
ಏಷ್ಯಾಕಪ್ 2025 ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಮುಖಾಮುಖಿ ಸೆಪ್ಟೆಂಬರ್ 14 ರಂದು ನಡೆಯಲಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರ ಮೇಲುಗೈ ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳ ಟಿ20 ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 13 ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. ಇನ್ನು ಟಿ20 ಏಷ್ಯಾಕಪ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿತ್ತು. 2022 ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಆದರೆ ಆ ನಂತರ ನಡೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದೆ.

ಏಷ್ಯಾಕಪ್‌ನ ಏಕದಿನ ಸ್ವರೂಪದ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳ ನಡುವೆ ಒಟ್ಟು 15 ಪಂದ್ಯಗಳು ನಡೆದಿವೆ, ಅದರಲ್ಲಿ 5 ಪಂದ್ಯಗಳನ್ನು ಪಾಕಿಸ್ತಾನ ಗೆದ್ದಿದ್ದರೆ, 8 ಪಂದ್ಯಗಳನ್ನು ಭಾರತ ಗೆದ್ದಿದೆ. ಉಳಿದ 2 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಏಷ್ಯಾಕಪ್ ಏಕದಿನ ಸ್ವರೂಪದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ ಬಾರಿಗೆ 2014 ರಲ್ಲಿ ಗೆಲುವು ಸಾಧಿಸಿತ್ತು.

ಪ್ರಸ್ತುತ ತಂಡಗಳ ಬಲಾಬಲದ ಬಗ್ಗೆ ಹೇಳುವುದಾದರೆ, ಭಾರತ ತಂಡ ಪಾಕಿಸ್ತಾನಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಭಾರತ ವಿಶ್ವದ ನಂಬರ್ 1 ಟಿ20 ತಂಡ. ವಿಶ್ವದ ಟಾಪ್ 2 ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಏಷ್ಯಾಕಪ್‌ನಲ್ಲಿ ಆಡುತ್ತಿದ್ದಾರೆ. ಅವರಲ್ಲದೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಸಹ ತಂಡದಲ್ಲಿದ್ದಾರೆ.

ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್ ಕೂಡ ತಂಡದಲ್ಲಿದ್ದಾರೆ. ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಕುಲ್ದೀಪ್ ಯಾದವ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಯುಎಇ ವಿರುದ್ಧ ಕೇವಲ 7 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ಸಂಚಲನ ಸೃಷ್ಟಿಸಿದ್ದಾರೆ.

ಇನ್ನು ಪಾಕ್ ತಂಡದ ಬಗ್ಗೆ ಹೇಳುವುದಾದರೆ.. ಈ ಮೊದಲು ನಡೆದಿದ್ದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿದೆ. ಹಾಗೆಯೇ ಕಳೆದ ಐದು ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ನಾಲ್ಕರಲ್ಲಿ ಗೆದ್ದಿದೆ. ಕುತೂಹಲಕಾರಿ ವಿಷಯವೆಂದರೆ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಈ ಎಲ್ಲಾ ಗೆಲುವುಗಳನ್ನು ಸಾಧಿಸಿದೆ. ಆದಾಗ್ಯೂ, ದುಬೈನಲ್ಲಿ ನಡೆದ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ. ಈಗ ಟೀಂ ಇಂಡಿಯಾ ವಿರುದ್ಧ ಅದರ ಪ್ರದರ್ಶನ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ?