
ಝಿಂಬಾಬ್ವೆ ತಂಡದ ವಿಕೆಟ್ ಕೀಪರ್ ಬ್ಯಾಟರ್ ಬ್ರೆಂಡನ್ ಟೇಲರ್ (Brendan Taylor) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ತಮ್ಮ 39ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಹರಾರೆಯಲ್ಲಿ ನಡೆದ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ಮತ್ತು ಬೋಟ್ಸ್ವಾನಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೆಂಡನ್ ಟೇಲರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಟೇಲರ್ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಅಲ್ಲದೆ ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ ಬ್ರೆಂಡನ್ ಟೇಲರ್ 5 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ (ಒಟ್ಟು 20 ಬೌಂಡರಿ) 123 ರನ್ ಗಳಿಸಿದರು. ಈ ಭರ್ಜರಿ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ದಾಖಲೆ ಬ್ರೆಂಡನ್ ಟೇಲರ್ ಪಾಲಾಯಿತು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಝಿಂಬಾಬ್ವೆ ತಂಡದ ಸಿಕಂದರ್ ರಾಝ ಹೆಸರಿನಲ್ಲಿತ್ತು. 2024 ರಲ್ಲಿ ಗಾಂಬಿಯಾ ವಿರುದ್ಧ ಸಿಕಂದರ್ ರಾಝ ಶತಕ ಬಾರಿಸಿದಾಗ ಅವರ ವಯಸ್ಸು 38 ವರ್ಷ. ಈ ಮೂಲಕ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಪರ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಬ್ರೆಂಡನ್ ಟೇಲರ್ ಮುರಿದಿದ್ದಾರೆ. 39ನೇ ವಯಸ್ಸಿನಲ್ಲಿ ಬೋಟ್ಸ್ವಾನಾ ವಿರುದ್ಧ ಸಿಡಿಲಬ್ಬರದ ಸೆಂಚುರಿ ಸಿಡಿಸಿ ಟೇಲರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರ ಪರ ಟಿ20 ಶತಕ ಬಾರಿಸಿದ ವಿಶ್ವದ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.