ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ 25 ಕೋಟಿ ಫಾಲೋವರ್ಸ್ಗಳನ್ನು ಹೊಂದುವ ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ ಎನಿಸಿಕೊಂಡಿದ್ದ ಕಿಂಗ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದ್ದಾರೆ. ಕ್ರಿಕೆಟ್ನಲ್ಲಿ ದಾಖಲೆಯ ಸರಮಾಲೆಯನ್ನೇ ಹೊಂದಿರುವ ವಿರಾಟ್, ಆದಾಯ ಗಳಿಕೆಯಲ್ಲೂ ವರ್ಷದಿಂದ ವರ್ಷಕ್ಕೆ ದಾಖಲೆಯ ಏರಿಕೆ ಕಾಣುತ್ತಿದ್ದಾರೆ.
ಸ್ಟಾಕ್ ಗ್ರೋ ವರದಿ ಪ್ರಕಾರ ವಿರಾಟ್ ಕೊಹ್ಲಿ 1,050 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದು, ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಅತ್ಯಧಿಕ ಆದಾಯ ಹೊಂದಿದ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದಿದ್ದಾರೆ. ಹಾಗಿದ್ದರೆ ಸಾವಿರ ಕೋಟಿಗಳ ಒಡೆಯ ಕೊಹ್ಲಿಯ ಆದಾಯದ ಮೂಲ ಯಾವುದು? ಕೊಹ್ಲಿ ವಾರ್ಷಿಕವಾಗಿ ಎಷ್ಟು ಸಂಪಾದನೆ ಮಾಡುತ್ತಾರೆ ಎಂಬುದನ್ನು ನೋಡುವುದಾದರೆ..
ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್ನಲ್ಲೂ ಆಡುತ್ತಿರುವ ಕೊಹ್ಲಿ, ಬಿಸಿಸಿಐನ ವಾರ್ಷಿಕ ಒಪ್ಪಂದದಲ್ಲಿ A+ ಕ್ಯಾಟಗರಿ ಪಡೆದಿದ್ದಾರೆ. ಹೀಗಾಗಿ ಕೊಹ್ಲಿ ವಾರ್ಷಿಕವಾಗಿ ಬಿಸಿಸಿಐನಿಂದ 7 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅಲ್ಲದೆ ಕೊಹ್ಲಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಒಂದು ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಂದ್ಯ ಶುಲ್ಕ ಪಡೆಯುತ್ತಿದ್ದಾರೆ.
ಇದಲ್ಲದೆ, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕೊಹ್ಲಿ ವಾರ್ಷಿಕವಾಗಿ 15 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.
ಕ್ರಿಕೆಟ್ ಅಲ್ಲದೆ ಕೊಹ್ಲಿ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ ಏಳು ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಕೊಹ್ಲಿ 18 ಕ್ಕೂ ಹೆಚ್ಚು ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ವಾರ್ಷಿಕವಾಗಿ ರೂ 7.50 ರಿಂದ 10 ಕೋಟಿ ರೂ. ಪಡೆಯುತ್ತಾರೆ. ಇಂತಹ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ವಿರಾಟ್ ವಾರ್ಷಿಕವಾಗಿ ಸುಮಾರು 175 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಲು 8.9 ಕೋಟಿ ರೂ. ಚಾರ್ಜ್ ಮಾಡುತ್ತಾರೆ. ಹಾಗೆಯೇ ಟ್ವಿಟರ್‌ನಲ್ಲಿ ಪ್ರತಿ ಪೋಸ್ಟ್‌ಗೆ 2.5 ಕೋಟಿ ರೂ. ಪಡೆಯುತ್ತಿದ್ದಾರೆ.
ಇನ್ನು ಎರಡು ಐಷರಾಮಿ ಮನೆಗಳನ್ನು ಹೊಂದಿರುವ ಕೊಹ್ಲಿಯ ಮುಂಬೈನಲ್ಲಿರುವ ಮನೆಯ ಮೌಲ್ಯ ಸುಮಾರು 34 ಕೋಟಿ ಆಗಿದೆ. ಹಾಗೆಯೇ ಗುರುಗ್ರಾಮ್ನಲ್ಲಿರುವ ಕೊಹ್ಲಿಯ ಮನೆ ಸುಮಾರು 80 ಕೋಟಿ ಮೌಲ್ಯ ಹೊಂದಿದೆ. ಇದರೊಂದಿಗೆ ಹಲವಾರು ದುಬಾರಿ ಕಾರುಗಳ ಒಡೆಯನಾಗಿರುವ ಕೊಹ್ಲಿ ಬಳಿ 31 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುಗಳಿವೆ.
ಕ್ರಿಕೆಟ್ ಹೊರತುಪಡಿಸಿ ಕೊಹ್ಲಿ, ಇತರ ಕ್ರೀಡೆಗಳ ಮೇಲು ಹೆಚ್ಚು ಆಸಕ್ತಿ ಹೊಂದಿದ್ದು, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುವ ಎಫ್‌ಸಿ ಗೋವಾ, ಟೆನಿಸ್ ತಂಡ ಮತ್ತು ಕುಸ್ತಿ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.
Published On - 12:55 pm, Sun, 18 June 23