
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆ ಆಗುವ ಮಾತುಗಳು ಕೇಳಿಬರುತ್ತಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ.

ಮುಂದಿನ ಟೆಸ್ಟ್ ಪಂದ್ಯದಿಂದ ಫಾರ್ಮ್ನಲ್ಲಿ ಇಲ್ಲದ ಕೆಲ ಆಟಗಾರರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಇದರ ನಡುವೆ ಐದು ವರ್ಷಗಳ ಹಿಂದೆ ಕೊನೆಯದಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದ ಆಟಗಾರನನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿ ಬಿಸಿಸಿಐ ಇದೆ.

ಟೆಸ್ಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ಕರೆತರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚರ್ಚಿಸಲಿದೆ ಎನ್ನಲಾಗಿದೆ. ಈ ಬಗ್ಗೆ ಸದ್ಯದಲ್ಲೇ ತಂಡ ಘೋಷಣೆಯಾಗಲಿದೆಯಂತೆ.

2018ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಹಾರ್ದಿಕ್ ಬಳಿಕ ಬೆನ್ನುನೋವಿನ ಸಮಸ್ಯೆಗಾಗಿ ಟೆಸ್ಟ್ ಕ್ರಿಕೆಟ್ನಿಂದ ದೂರವಿದ್ದರು. ದೀರ್ಘ ಸ್ಪೆಲ್ಗಳನ್ನು ನಿರ್ವಹಿಸಲು ಕಷ್ಟ ಎಂಬುದೇ ಟೆಸ್ಟ್ ಕರ್ತವ್ಯದಿಂದ ಮುಕ್ತಿ ಪಡೆಯಲು ಕಾರಣ. ಆದರೀಗ ಪಾಂಡ್ಯ ಫಿಟ್ ಆಗಿದ್ದಾರೆ. ಹೀಗಾಗಿ ತಂಡಕ್ಕೆ ಮರಳುವರೆಂಬ ಸುದ್ದಿ ಸೃಷ್ಟಿಯಾಗಿದೆ.

ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮಾತನಾಡಿದ್ದು, ಹಾರ್ದಿಕ್ ಖಂಡಿತವಾಗಿಯೂ ಆಯ್ಕೆಯಾಗುತ್ತಾರೆ. ಆದರೆ ಟೆಸ್ಟ್ ಕ್ರಿಕೆಟ್ಗೆ ಮರಳುವ ಕುರಿತು ಹಾರ್ದಿಕ್ ನಿರ್ಧಾರ ತೆಗೆದುಕೊಳ್ಳಬೇಕು. ಸೆಲೆಕ್ಟರ್ಗಳು ಪಾಂಡ್ಯ ಅವರನ್ನು ಮತ್ತೆ ಟೆಸ್ಟ್ ಜೆರ್ಸಿಯಲ್ಲಿ ನೋಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶಿವ್ ಸುಂದರ್ ದಾಸ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಇದೇ ಜೂನ್ 27 ರಂದು ಪ್ರಕಟ ಮಾಡಲಿದೆ. ಕೆರಿಬಿಯನ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಕೂಡ ನಡೆಯಲಿರುವ ಕಾರಣ ಹಾರ್ದಿಕ್ ಆಯ್ಕೆ ಆಗಬಹುದು ಎನ್ನಲಾಗಿದೆ. ಅತ್ತ ಹಾರ್ದಿಕ್ ಕೂಡ ನಾನು ಟೆಸ್ಟ್ ಕ್ರಿಕೆಟ್ ಆಡಬೇಕೆಂದರೆ ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿದ್ದಾರೆ.

2017ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಇದುವರೆಗೆ 11 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ 2018 ರಲ್ಲಿ ಟೆಸ್ಟ್ ಆಡಿದರು.

ಹಾರ್ದಿಕ್ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 532 ರನ್ ಗಳಿಸಿದ್ದು, ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಬೌಲರ್ ಆಗಿ 17 ವಿಕೆಟ್ ಕೂಡ ಕಬಳಿಸಿದ್ದಾರೆ.