
ಬಿಗ್ ಬ್ಯಾಷ್ ಲೀಗ್ನಲ್ಲಿ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಅತ್ಯಂತ ಹೀನಾಯ ದಾಖಲೆ ನಿರ್ಮಿಸಿದ್ದರು. ಅದು ಸಹ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸುವ ಮೂಲಕ ಎಂಬುದೇ ಅಚ್ಚರಿ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಬಿಬಿಎಲ್ನ 18ನೇ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಸಿಡ್ನಿ ಸಿಕ್ಸರ್ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಬಿಗ್ ಬ್ಯಾಷ್ ಲೀಗ್ನಲ್ಲಿ ಅತ್ಯಂತ ನಿಧಾನವಾಗಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಹೆಸರಿನಲ್ಲಿತ್ತು. ಹೊಬಾರ್ಟ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ಪರ ಕಣಕ್ಕಿಳಿದ ಬ್ಯಾಂಕ್ರಾಫ್ಟ್ 41 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ದರು. ಈ ಮೂಲಕ ಬಿಬಿಎಲ್ನಲ್ಲಿ ಅತ್ಯಂತ ನಿಧಾನವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಸಿಡ್ನಿ ಸಿಕ್ಸರ್ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 44 ಎಸೆತಗಳನ್ನು. ಈ ಮೂಲಕ ಬಿಗ್ ಬ್ಯಾಷ್ ಸೀಸನ್-15 ರಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಬಾಬರ್ ಆಝಂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಎರಡು ಅರ್ಧಶತಕಗಳನ್ನು 40 ಕ್ಕಿಂತ ಹೆಚ್ಚಿನ ಎಸೆತಗಳಲ್ಲಿ ಪೂರೈಸಿರುವುದು ಅಚ್ಚರಿ. ಅಂದರೆ ಮೊದಲ ಅರ್ಧಶತಕ 41 ಎಸೆತಗಳಲ್ಲಿ ಮೂಡಿಬಂದರೆ, ಎರಡನೇ ಅರ್ಧಶತಕಕ್ಕಾಗಿ 44 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
Published On - 7:40 am, Mon, 5 January 26