಬುಮ್ರಾ ತಮ್ಮ ಸ್ಪೆಲ್‌ನ ಎರಡನೇ ಎಸೆತದಲ್ಲಿ ಮೊಹಮ್ಮದ್ ಹ್ಯಾರಿಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮೊಹಮ್ಮದ್ ಹ್ಯಾರಿಸ್ ಬುಮ್ರಾ ಚೆಂಡಿನ ಮೇಲೆ ದೊಡ್ಡ ಶಾಟ್ ಆಡಲು ಪ್ರಯತ್ನಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಇದರಿಂದಾಗಿ ಪಾಕಿಸ್ತಾನ ಪಂದ್ಯದ ಮೊದಲ 8 ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡಿತು.