
ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದೆ. ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್‌ರಂತಹ ಸ್ಟಾರ್ ಆಟಗಾರರ ಪ್ರದರ್ಶನ ತೀರ ಕಳಪೆಯಾಗಿದೆ. ಟಿ20 ಕ್ರಿಕೆಟ್‌ನಲ್ಲಿ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ತಮ್ಮ ಏಕದಿನ ಮತ್ತು ಟೆಸ್ಟ್ ತರಹದ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.

ಇದಕ್ಕೆ ಇತ್ತೀಚಿನ ಉದಾಹರಣೆ ಸಿಡ್ನಿ ಸಿಕ್ಸರ್ಸ್ ವರ್ಸಸ್ ಹೋಬಾರ್ಟ್ ಹರಿಕೇನ್ಸ್ ಪಂದ್ಯದಲ್ಲಿ ಕಂಡುಬಂದಿತು. ಜನವರಿ 11 ರ ಭಾನುವಾರದಂದು ನಡೆದ ಈ ಪಂದ್ಯ ಕೇವಲ ಐದು ಓವರ್ ಮಾತ್ರ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಪರ ಬಾಬರ್ ಮತ್ತು ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ, ಪವರ್‌ಪ್ಲೇ ಮುಗಿಯುವ ಮೊದಲೇ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಆದಾಗ್ಯೂ ಮಳೆಯಿಂದ ಪಂದ್ಯ ನಿಲ್ಲುವುದಕ್ಕೂ ಮುನ್ನ ಸಿಡ್ನಿ ತಂಡ ಐದು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 32 ರನ್ ಗಳಿಸಿತ್ತು. ಈ ಪಂದ್ಯದಲ್ಲೂ ನಿದಾನಗತಿಯ ಬ್ಯಾಟಿಂಗ್ ಮಾಡಿದ ಬಾಬರ್ ಆಝಂ 14 ಎಸೆತಗಳಲ್ಲಿ ಒಂದು ಬೌಂಡರಿ ಸೇರಿದಂತೆ ಕೇವಲ 9 ರನ್ ಕಲೆಹಾಕಿದರು.

ಬಾಬರ್ ಈ ಲೀಗ್ ಆರಂಭದಿಂದಲೂ ಆಡುತ್ತಿದ್ದು, ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಮೂರು ದಿನಗಳ ಹಿಂದೆ ಟೆಸ್ಟ್ ಸರಣಿಯಿಂದ ಹಿಂತಿರುಗಿದ ಸ್ಟೀವ್ ಸ್ಮಿತ್, ಬಾಬರ್ಗಿಂತಲೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 16 ಎಸೆತಗಳಲ್ಲಿ 19 ರನ್ ಗಳಿಸಿದರು.

ಮೇಲೆ ಹೇಳಿದಂತೆ ಬಾಬರ್ ಈ ಪಂದ್ಯದಲ್ಲಿ ಮಾತ್ರವಲ್ಲ, ಬದಲಿಗೆ ಪಂದ್ಯಾವಳಿಯ ಉದ್ದಕ್ಕೂ ರನ್ ಗಳಿಸಲು ಹೆಣಗಾಡಿದ್ದಾರೆ. ಇಲ್ಲಿಯವರೆಗೆ ಎಂಟು ಇನ್ನಿಂಗ್ಸ್‌ಗಳನ್ನಾಡಿರುವ ಬಾಬರ್ ಕೇವಲ 154 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ, ಆದರೆ ಅವರ ಸ್ಟ್ರೈಕ್ ರೇಟ್ ಕೇವಲ 104.05 ಆಗಿದ್ದು, ಸ್ಟ್ರೈಕ್ ರೇಟ್ ವಿಷಯದಲ್ಲಿ ಬಾಬರ್ ಲೀಗ್‌ನಲ್ಲಿ 66 ನೇ ಸ್ಥಾನದಲ್ಲಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ಬಾಬರ್ಗೆ ಹೊಲಿಸಿದರೆ, ಬೌಲರ್‌ಗಳೇ ಅವರಿಗಿಂತ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬಾಬರ್ ಜೊತೆಗೆ ಮೊಹಮ್ಮದ್ ರಿಜ್ವಾನ್ ಕೂಡ ಆಮೆಗತಿಯ ಬ್ಯಾಟಿಂಗ್ ಮೂಲಕ ತಂಡಕ್ಕೆ ತಲೆನೋವಾಗಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ರಿಜ್ವಾನ್, ಆಡಿರುವ ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 141 ರನ್ ಗಳಿಸಿದ್ದಾರೆ. ಕೇವಲ 100 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ರಿಜ್ವಾನ್ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ.