
ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನವೇ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ತಂಡದ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ರಬಾಡ ತಮ್ಮ ವೃತ್ತಿಜೀವನದಲ್ಲಿ 300 ವಿಕೆಟ್‌ಗಳನ್ನು ಪೂರೈಸಿದರು.

ಮುಶ್ಫಿಕರ್ ರಹೀಮ್ ಅವರ ವಿಕೆಟ್ ಪಡೆಯುವ ಮೂಲಕ ರಬಾಡ, ವಿಕೆಟ್‌ಗಳ ತ್ರಿಶತಕ ಪೂರೈಸಿದರು. ಇದರೊಂದಿಗೆ ರಬಾಡ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆ ಬರೆದಿದ್ದು, ಈ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ದಾಖಲೆಯನ್ನು ಸಹ ರಬಾಡ ಮುರಿದಿದ್ದಾರೆ.

ರಬಾಡ ಈ ಮೈಲಿಗಲ್ಲನ್ನು ತಲುಪಲು ಕೇವಲ 11817 ಎಸೆತಗಳನ್ನು ತೆಗೆದುಕೊಳ್ಳುವ ಮೂಲಕ ದೀರ್ಘ ಸ್ವರೂಪದಲ್ಲಿ 300 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದಿಗ್ಗಜ ವೇಗಿ ವಕಾರ್ ಯೂನಿಸ್ ತಮ್ಮ ವೃತ್ತಿ ಜೀವನದಲ್ಲಿ 12,602 ಎಸೆತಗಳಲ್ಲಿ 300 ವಿಕೆಟ್‌ಗಳ ಗಡಿ ದಾಟಿದ ದಾಖಲೆ ಮಾಡಿದ್ದರು.

ರಬಾಡ ತಮ್ಮ 65 ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್‌ಗಳನ್ನು ಪೂರೈಸಿದ್ದು, ಇದರ ಜೊತೆಗೆ ಅನಿಲ್ ಕುಂಬ್ಳೆ ಅವರನ್ನು ಸಹ ಹಿಂದಿಕ್ಕಿದ್ದಾರೆ. ಕನ್ನಡಿಗ ಕುಂಬ್ಳೆ ತಮ್ಮ 66 ನೇ ಟೆಸ್ಟ್ ಪಂದ್ಯದಲ್ಲಿ 300 ನೇ ಟೆಸ್ಟ್ ವಿಕೆಟ್ ಪೂರೈಸಿದ್ದರು.

ಇನ್ನು ಅತಿ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 300 ಟೆಸ್ಟ್ ವಿಕೆಟ್ ಪೂರೈಸಿದ ಬೌಲರ್ಗಳ ಬಗ್ಗೆ ಹೇಳುವುದಾದರೆ.. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಆರ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಅಶ್ವಿನ್ ಕೇವಲ 54 ಟೆಸ್ಟ್ ಪಂದ್ಯಗಳಲ್ಲಿ ತ್ರಿಶತಕ ಬಾರಿಸಿದ್ದರು.

ಡೆನ್ನಿಸ್ ಲಿಲ್ಲಿ 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಮುತ್ತಯ್ಯ ಮುರಳೀಧರನ್ 58 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ಪರ ಡೇಲ್ ಸ್ಟೇಯ್ನ್ 61 ಟೆಸ್ಟ್ ಪಂದ್ಯಗಳಲ್ಲಿ 300 ವಿಕೆಟ್ ಕಬಳಿಸಿದ್ದರೆ, ಇದೀಗ ರಬಾಡ ತಮ್ಮ 65ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.